"ಕಾಂಗ್ರೆಸ್‌ನವರು 91 ಬಾರಿ ನನ್ನನ್ನು ಬೈದಿದ್ದಾರೆ" : ಪ್ರಧಾನಿ ನರೇಂದ್ರ ಮೋದಿ

Karnataka Election 2023: ನನ್ನನ್ನು ಬೈಯ್ಯುವುದರಲ್ಲೇ ಕಾಂಗ್ರೆಸ್ ಸಮಯ ವ್ಯರ್ಥ ಮಾಡ್ತಿದೆ. ಚುನಾವಣೆ ಸಂದರ್ಭದಲ್ಲಿ ನನಗೆ ಮತ್ತೆ ಬೈಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.  

Written by - Prashobh Devanahalli | Edited by - Chetana Devarmani | Last Updated : Apr 29, 2023, 06:06 PM IST
  • ಕಾಂಗ್ರೆಸ್‌ನವರು 91 ಬಾರಿ ನನ್ನನ್ನು ಬೈದಿದ್ದಾರೆ
  • ನನ್ನನ್ನು ಬೈಯ್ಯುವುದರಲ್ಲೇ ಸಮಯ ವ್ಯರ್ಥ ಮಾಡ್ತಿದೆ
  • ಪ್ರಧಾನಿ ನರೇಂದ್ರ ಮೋದಿ ಹೇಳಿಕೆ
"ಕಾಂಗ್ರೆಸ್‌ನವರು 91 ಬಾರಿ ನನ್ನನ್ನು ಬೈದಿದ್ದಾರೆ" : ಪ್ರಧಾನಿ ನರೇಂದ್ರ ಮೋದಿ title=

ಹುಮನಾಬಾದ್ (ಬೀದರ್) : ಕಾಂಗ್ರೆಸ್ ಅವರು ಇದುವರೆಗೂ ನನ್ನನ್ನು 91 ಬಾರಿ ಅವಾಚ್ಯವಾಗಿ ಬೈದಿದ್ದಾರೆ. ಹಾಗೆ ನಿಂದಿಸಿದಾಗಲೆಲ್ಲಾ ಅವರರಿಗೆ ಶಿಕ್ಷೆ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಅವರು ಇಂದು ಬೀದರ್ ಜಿಲ್ಲೆಯ ಹುಮನಾಬಾದ್ ನಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು.

ಬೀದರ್ ನಿಂದ ವಿಧಾನಸಭಾ ಚುನಾವಣೆಗೆ ನನ್ನ ಪ್ರಚಾರ ಯಾತ್ರೆ ಶುರು ಆಗುತ್ತಿರುವುದು ನನ್ನ ಸೌಭ್ಯಾಗ್ಯ. ಭಗವಂತನ ಆಶೀರ್ವಾದ ಮತ್ತು ನಿಮ್ಮೆಲ್ಲರ ಸ್ನೇಹದಿಂದ ನನಗೆ ಯಾವಾಗಲೂ ನಿಮಗಾಗಿ ಕೆಲಸ ಮಾಡಲು ತಾಕತ್ತು ಸಿಗುತ್ತದೆ. ಕರ್ನಾಟಕದ ಕಿರೀಟವಾದ ಬೀದರ್ ಜನತೆಯ ಆಶೀರ್ವಾದ ನಾನು ಪ್ರಧಾನಿ ಅಭ್ಯರ್ಥಿಯಾದಾಗಲೇ ಸಿಕ್ಕಿದೆ. ನೀವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದು “ಈ ಬಾರಿಯ ನಿರ್ಧಾರ, ಬಹುಮತ ಬಿಜೆಪಿ ಸರ್ಕಾರ” ಎಂದು ಇಡೀ ದೇಶಕ್ಕೆ ಸಂದೇಶ ನೀಡಿದ್ದೀರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್‌ಗೆ ಸೋಲು ಕಟ್ಟಿಟ್ಟ ಬುತ್ತಿ : ಸಿಎಂ ಬೊಮ್ಮಾಯಿ‌ ಭವಿಷ್ಯ

