ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರಕಾರಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಇಂದು ಸಂಜೆ 6 ಗಂಟೆಗೆ ಅಂತ್ಯಗೊಂಡಿದೆ. ಅಲ್ಲಲ್ಲಿ ಕೆಲ EVMಗಳಲ್ಲಿ ಕಂಡುಬಂದ ದೋಷ ಹಾಗೂ ಚಿಕ್ಕ ಪುಟ್ಟ ಕಲಹಗಳನ್ನು ಹೊರತುಪಡಿಸಿದರೆ ಬಹುತೇಕ ಮತದಾನ ಶಾಂತಿಪೂರ್ವಕವಾಗಿ ಅಂತ್ಯಗೊಂಡಿದೆ.
ಉಪಸಮರದ ಎಲ್ಲ 15 ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದ್ದು, ಡಿ.9ರಂದು ನಡೆಯಲಿರುವ ಮತಎಣಿಕೆ ಪ್ರಕ್ರಿಯೆಯಲ್ಲಿ ಎಲ್ಲರ ಕಳೆಬರಹ ನಿರ್ಧಾರವಾಗಲಿದೆ. ರಾಜ್ಯ ಬಿಜೆಪಿ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆಯಾಗಿರುವ ಈ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ಮತ್ತು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪಕ್ಕೆ ಗುರಿಯಾಗಿರುವ ಅನರ್ಹ ಶಾಸಕರ ರಾಜಕೀಯ ಭವಿಷ್ಯ ಕೂಡ ನಿರ್ಧಾರವಾಗಲಿದೆ.
ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿದ್ದು, ಸಂಜೆ 5 ಗಂಟೆಯವರೆಗೆ ವಿವಿಧ ಕ್ಷೇತ್ರಗಳಲ್ಲಿನ ಶೇಕಡಾವಾರು ಮತದಾನದ ವಿವರ ಕೆಳಗಿನಂತಿದೆ. ಕೆ.ಆರ್ ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ ಶೇಕಡಾ 37.05ರಷ್ಟು ಮತದಾನ ದಾಖಲಾಗಿದ್ದರೆ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಶೇಕಡಾ 79.8 ರಷ್ಟು ಮತದಾನ ದಾಖಲಾಗಿದೆ.
1.ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ-ಶೇ. 79.8
೨.ಹೊಸಕೋಟೆ ವಿಧಾನಸಭಾ ಕ್ಷೇತ್ರ-ಶೇ. 76.19ರಷ್ಟು
3.ಅಥಣಿ ವಿಧಾನಸಭಾ ಕ್ಷೇತ್ರ- ಶೇ.70.73
4.ಹಿರೇಕೆರೂರು ವಿಧಾನಸಭಾ ಕ್ಷೇತ್ರ- ಶೇ.72.42
5.ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ-ಶೇ.40.47
6.ಶಿವಾಜಿನಗರ ವಿಧಾನಸಭಾ ಕ್ಷೇತ್ರ- ಶೇ.41.13
7.ಗೋಕಾಕ್ ವಿಧಾನಸಭಾ ಕ್ಷೇತ್ರ- ಶೇ.66.64
8.ಹುಣಸೂರು ವಿಧಾನಸಭಾ ಕ್ಷೇತ್ರ- ಶೇ.74.47
9.ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರ- ಶೇ.75.87
10.ಕೆ.ಆರ್ ಪುರಂ ವಿಧಾನಸಭಾ ಕ್ಷೇತ್ರ- ಶೇ.37.05
11.ಯಶವಂತಪುರ ವಿಧಾನಸಭಾ ಕ್ಷೇತ್ರ- ಶೇ.48.34
12.ವಿಜಯನಗರ ವಿಧಾನಸಭಾ ಕ್ಷೇತ್ರ- ಶೇ.59.93
13.ಯಲ್ಲಾಪುರ ವಿಧಾನಸಭಾ ಕ್ಷೇತ್ರ- ಶೇ.72.23
14.ಕಾಗವಾಡ ವಿಧಾನಸಭಾ ಕ್ಷೇತ್ರ- ಶೇ.69.76
15.ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರ- ಶೇ.67.92