ಬಾಯಿಗೆ ಬಂದ ಹೇಳಿಕೆ ನೀಡುವ ರೇವಣ್ಣ ಮಾತಿಗೆ ಮಹತ್ವ ಕೊಡಲಾಗದು: ಡಾ. ಸಿ.ಎನ್‌.ಅಶ್ವತ್ಥನಾರಾಯಣ

ಸುಳ್ಳು ಕೇಸ್ ಹಾಕಿಕೊಂಡು, ಜನರ ಮೇಲೆ ದಬ್ಬಾಳಿಕೆ ಮಾಡಿಕೊಂಡು ಬಂದವರು ಐಜಿಪಿ ಅವರನ್ನೇ ದಫೇದಾರ ಅಂತಾ ಕರೆದಿದ್ದಾರೆ.  ನಾಟಕ, ದಬ್ಬಾಳಿಕೆ ಎಷ್ಟು ದಿನ ನಡೆಯಲು ಸಾಧ್ಯ?  ಜನ ಸಾಕಷ್ಟು ಸಹಿಸಿಕೊಂಡಿದ್ದಾರೆ. ಇಂತಹ ದೌರ್ಜನ್ಯ ಎಷ್ಟು ದಿನ‌ ನಡೆಯಲು ಸಾಧ್ಯ? ಇವರ ದಬ್ಬಾಳಿಕೆ ಕೊನೆಯಾಗುವ ದಿನಗಳು ಬಂದಿದೆ, ಕೊನೆಯಾಗುತ್ತದೆ-  ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ 

Yashaswini V Yashaswini V | Updated: Dec 6, 2019 , 07:33 AM IST
ಬಾಯಿಗೆ ಬಂದ ಹೇಳಿಕೆ ನೀಡುವ ರೇವಣ್ಣ ಮಾತಿಗೆ ಮಹತ್ವ ಕೊಡಲಾಗದು: ಡಾ. ಸಿ.ಎನ್‌.ಅಶ್ವತ್ಥನಾರಾಯಣ
File Photo

ಬೆಂಗಳೂರು: ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಗೂಂಡಾ ಸಂಸ್ಕೃತಿಯ ಜೆಡಿಎಸ್‌ನ ಮುಖಂಡ ಹೆಚ್‌.ಡಿ ರೇವಣ್ಣ(HD Revanna) ಬಾಯಿಗೆ ಬಂದ ಹೇಳಿಕೆ ನೀಡುವವರೆಂದೇ ಪ್ರಸಿದ್ಧಿ ಪಡೆದಿದ್ದಾರೆ. ಅವರ ಹೇಳಿಕೆಗೆ ಮಹತ್ವ ನೀಡುವ ಅಗತ್ಯ ಇಲ್ಲ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ(Dr.CN Ashwattanarayana) ತಿಳಿಸಿದ್ದಾರೆ. 

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ನಂಬಿಹಳ್ಳಿಯಲ್ಲಿ ಜೆಡಿಎಸ್‌(JDS) ಕಾರ್ಯಕರ್ತರಿಂದ ಹಲ್ಲೆಗೊಳಗಾಗಿರುವ ಬಿಬಿಎಂಪಿ ಸದಸ್ಯ ಆನಂದ್‌ ಹೊಸೂರ್‌ ಮತ್ತು ಬಿಜೆಪಿ(BJP) ಕಾರ್ಯಕರ್ತರನ್ನು  ಡಾ. ಅಶ್ವತ್ಥನಾರಾಯಣ ಗುರುವಾರ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. 

ಕೆ.ಆರ್‌.ಪೇಟೆಯಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂಬ ರೇವಣ್ಣ ಆರೋಪಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ, ಅವರು ಮಾಡಿರುವ ಆರೋಪಕ್ಕೆ ಯಾವುದೇ ಆಧಾರ ಇಲ್ಲ. ಬಾಯಿಗೆ ಬಂದ ಹಾಗೆ ಹೇಳಿಕೆ ನೀಡುತ್ತಾರೆ. ರಾಜಕೀಯ ಮಾಡಲು ರೀತಿ ನೀತಿ ಇದೆ. ಕಾನೂನು ಕೈಗೆ ತಗೊಂಡು ಬೇರೆ ಪಕ್ಷದವರ ಮೇಲೆ ಹಲ್ಲೆ ನಡೆಸಿದವರು ಅವರು. ಮಾಡಿದ ಪಾಪ ಅನುಭವಿಸಬೇಕಾಗುತ್ತದೆ. ಅವರ ಕ್ಷೇತ್ರದಲ್ಲಿ ನಾವು ಶಕ್ತಿ ಪ್ರದರ್ಶನ ಮಾಡೋದು ಸಾಧ್ಯವೇ ?," ಎಂದು ಪ್ರಶ್ನಿಸಿದರು.  

