ನವದೆಹಲಿ: ಕರ್ನಾಟಕದಲ್ಲಿ ರೆಸಾರ್ಟ್ ರಾಜಕಾರಣ ಹೊಸತೇನಲ್ಲ. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಮತ್ತೆ 'ಆಪರೇಶನ್ ಕಮಲ'ಕ್ಕೆ ಕೈ ಹಾಕಿದೆ. ಕಮಲ ಪಾಳಯದ ಈ ದಾಳಕ್ಕೆ ಕೈ ಪಾಳಯ ಮತ್ತು ದಳಪತಿಗಳು ಸಂ'ಕ್ರಾಂತಿ'ಗೆ ಪ್ರತಿದಾಳ ಉರುಳಿಸಲು ಸಜ್ಜಾಗಿದ್ದಾರೆ.
ಏತನ್ಮಧ್ಯೆ, ಮಾಧ್ಯಮ ವರದಿಗಳ ಪ್ರಕಾರ ಹಾಲಿ ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ರಚನೆ ಉದ್ದೇಶದಿಂದ ಆಪರೇಷನ್ ಕಮಲಕ್ಕೆ ಚಾಲನೆ ನೀಡಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದೇ ಕಾರಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ತಮ್ಮ ಶಾಸಕರನ್ನು ದೆಹಲಿಯಿಂದ ಗುರುಗ್ರಾಮದ ರೆಸಾರ್ಟ್ ರವಾನೆ ಮಾಡಿದ್ದಾರೆ.
ಐಶಾರಾಮಿ ಕೋಟೆಯೊಳಗೆ ಬಂಧಿಯಾಗಿರುವ ಬಿಜೆಪಿ ಶಾಸಕರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಇನ್ನು, ಶಾಸಕರು ಉಳಿದುಕೊಂಡ ಹೋಟೆಲ್ಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಹೋಟೆಲ್ಗೆ ಬರುವ ಹೊಸ ಗ್ರಾಹಕರಿಗೆ ಪ್ರವೇಶ ನಿಷೇಧಿಸಲಾಗಿದೆ.
BJP Karnataka MLA from Nippani Shashikala Jolle: There are 104 BJP MLAs and we're together. We were called here (Gurugram) to strategise for the upcoming Lok Sabha elections. There's no talks of forming government, if there is anything our leaders will tell you. pic.twitter.com/onMl4L5CaF
— ANI (@ANI) January 14, 2019
ದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, "ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟಕ್ಕೆ ಬಹು ಮತವಿದ್ದರೂ ಆ ಪಕ್ಷಗಳ ನಾಯಕರು ಬಿಜೆಪಿಯ ಶಾಸಕರನ್ನು ಸೆಳೆಯಲು ಕುದುರೆ ವ್ಯಾಪಾರ ಶುರು ಮಾಡಿದ್ದಾರೆ. ನಾವು 104 ಶಾಸಕರು ವಿಪಕ್ಷ ಸ್ಥಾನದಲ್ಲೇ ಕುಳಿತು ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ'. ನಮ್ಮ ಶಾಸಕರನ್ನು ಕಾಪಾಡಿಕೊಳ್ಳಲು ಇಲ್ಲಿ ಉಳಿದಿದ್ದೇವೆ. ಒಂದೆರಡು ದಿನಗಳಲ್ಲಿ ಬೆಂಗಳೂರಿಗೆ ವಾಪಸಾಗುತ್ತೇವೆ. ಆಪರೇಶನ್ ಕಮಲದ ಮಾತು ಕೇವಲ ಊಹಾಪೋಹ ಎಂದಿದ್ದಾರೆ.
"ಜೆಡಿಎಸ್-ಕಾಂಗ್ರೆಸ್ ನಾಯಕರು ಹಣ ಮತ್ತು ಸಚಿವ ಸ್ಥಾನದ ಆಮಿಷ ಒಡ್ಡಿ ನಮ್ಮ ಶಾಸಕರನ್ನು ಸೆಳೆಯುತ್ತಿದ್ದಾರೆ. ನಾವು ಆಪರೇಷನ್ ಕಮಲ ಮಾಡುತ್ತಿಲ್ಲ, ಬದಲಾಗಿ ಕುಮಾರಸ್ವಾಮಿಯವರೇ ಮಾಡುತ್ತಿದ್ದಾರೆ' ಎಂದೂ ಬಿಎಸ್‌ವೈ ಆರೋಪಿಸಿದರು. ನಾವು ಮುಂಬೈಯಲ್ಲೂ ಯಾವುದೇ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಇಟ್ಟಿಲ್ಲ, ಈ ಬಗ್ಗೆ ಅವರನ್ನೇ ಕೇಳಿ ಎಂದರು.
ಸಂಸತ್ ಚುನಾವಣಾ ತಯಾರಿ ನೆಪದಲ್ಲಿ ತನ್ನೆಲ್ಲಾ ಶಾಸಕರನ್ನು ದೆಹಲಿಯಲ್ಲಿ ಸೆರೆಯಿಡಿದ ಬಿಜೆಪಿ, ಎಲ್ಲರನ್ನು ದೆಹಲಿ ಸಮೀಪದ ಗುರುಗ್ರಾಮದ ರೆಸಾರ್ಟ್‌ಗೆ ಸ್ಥಳಾಂತರ ಮಾಡಿದೆ. ಗುರುಗ್ರಾಮದ ಬಳಿ ಇರುವ ಐಟಿಸಿ ಗ್ರ್ಯಾಂಡ್ ಭಾರತ್ ರೆಸಾರ್ಟ್ನಲ್ಲಿ ಬಿಜೆಪಿ ಶಾಸಕರು ವಾಸ್ತವ್ಯ ಹೂಡಿದ್ದು ಈಗ ಎಲ್ಲರ ಚಿತ್ತ ರೆಸಾರ್ಟ್ನತ್ತ ನೆಟ್ಟಿದೆ.