ವಿಧಾನಸಭೆ ಉಪಸಮರ: ಬಿಜೆಪಿಗೆ ಮಣೆಹಾಕಿದ ಮತದಾರ ಪ್ರಭು

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಮತದಾರ ದೊರೆ ಬಿಜೆಪಿಗೆ ಮಣೆಹಾಕಿದ್ದು, 12 ಕ್ಷೇತ್ರಗಳನ್ನು ಗೆದ್ದು ಆಡಳಿತಾರೂಢ BJP ಸರ್ಕಾರ ಸೇಫ್ ಆಗಿದೆ.

Updated: Dec 9, 2019 , 05:02 PM IST
ವಿಧಾನಸಭೆ ಉಪಸಮರ: ಬಿಜೆಪಿಗೆ ಮಣೆಹಾಕಿದ ಮತದಾರ ಪ್ರಭು

ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಹಾಗೂ 15 ಅನರ್ಹ ಶಾಸಕರಿಗೆ ಪ್ರತಿಷ್ಠೆಯ ಪ್ರಶ್ನೆ ಎಂದೇ ಬಿಂಬಿಸಲಾಗಿದ್ದ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಕಾರ್ಯ ಅಂತ್ಯಗೊಂಡಿದೆ. ಕಳೆದ ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿದ್ದ 15 ಶಾಸಕರ ಕ್ಷೇತ್ರಗಳಿಗೆ ಡಿ.5ರಂದು ಚುನಾವಣೆ ನಡೆದಿತ್ತು. ಇಂದು ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು 12 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ದಾಖಲಿಸಿದ್ದಾರೆ. ಉಳಿದಂತೆ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು  ಹಾಗೂ ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಜಯ ಗಳಿಸಿದ್ದಾರೆ.

ಫಲಿತಾಂಶ ಪ್ರಕಟವಾಗುತ್ತಿದ್ದಂತೆ, ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್, "ರಾಜ್ಯದ ಜನರು ತಪ್ಪು ಮಾಡಿದವರನ್ನೇ ಒಪ್ಪಿಕೊಂಡಿದ್ದು, ನಾವು ನಮ್ಮ ಸೋಲನ್ನು ಸ್ವೀಕರಿಸುತ್ತೇವೆ ಎಂದಿದ್ದಾರೆ". ಚುನಾವಣಾ ಫಲಿತಾಂಶದ ಬಳಿಕ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಎಂ ಯಡಿಯೂರಪ್ಪ "ಮತದಾರರು ಬಿಜೆಪಿ ಪರ ಇದ್ದಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದ್ದು, ಚುನಾವಣೆಗೂ ಮುನ್ನವೇ ನಾನು ಭರವಸೆ ನೀಡಿರುವಂತೆ ಮಾತು ಕೊಟ್ಟವರಿಗೆಲ್ಲ ಸಚಿವ ಸ್ಥಾನ ನೀಡಲಾಗುವುದು" ಎಂದಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಅನರ್ಹಗೊಂಡು BJP ಸೇರಿದ್ದ ಶಿವರಾಮ್ ಹೆಬ್ಬಾರ್, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಭೀಮಣ್ಣ ನಾಯ್ಕ್ ವಿರುದ್ಧ 31,408 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಗೆಲುವಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು "ನನ್ನನ್ನು ಅನರ್ಹ ಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರೇ ಈಗ ಅನರ್ಹರಾಗಿದ್ದಾರೆ" ಎಂದಿದ್ದಾರೆ.

ಒಟ್ಟಾರೆ ಹೇಳುವುದಾದರೆ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಮತದಾರ ದೊರೆ ಬಿಜೆಪಿಗೆ ಮಣೆಹಾಕಿದ್ದು, 12 ಕ್ಷೇತ್ರಗಳನ್ನು ಗೆದ್ದು ಆಡಳಿತಾರೂಢ BJP ಸರ್ಕಾರ ಸೇಫ್ ಆಗಿದೆ ಎಂದೇ ಹೇಳಬಹುದು.