"ಚುನಾವಣೆ ಮುಗಿದ ಬಳಿಕ ನಮ್ಮ ಕಾರ್ಯಕರ್ತರು ಕೆ.ಆರ್. ಪೇಟೆ ಕ್ಷೇತ್ರದಿಂದ ಹೊರಬಂದು, ಹೊಳೆನರಸೀಪುರದ ನಂಬಿಹಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದರು.  ಅಲ್ಲಿಂದ ಹೊರಡುವ ಸಮಯದಲ್ಲಿ ಏಕಾಏಕಿ ನುಗ್ಗಿದ ಜೆಡಿಎಸ್ ಕಾರ್ಯಕರ್ತರು ಇಡೀ ಮನೆ ಹುಡುಕಾಡಿ ಹೋಗಿದ್ದರು.  ಸೂರಜ್ ರೇವಣ್ಣ ಜತೆ ಮತ್ತೆ ನುಗ್ಗಿದ ಜೆಡಿಎಸ್‌ ಕಾರ್ಯಕರ್ತರು ನಮ್ಮವರ ಮೇಲೆ ಹಲ್ಲೆ ನಡೆಸಿ, ಮನೆಯ 5 ಬಾಗಿಲು ಒಡೆದು ಹಾಕಿದ್ದಾರೆ.  ಆನಂದ್‌ ಅವರಿಗೆ ಗಂಭೀರ ಸ್ವರೂಪದ ಪೆಟ್ಟಾಗಿದೆ. ನವೀನ್‌ ಮೂಳೆಗೆ ಪೆಟ್ಟಾಗಿದೆ ಮತ್ತು ಶಿವಾನಂದ ತಲೆಗೆ ಪೆಟ್ಟು ಬಿದ್ದಿದೆ.  ಚುನಾವಣಾ ಅಕ್ರಮ ನಡೆದಿರುವ ಗುಮಾನಿ ಇದ್ದರೆ, ಅಧಿಕಾರಿಗಳ ಗಮನಕ್ಕೆ ತರಬೇಕೇ ಹೊರತು,  ಕಾನೂನು ಕೈಗೆ ತೆಗೆದುಕೊಂಡಿದ್ದು ಸರಿಯಲ್ಲ," ಎಂದು ಘಟನೆಯನ್ನು ಸಚಿವರು ಖಂಡಿಸಿದರು.

"ಸುಳ್ಳು ಕೇಸ್ ಹಾಕಿಕೊಂಡು, ಜನರ ಮೇಲೆ ದಬ್ಬಾಳಿಕೆ ಮಾಡಿಕೊಂಡು ಬಂದವರು ಐಜಿಪಿ ಅವರನ್ನೇ ದಫೇದಾರ ಅಂತಾ ಕರೆದಿದ್ದಾರೆ.  ನಾಟಕ, ದಬ್ಬಾಳಿಕೆ ಎಷ್ಟು ದಿನ ನಡೆಯಲು ಸಾಧ್ಯ?  ಜನ ಸಾಕಷ್ಟು ಸಹಿಸಿಕೊಂಡಿದ್ದಾರೆ. ಇಂತಹ ದೌರ್ಜನ್ಯ ಎಷ್ಟು ದಿನ‌ ನಡೆಯಲು ಸಾಧ್ಯ? ಇವರ ದಬ್ಬಾಳಿಕೆ ಕೊನೆಯಾಗುವ ದಿನಗಳು ಬಂದಿದೆ, ಕೊನೆಯಾಗುತ್ತದೆ,"ಎಂದರು.