ಕರ್ನಾಟಕವನ್ನು ನಂಬರ್ 1 ರಾಜ್ಯ ಮಾಡುತ್ತೇವೆ : 

ಕರ್ನಾಟಕದ ಈ ಚುನಾವಣೆ ಕೇವಲ 5 ವರ್ಷದ ಆಡಳಿತಕ್ಕೆ ಸರ್ಕಾರ ಮಾಡುವ ಚುನಾವಣೆ ಅಲ್ಲ. ಇದು ಕರ್ನಾಟಕವನ್ನು ದೇಶದಲ್ಲಿ ನಂಬರ್ 1 ರಾಜ್ಯ ಮಾಡುವ ಚುನಾವಣೆ. ಇದು ವಿಕಸಿತ ಭಾರತಕ್ಕೆ ಕರ್ನಾಟಕದ ಭೂಮಿಕೆಯನ್ನು ತಯಾರು ಮಾಡುವ ಚುನಾವಣೆ. ಕರ್ನಾಟಕದ ಮೂಲೆ ಮೂಲೆಗಳಲ್ಲೂ ವಿಕಾಸವಾದಾಗ ಮಾತ್ರ ಭಾರತ ವಿಕಾಸವಾಗುತ್ತದೆ. ನೀವೆಲ್ಲರೂ ಹೈವೇ ಎಕ್ಸ್ಪ್ರೆಸ್ ವೇ ವಿಸ್ತಾರವಾಗುವ, ಮೆಟ್ರೋ ಅನುಕೂಲತೆ ಹೆಚ್ಚು ಜಿಲ್ಲೆಗಳಿಗೆ ವಿಸ್ತರಿಸುವ, ಹೆಚ್ಚು ಕಡೆಗಳಲ್ಲಿ ವಂದೇ ಭಾರತ್ ರೈಲುಗಳು ಸಂಚರಿಸುವ, ಪ್ರತಿ ವ್ಯವಸಾಯ ಜಮೀನಲ್ಲಿ ಆಧುನಿಕ ಉಪಕರಣಗಳು ಇರುವ ಕರ್ನಾಟಕವನ್ನು ನೀವು ನಿರೀಕ್ಷೆ ಮಾಡುತ್ತಿದ್ದೀರಿ ಎಂದು ನನಗೆ ಗೊತ್ತು. ಹಿಂದಿನ 5 ವರ್ಷಗಳಲ್ಲಿ ಸಾಮಾನ್ಯ ಮನುಷ್ಯನೂ ಕರ್ನಾಟಕದಲ್ಲಿ ವಿಕಾಸ ಪರ್ವವನ್ನು ನೋಡಿದ್ದಾನೆ. ನಿಮ್ಮ ಕನಸನ್ನು ನನಸು ಮಾಡುವ ಸಂಕಲ್ಪ ಬಿಜೆಪಿ ತೆಗೆದುಕೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ರಾಜ್ಯಕ್ಕೆ ಡಬಲ್ ಎಂಜಿನ್ ಸರ್ಕಾರ ಬೇಕು:

