ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮಾರ್ಚ್.30 ಮತ್ತು 31ರಂದು ಹಳೇ ಮೈಸೂರು ಭಾಗದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. 'ಕರುನಾಡ ಜಾಗೃತಿ ಯಾತ್ರೆ' ಭಾಗವಾಗಿ ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಿಗೆ ಷಾ ಭೇಟಿ ನೀಡಲಿದ್ದಾರೆ.
ಒಗ್ಗಲಿಗರ ಭದ್ರಕೋಟೆ ಎಂದೇ ಹೇಳಲಾಗುವ ಈ ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 26 ವಿಧಾನಸಭಾ ಕ್ಷೇತ್ರಗಳಿದ್ದು, ಇವುಗಳಲ್ಲಿ ಒಂದೇ ಒಂದು ಸ್ಥಾನವನ್ನೂ 2013ರ ಚುನಾವಣೆಯಲ್ಲಿ ಬಿಜೆಪಿ ತನ್ನದಾಗಿಸಿಕೊಂಡಿಲ್ಲ. ಅಷ್ಟೇ ಅಲ್ಲದೆ, ಈ ಭಾಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರೂ ಕೂಡ ಹೌದು.
ಮಾರ್ಚ್ 30ರಂದು ಸುತ್ತೂರು ಮಠಕ್ಕೆ ಭೇಟಿ ನೀಡಿ, ಸುತ್ತೂರು ಮಠಾಧಿಪತಿಗಳಾಗಿರುವ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಜೊತೆ ಸಂವಾದ ನಡೆಸಿ ಆಶೀರ್ವಚನ ಪಡೆದುಕೊಳ್ಳಲಿರುವ ಅಮಿತ್ ಷಾ, ಬಳಿಕ ಮೈಸೂರು ಅರಮನೆಯಲ್ಲಿರುವ ರಾಜಮನೆತನದ ಖಾಸಗಿ ನಿವಾಸಕ್ಕೆ ತೆರಳಿ ಪ್ರಮೋದಾದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ನಂತರ ಕ್ಯಾತಮಾರನಹಳ್ಳಿಯಲ್ಲಿರುವ ಬಿಜೆಪಿ ಮೃತ ಕಾರ್ಯಕರ್ತ ರಾಜು ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ನಂತರ ಕೃಷ್ಣರಾಜ, ನರಸಿಂಹರಾಜ, ಚಾಮರಾಜ ಕ್ಷೇತ್ರದ ಬಿಜೆಪಿ ನವಶಕ್ತಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ನಂತರ ದಲಿತ ಮುಖಂಡರೊಂದಿಗೆ ಸಭೆ ನಡೆಸಿ ಸಹಪಂಕ್ತಿ ಭೋಜನ ಸ್ವೀಕರಿಸಲಿದ್ದಾರೆ. ಆ ಬಳಿಕ ಚಾಮರಾಜನಗರ ಜಿಲ್ಲಾ ಪ್ರವಾಸದಲ್ಲಿ ಭಾಗಿಯಾಗಲಿದ್ದಾರೆ.
ಅಮಿತ್ ಷಾ ಅವರು ಈ ಬಾರಿಯ ಪ್ರವಾಸದಲ್ಲಿ ಸುತ್ತೂರು ಮಠ ಅಷ್ಟೇ ಅಲ್ಲದೆ, ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮ, ನಂಜನಗೂಡು ಶ್ರೀಕಂಠೇಶ್ವರ ದೇವಾಲಯ, ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ. ಅಲ್ಲದೆ, ಚನ್ನಪಟ್ಟಣದ ಕ್ರಾಫ್ಟ್ ಪಾರ್ಕ್'ಗೆ ಭೇಟಿ ನೀಡಲಿದ್ದು, ರೇಷ್ಮೆ ಬೆಳೆಗಾರರೊಂದಿಗೆ ಸಂವಾದ ನಡೆಸಲಿದ್ದಾರೆ.