ಯಾವ ಕ್ಷೇತ್ರದಲ್ಲಿ ಯಾರು ಎಷ್ಟು ಅಂತರದಿಂದ ಗೆಲುವು:
1. ಅಥಣಿ ವಿಧಾನಸಭಾ ಕ್ಷೇತ್ರಗದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಮಹೇಶ್ ಕುಮಟಳ್ಳಿ ತಮ್ಮ ಪ್ರತಿಸ್ಪರ್ಧಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗಜಾನನ್ ಭಾಲಚಂದ್ರ ಮಂಗಸೂಳಿ ವಿರುದ್ಧ ಗೆಲುವಿನ ನಗೆಬೀರಿದ್ದಾರೆ.(ಗೆಲುವಿನ ಅಂತರ - 39989 ಮತಗಳು)
2. ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ರಮೇಶ್ ಜಾರಕಿಹೊಳಿ ತಮ್ಮ ಪ್ರತಿಸ್ಪರ್ಧಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಮಂಗಸೂಳಿ ವಿರುದ್ಧ ಗೆಲುವಿನ ನಗೆಬೀರಿದ್ದಾರೆ.(ಗೆಲುವಿನ ಅಂತರ - 29006 ಮತಗಳು)
3. ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಶ್ರೀಮಂತ ಪಾಟೀಲ ಅವರು ತಮ್ಮ ಪ್ರತಿಸ್ಪರ್ಧಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಭರಮಗೌಡ ಕಾಗೆ ವಿರುದ್ಧ ಗೆಲುವಿನ ನಗೆಬೀರಿದ್ದಾರೆ (ಗೆಲುವಿನ ಅಂತರ - 18557 ಮತಗಳು)
4. ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಅರುಣ್ ಕುಮಾರ್ ಅವರು ತಮ್ಮ ಪ್ರತಿಸ್ಪರ್ಧಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ವಿರುದ್ಧ ಗೆಲುವಿನ ನಗೆಬೀರಿದ್ದಾರೆ. (ಗೆಲುವಿನ ಅಂತರ - 23222 ಮತಗಳು)
5. ಹಿರೇಕೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿಸಿ ಪಾಟೀಲ್ ಅವರು ತಮ್ಮ ಪ್ರತಿಸ್ಪರ್ಧಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬಿ.ಹೆ.ಬನ್ನಿಕೋಡ್ ವಿರುದ್ಧ ಗೆಲುವಿನ ನಗೆಬೀರಿದ್ದಾರೆ.(ಗೆಲುವಿನ ಅಂತರ-2906 ಮತಗಳು)
6. ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಶಿವರಾಮ್ ಹೆಬ್ಬಾರ್ ಅವರು ತಮ್ಮ ಪ್ರತಿಸ್ಪರ್ಧಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ವಿರುದ್ಧ ಬಿಜೆಪಿ ಗೆಲುವಿನ ನಗೆಬೀರಿದ್ದಾರೆ. (ಗೆಲುವಿನ ಅಂತರ - 31408 ಮತಗಳು)
7. ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಅವರು ಪ್ರತಿಸ್ಪರ್ಧಿ ಹಾಗೂ  ಕಾಂಗ್ರೆಸ್ ಅಭ್ಯರ್ಥಿ ವಿ.ವೈ.ಘೋರ್ಪಡೆ ವಿರುದ್ಧ ಗೆಲುವಿನ ನಗೆಬೀರಿದ್ದಾರೆ. (ಗೆಲುವಿನ ಅಂತರ - 30125 ಮತಗಳು)
8. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು ತಮ್ಮಪ್ರತಿಸ್ಪರ್ಧಿ ಹಾಗೂ  ಕಾಂಗ್ರೆಸ್ ಅಭ್ಯರ್ಥಿ ಎಂ.ಅಂಜನಪ್ಪ ವಿರುದ್ಧ ಗೆಲುವಿನ ನಗೆಬೀರಿದ್ದಾರೆ.(ಗೆಲುವಿನ ಅಂತರ - 34801 ಮತಗಳು)
9. ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜು ಅವರು ತಮ್ಮ ಪ್ರತಿಸ್ಪರ್ಧಿ ಹಾಗೂ  ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣ ಸ್ವಾಮಿ ವಿರುದ್ಧ ಗೆಲುವಿನ ನಗೆಬೀರಿದ್ದಾರೆ. (ಗೆಲುವಿನ ಅಂತರ - 59124 ಮತಗಳು)
10. ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯಅವರು ತಮ್ಮ ಪ್ರತಿಸ್ಪರ್ಧಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎಂ.ಶಿವರಾಜು  ವಿರುದ್ಧ ಗೆಲುವಿನ ನಗೆಬೀರಿದ್ದಾರೆ.(ಗೆಲುವಿನ ಅಂತರ - 54386)
11. ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ತಮ್ಮ ಪ್ರತಿಸ್ಪರ್ಧಿ ಹಾಗೂ JDS ಅಭ್ಯರ್ಥಿ ಬಿ.ಎಲ್. ದೇವರಾಜ್ ವಿರುದ್ಧ ಗೆಲುವಿನ ನಗೆಬೀರಿದ್ದಾರೆ(ಗೆಲುವಿನ ಅಂತರ-9731 ಮತಗಳು)
12. ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್'ಟಿ. ಸೋಮಶೇಖರ್ ಅವರು ಜೆಡಿಎಸ್ ಅಭ್ಯರ್ಥಿ ಟಿ.ಎನ್.ಜವರಾಯಿಗೌಡ ವಿರುದ್ಧ ಗೆಲುವು ಸಾಧಿಸಿದ್ದಾರೆ.  (ಗೆಲುವಿನ ಅಂತರ - 27699 ಮತಗಳು)
13. ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ  ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಚ್.ಪಿ. ಮಂಜುನಾಥ್ ತಮ್ಮ ಪ್ರತಿಸ್ಪರ್ಧಿ ಹಾಗೂ ಬಿಜೆಪಿ ಅಭ್ಯರ್ಥಿ ಎ.ಹೆಚ್ ವಿಶ್ವನಾಥ್ ವಿರುದ್ಧ ಗೆಲುವಿನ ನಗೆಬೀರಿದ್ದಾರೆ (ಗೆಲುವಿನ ಅಂತರ - 39727 ಮತಗಳು)
14. ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್  ಅವರು ತಮ್ಮ ಪ್ರತಿಸ್ಪರ್ಧಿ ಹಾಗೂ ಬಿಜೆಪಿ ಅಭ್ಯರ್ಥಿ ಎಂ. ಸರವನ ವಿರುದ್ಧ ಗೆಲುವಿನ ನಗೆ ಬೀರಿದ್ದಾರೆ (ಗೆಲುವಿನ ಅಂತರ - 13521 ಮತಗಳು)
15. ಇನ್ನು ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರು ತಮ್ಮ ಪ್ರತಿಸ್ಪರ್ಧಿ ಹಾಗೂ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರುದ್ಧ ಗೆಲುವಿನ ನಗೆಬೀರಿದ್ದಾರೆ.(ಗೆಲುವಿನ ಅಂತರ - 11486 ಮತಗಳು)