ಕರ್ನಾಟಕವನ್ನು ದೇಶದ ನಂಬರ್ 1 ರಾಜ್ಯ ಮಾಡಲು ಡಬಲ್ ಎಂಜಿನ್ ಸರ್ಕಾರ ಇರುವುದು ಮುಖ್ಯ. ಕೇಂದ್ರದ ಮತ್ತು ರಾಜ್ಯದ ಬಿಜೆಪಿ ಸರ್ಕಾರದ ಡಬಲ್ ಶಕ್ತಿ ಸಿಕ್ಕಿದಾಗ ಕರ್ನಾಟಕವನ್ನು ನಂಬರ್ 1 ಮಾಡವುದನ್ನು ತಡೆಯಲು ಯಾರಿಗೂ ಸಾಧ್ಯವಾಗುವುದಿಲ್ಲ. ಡಬಲ್ ಎಂಜಿನ್ ಸರ್ಕಾರದ ಒಂದು ಉದಾಹರಣೆ ಎಂದರೆ ಕರ್ನಾಟಕಕ್ಕೆ ಬಂದಿರುವ ವಿದೇಶೀ ಹೂಡಿಕೆ. ಕಾಂಗ್ರೆಸ್ ಸರ್ಕಾರದಲ್ಲಿ ಕರ್ನಾಟಕಕ್ಕೆ ಪ್ರತಿ ವರ್ಷ ಸರಿಸುಮಾರು 30 ಸಾವಿರ ಕೋಟಿ ವಿದೇಶೀ ಹೂಡಿಕೆ ಬರುತ್ತಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ಸರಿಸುಮಾರು 90 ಸಾವಿರ ಕೋಟಿ ಬಂಡವಾಳ ಹರಿದು ಬರುತ್ತಿದೆ. ಇದು ನಮ್ಮ ಸರ್ಕಾರದಲ್ಲಿ 3 ಪಟ್ಟು ಹೆಚ್ಚಾಗಿದೆ. ಕೋವಿಡ್ ಮಹಾಮಾರಿ ಕಾಡಿದಾಗಲೂ, ಯುದ್ಧ ನಡೆಯುತ್ತಿರುವಾಗಲೂ ಇದನ್ನು ಸಾಧಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ನೆನೆಗುದಿಗೆ ಬಿದ್ದಿದ್ದ ನೀರಾವರಿ ಯೋಜನೆ ನಾವು ಪೂರ್ಣಗೊಳಿಸಿದ್ದೇವೆ:

ಡಬಲ್ ಎಂಜಿನ್ ಸರ್ಕಾರವೆಂದರೆ ಡಬಲ್ ಬೆನಿಫಿಟ್ ಮತ್ತು ಡಬಲ್ ಸ್ಪೀಡ್. ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ ಇಲ್ಲದಿದ್ದಾಗ ಸಣ್ಣ ಸಣ್ಣ ಯೋಜನೆಗಳನ್ನೂ ಪೂರ್ಣಗೊಳಿಸಲು ಹಲವು ವರ್ಷಗಳನ್ನು ತೆಗೆದುಕೊಳ್ಳುತ್ತಿದ್ದರು. ನೀರಿನ ಬವಣೆ ಕರ್ನಾಟಕದ ಮಹಿಳೆಯರಿಗೆ ಚೆನ್ನಾಗಿ ಗೊತ್ತು. ಕಾಂಗ್ರೆಸ್ ಸರ್ಕಾರ ಇದ್ದಾಗ ದೇಶದಲ್ಲಿ 100 ಕ್ಕೂ ಹೆಚ್ಚು ನೀರಾವರಿ ಯೋಜನೆಗಳನ್ನು ದಶಕಗಳು ಕಳೆದರೂ ಪೂರ್ಣಗೊಳಿಸಿರಲಿಲ್ಲ. ಆದ್ರೆ ಕಳೆದ 9 ವರ್ಷಗಳಲ್ಲಿ ನಿಮ್ಮ ಬಿಜೆಪಿ ಸರ್ಕಾರ 60 ಕ್ಕೂ ಹೆಚ್ಚು ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿದೆ. ಇದರಲ್ಲಿ ಅನೇಕ ಯೋಜನೆಗಳು ಕರ್ನಾಟಕಕ್ಕೆ ಸೇರಿದೆ. ಬೀದರ್ ನಲ್ಲೂ ಅನೇಕ ನೀರಾವರಿ ಯೋಜನೆಗಳು ತೀವ್ರಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ: ಕೋವಿಡ್‌ ಸಮಯದಲ್ಲಿ ಬಾರದವರು, ಚುನಾವಣೆ ಸಂಬಂಧ ಬಂದಿದಾರೆ..!

