ಶೀಘ್ರದಲ್ಲೇ ಬೆಂಗಳೂರು ಮತ್ತು ಟೋಕಿಯೋ ನಡುವೆ ನೇರ ವಿಮಾನ ಯಾನ

ರಾಜ್ಯ ಸರ್ಕಾರದ ಅನೇಕ ಪ್ರಗತಿ ಯೋಜನೆಗಳಲ್ಲಿ ಜಪಾನ್‍ನ ಸಹಭಾಗಿತ್ವವಿದೆ- ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ  

Last Updated : Feb 22, 2019, 09:50 AM IST
ಶೀಘ್ರದಲ್ಲೇ ಬೆಂಗಳೂರು ಮತ್ತು ಟೋಕಿಯೋ ನಡುವೆ ನೇರ ವಿಮಾನ ಯಾನ title=

ಬೆಂಗಳೂರು: ಬೆಂಗಳೂರು ಮತ್ತು ಟೋಕಿಯೋ ನಡುವೆ ನೇರ ವಿಮಾನ ಯಾನವನ್ನು ಮಾರ್ಚ್ 2020 ವೇಳೆಗೆ ಪ್ರಾರಂಭಿಸುವುದಾಗಿ ತಿಳಿಸಿದ ಜಪಾನ್‍ನ ಕೌನ್ಸಲ್ ಜನರಲ್ ತಿಳಿಸಿದ್ದಾರೆ.

ಜಪಾನ್‍ನ ಕೌನ್ಸಲ್ ಜನರಲ್ ತಕಾಯೂಕಿ ಕಿತಗಾವ ಹಾಗೂ ಜಪಾನ್ ಏರ್‍ಲೈನ್ಸ್‍ನ ವ್ಯವಸ್ಥಾಪಕ ಕಾರ್ಯನಿರ್ವಾಹಕ ಅಧಿಕಾರಿ ತೆತ್ಸೂಯಾ ಓನೂಕಿ ಫೆ.21ರಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. 
  
ಬೆಂಗಳೂರು ಮತ್ತು ಟೋಕಿಯೋ ನಡುವೆ ನೇರ ವಿಮಾನ ಯಾನವನ್ನು ಮಾರ್ಚ್ 2020 ವೇಳೆಗೆ ಪ್ರಾರಂಭಿಸುವುದಾಗಿ ತಿಳಿಸಿದ ಜಪಾನ್‍ನ ಕೌನ್ಸಲ್ ಜನರಲ್, ಜಪಾನಿಯರಿಗೆ ಬೆಂಗಳೂರನ್ನು ಪರಿಚಯಿಸುವ ನಿಟ್ಟಿನಲ್ಲಿ ಬೆಂಗಳೂರಿನ ತಮ್ಮ  ಕಚೇರಿಯಲ್ಲಿ ಕರ್ನಾಟಕದ ಧ್ವಜದ ವರ್ಣಗಳನ್ನು ಬಿಂಬಿಸುವ ಸಸ್ಯಾಹಾರಿ ಸುಷಿ- ಬೆಂಗಾ ರೋಲ್ ಎಂಬ ವಿಶಿಷ್ಟ ಖಾದ್ಯವನ್ನು ಪರಿಚಯಿಸಲಾಗುತ್ತಿದೆ. ಇದಲ್ಲದೆ ಕರ್ನಾಟಕದ ಪ್ರವಾಸೋದ್ಯಮವನ್ನು ಸಹ ಪರಿಚಯಿಸಲು ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು.  

ಜಪಾನ್ ಏರ್‍ಲೈನ್ಸ್‍ನ ವ್ಯವಸ್ಥಾಪಕ ಕಾರ್ಯನಿರ್ವಾಹಕ ಅಧಿಕಾರಿ ತೆತ್ಸೂಯಾ ಓನೂಕಿ ಮಾತನಾಡಿ, ನೇರ ವಿಮಾನ ಯಾನಕ್ಕೆ ಬೋಯಿಂಗ್ ವಿಮಾನವನ್ನು ಬಳಸಲಾಗುವುದು.  ಈ ವಿಮಾನ ಸಂಚಾರದಿಂದ ಉತ್ತರ ಅಮೇರಿಕಾದ ಸಿಯಾಟಲ್, ಸಾನ್‍ಫ್ರಾನ್ಸಿಸ್ಕೊಗೆ ಭೇಟಿ ನೀಡುವ ಪ್ರಯಾಣಿಕರಿಗೂ ಅನುಕೂಲವಾಗಲಿದೆ ಹಾಗೂ ವಲಸೆ ಪ್ರಕ್ರಿಯೆಯು ಸರಳವಾಗಲಿದೆ ಎಂದರು.  

ಬೆಂಗಳೂರು ಮತ್ತು ಟೋಕಿಯೋ ನಡುವೆ ನೇರ ವಿಮಾನ ಯಾನವನ್ನು ಪ್ರಾರಂಭಿಸಲಿರುವ ಜಪಾನ್ ಏರ್‍ಲೈನ್ಸ್‍ನ್ನು ಮುಖ್ಯಮಂತ್ರಿಗಳು ಅಭಿನಂದಿಸಿದರು. ಇದರಿಂದ ಜಪಾನ್‍ನ ಇನ್ನಷ್ಟು ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಅವಕಾಶಗಳು ತೆರೆದಂತಾಗುತ್ತದೆ ಎಂದ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರದ ಅನೇಕ ಪ್ರಗತಿ ಯೋಜನೆಗಳಲ್ಲಿ ಜಪಾನ್‍ನ ಸಹಭಾಗಿತ್ವವಿದೆ. ತುಮಕೂರಿನಲ್ಲಿ ಜಪಾನಿ ಕೈಗಾರಿಕಾ ಪ್ರದೇಶಕ್ಕಾಗಿ 519.55 ಎಕರೆ ಪ್ರದೇಶವನ್ನು ಮೀಸಲಿಟ್ಟಿದ್ದು, ತುಮಕೂರಿನ ವಸಂತ ನರಸಾಪುರದಲ್ಲಿ ತಲೆ ಎತ್ತಲಿರುವ ಈ ಕೈಗಾರಿಕಾ ನಗರ, ಚೆನ್ನೈ -ಬೆಂಗಳೂರು ಕೈಗಾರಿಕಾ ಕಾರಿಡಾರಿನ ಪ್ರಮುಖ ಭಾಗವಾಗಲಿದೆ . ಕರ್ನಾಟಕ ಮತ್ತು ಜಪಾನ್‍ನ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಲು ಸಾಧ್ಯವಾಗುತ್ತದೆ ಎಂದರು.  
  
ಈ ಸಂದರ್ಭದಲ್ಲಿ ಜಪಾನ್ ಏರ್‍ಲೈನ್‍ನ ರಾಷ್ಟ್ರೀಯ ವ್ಯವಸ್ಥಾಪಕ ಶಿನ್ಯಾ ನರೂಷೆ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತಾ  ಉಪಸ್ಥಿತರಿದ್ದರು.
 

Trending News