ಕಾಂಗ್ರೆಸ್-ಜೆಡಿಎಸ್ ಗೆ ರೈತರೆಂದರೆ ದ್ವೇಷ:

ಪಿಎಂ ಕಿಸಾನ್ ಸಮ್ಮಾನ್ ನಿಧಿ ರೈತರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಸಣ್ಣಪುಟ್ಟ ಖರ್ಚುಗಳಿಗಾಗಿ ಅಲ್ಲಿ ಇಲ್ಲಿ ಅಲೆಯುವುದನ್ನು ತಪ್ಪಿಸಿದೆ. ನಾವು ಈ ಯೋಜನೆಯನ್ನು ಪ್ರಾರಂಭಿಸಿದಾಗ ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಇತ್ತು. ಆದ್ರೆ ಅವರು ನಮ್ಮ ಯೋಜನೆಗೆ ಫಲಾನುಭವಿ ರೈತರ ಹೆಸರನ್ನೂ ಕೇಂದ್ರಕ್ಕೆ ಕಳಿಸಿರಲಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ರೈತರೆಂದರೆ ಎಷ್ಟು ದ್ವೇಷ ಇದೆ ಎಂದು ಇದೇ ತೋರಿಸುತ್ತದೆ. ಮಧ್ಯದಲ್ಲಿ ಕಮಿಷನ್ ಹೊಡೆಯಲು ಸಾಧ್ಯವಾಗದೇ ಇರೋದು ಅವರಿಗೆ ಸಮಸ್ಯೆ ಆಗಿತ್ತು. ಯಾಕಂದ್ರೆ ಈ ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹೋಗುತ್ತಿತ್ತು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಂದಾಗ ಲಕ್ಷಾಂತರ ರೈತರ ಮಾಹಿತಿಯನ್ನು ಕೇಂದ್ರಕ್ಕೆ ಹಂಚಿಕೊಂಡಿದ್ದರಿಂದ ಎಲ್ಲ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ಹಣ ಸಿಗುತ್ತಿದೆ. ಜತೆಗೆ ಕೇಂದ್ರ ಸರ್ಕಾರ 6 ಸಾವಿರ ಕಳಿಸಿದ್ರೆ ಇಲ್ಲಿನ ಬಿಜೆಪಿ ಸರ್ಕಾರ ಅದಕ್ಕೆ 4 ಸಾವಿರ ಸೇರಿಸಿ ಕೊಡುತ್ತಿದೆ. ಇದರಿಂದ ರೈತರಿಗೆ ಇನ್ನಷ್ಟು ನೆರವಾಗುತ್ತಿದೆ. ಇದರಿಂದ ರಾಜ್ಯದ 60 ಲಕ್ಷ ರೈತರಿಗೆ ಪ್ರಯೋಜನ ಆಗಿದೆ. ಅದರಲ್ಲಿ ಸುಮಾರು 400 ಕೋಟಿ ರೂ ಸಹಾಯಧನವನ್ನು ಬೀದರ್ ರೈತರಿಗೆ ನೀಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಕಾಂಗ್ರೆಸ್ ಸಾಲ ಮನ್ನಾ ಹೆಸರಲ್ಲಿ ಮೋಸ ಮಾಡಿದೆ:

ಕಾಂಗ್ರೆಸ್ ಸರ್ಕಾರ ಪ್ರತಿ ಚುನಾವಣೆಗೂ ಮೊದಲು ರೈತರ ಸಾಲ ಮನ್ನಾ ಮಾಡುವ ಹೆಸರಲ್ಲಿ ಮೋಸ ಮಾಡುತ್ತಿತ್ತು. ಸರ್ಕಾರ ರಚನೆಯಾದರೂ ಸಾಲ ಮನ್ನಾ ಮಾಡುತ್ತಿರಲಿಲ್ಲ. ಛತ್ತೀಸ್ ಘಡ ಮತ್ತು ರಾಜಸ್ಥಾನದಲ್ಲಿ ಇದನ್ನೇ ಹೇಳಿದ್ದರೂ, ಇನ್ನೂ ಅದನ್ನು ಮಾಡಲಿಲ್ಲ. ಕೋಟಿ ಕೋಟಿ ಸಣ್ಣ ರೈತರಿಗೆ ಬ್ಯಾಂಕ್ ಗಳಲ್ಲಿ ಖಾತೆಗಳೇ ಇರಲಿಲ್ಲ. ಯಾವುದೇ ಬ್ಯಾಂಕ್ ಗಳೂ ಅವರಿಗೆ ಸಾಲ ಕೊಟ್ಟಿರಲಿಲ್ಲ. ಅವರು ಶ್ರೀಮಂತರ ಬಳಿ ಅಧಿಕ ಬಡ್ಡಿಗೆ ಸಾಲ ಪಡೆಯುತ್ತಿದ್ದರು. ಈ ಸಾಲ ಮನ್ನಾ ಸೌಲಭ್ಯ ಆ ಸಣ್ಣ ರೈತರಿಗೆ ಸಿಗುತ್ತಲೇ ಇರಲಿಲ್ಲ. ಇದೇ ಕಾಂಗ್ರೆಸ್ನ ಅಸಲಿ ಮುಖ ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ: ಕೋವಿಡ್ ಸಂಕಷ್ಟ ಸಮಯದಲ್ಲಿ ಜನತೆಯ ನೋವಿಗೆ ಸ್ಪಂದಿಸಿದ್ದೇನೆ: ಎಸ್.ಟಿ.ಸೋಮಶೇಖರ್

ಕಬ್ಬು ಬೆಳಗಾರರು ಈಗ ಲಾಭ ಪಡೆಯುತ್ತಿದ್ದಾರೆ :

ಈ ಭಾಗದಲ್ಲಿ ಕಬ್ಬು ಬೆಳೆಗಾರರು ಹೆಚ್ಚಿದ್ದಾರೆ. ಕಾಂಗ್ರೆಸ್ ಅವರು ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಯೋಚನೆಯನ್ನೂ ಮಾಡಿರಲಿಲ್ಲ. ಆದರೆ ನಾವು ಕಬ್ಬು ಬೆಳೆಗಾರರಿಗೆ ಸಹಾಯ ಮಾಡಲು ಪೆಟ್ರೋಲ್ ಗೆ ಎಥನಾಲ್ ಮಿಶ್ರಣ ಮಾಡುವ ಯೋಜನೆ ರೂಪಿಸಿದ್ದೇವೆ. ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ದೇಶದಲ್ಲಿ ಕೇವಲ 40 ಸಾವಿರ ಕೋಟಿ ಲೀಟರ್ ಎಥನಾಲ್ ಉತ್ಪಾದನೆ ಆಗುತ್ತಿತ್ತು. ಈಗ ನಮ್ಮ ಸರ್ಕಾರದಲ್ಲಿ 400 ಕೋಟಿ ಲೀಟರ್ ಗೂ ಹೆಚ್ಚು ಎಥನಾಲ್ ಉತ್ಪಾದನೆ ಆಗುತ್ತಿದೆ. ಪೆಟ್ರೋಲ್ ನಲ್ಲಿ ಎಥನಾಲ್ ಮಿಶ್ರಣ ಮಾಡುತ್ತಿರುವುದರಿಂದ ಕಬ್ಬು ಬೆಳೆಗಾರರಿಗೆ ಹೆಚ್ಚು ಲಾಭ ಆಗುತ್ತಿದೆ. ಕಬ್ಬು ಬೆಳೆಗಾರರ ಸಂಘದ ಸುಮಾರು 10 ಸಾವಿರ ಕೋಟಿ ಸಾಲವನ್ನು ನಮ್ಮ ಸರ್ಕಾರ ಮನ್ನಾ ಮಾಡಿದೆ. ನಮ್ಮ ಸರ್ಕಾರ ಸಿರಿ ಧಾನ್ಯಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳಿಸಿದ್ದೇವೆ. ನಿಮ್ಮ ನೆಚ್ಚಿನ ಜೋಳದ ರೊಟ್ಟಿ ಈಗ ವಿಶ್ವದ ಮೂಲೆ ಮೂಲೆಗೆ ತಲುಪುತ್ತಿದೆ. ಇದರ ಲಾಭವೂ ರೈತರಿಗೆ ಸಿಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News