ಕಾವೇರಿ ಮೈತ್ರಿ ಹೋರಾಟ ಸರ್ಕಾರದ ವಿರುದ್ಧ ಎಚ್‌ಡಿ‌ಕೆ-ಬಿ‌ಎಸ್‌ವೈ ಗುಡುಗು

ಪ್ರತಿಭಟನೆಯಲ್ಲಿ ತಮಿಳುನಾಡು ಏಜೆಂಟ್ ಡಿಕೆಶಿಗೆ ಧಿಕ್ಕಾರ, ಬರಿದಾಯ್ತು ಕಾವೇರಿ ಹಾಳಾಯ್ತು ಬೆಂಗಳೂರು, ಕುಡಿಯುವ ನೀರಿಗೆ ಸಂಚಕಾರ ಮಾಡಿದ ರಾಜ್ಯ ಸರ್ಕಾರಕ್ಕೆ ಧಿಕ್ಕಾರ, ಜೀವ ನದಿ ಕಾವೇರಿಯ ನೀರು ನಮ್ಮದು ಎಂಬ ವಿವಿಧ ಘೋಷಣೆಗಳನ್ನು ಕೂಗಿ, ರಾಜ್ಯಕ್ಕೆ ದ್ರೋಹ ಬಗೆದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಎಂದು ಆಕ್ರೋಶ ಹೊರಹಾಕಿದರು. 

Written by - RACHAPPA SUTTUR | Edited by - Yashaswini V | Last Updated : Sep 27, 2023, 02:43 PM IST
  • ನಾಡಿನ ನೆಲ ಜಲ ರಕ್ಷಣೆ ಮಾಡಲು ಎಲ್ಲದಕ್ಕೂ ತಾರ್ಕಿಕ ಅಂತ್ಯ ಕಾಣಲು ನಾವು ಒಟ್ಟಿಗೆ ಹೋರಾಟ ಮಾಡುತ್ತೇವೆ.‌
  • ರೈತರ ಬದುಕಿನ ಪ್ರಶ್ನೆ ನಮ್ಮ ಮುಂದಿದೆ. ಇದರಲ್ಲಿ ರಾಜಕಾರಣ ಇಲ್ಲ.
  • ಆದರೆ ಸಿಎಂ ಇಲ್ಲಿ ರಾಜಕೀಯ ಬೆರೆಸಲು ಮುಂದಾಗಿದ್ದಾರೆ- ಪ್ರತಿಪಕ್ಷ ನಾಯಕರ ಟೀಕೆ
ಕಾವೇರಿ ಮೈತ್ರಿ ಹೋರಾಟ ಸರ್ಕಾರದ ವಿರುದ್ಧ ಎಚ್‌ಡಿ‌ಕೆ-ಬಿ‌ಎಸ್‌ವೈ ಗುಡುಗು title=

ಬೆಂಗಳೂರು: ಕಾವೇರಿ ನೀರು ವಿಚಾರವಾಗಿ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಜಂಟಿ ಪ್ರತಿಭಟನೆ ನಡೆಸಿದರು.‌ ಪ್ರತಿಪಕ್ಷ ನಾಯಕರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಡಿಎಂಕೆ ಏಜೆಂಟ್ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಳಿಕ ಇದು ಮೊದಲ ಜಂಟಿ ಹೋರಾಟವಾಗಿದ್ದು, ಧರಣಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್,ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಬಿಜೆಪಿ ಸಂಸದರು, ಉಭಯ ಪಕ್ಷಗಳ ಶಾಸಕರು, ವಿಧಾನಪರಿಷತ್ ಸದಸ್ಯರು, ಉಭಯ ಪಕ್ಷದ ಪ್ರಮುಖರು ಭಾಗವಹಿಸಿ ಸರ್ಕಾರದ ವಿರುದ್ಧ ಹೋರಾಟ ನಡೆಸಿದರು. 

ಪ್ರತಿಭಟನೆಯಲ್ಲಿ ತಮಿಳುನಾಡು ಏಜೆಂಟ್ ಡಿಕೆಶಿಗೆ ಧಿಕ್ಕಾರ, ಬರಿದಾಯ್ತು ಕಾವೇರಿ ಹಾಳಾಯ್ತು ಬೆಂಗಳೂರು, ಕುಡಿಯುವ ನೀರಿಗೆ ಸಂಚಕಾರ ಮಾಡಿದ ರಾಜ್ಯ ಸರ್ಕಾರಕ್ಕೆ ಧಿಕ್ಕಾರ, ಜೀವ ನದಿ ಕಾವೇರಿಯ ನೀರು ನಮ್ಮದು ಎಂಬ ವಿವಿಧ ಘೋಷಣೆಗಳನ್ನು ಕೂಗಿ, ರಾಜ್ಯಕ್ಕೆ ದ್ರೋಹ ಬಗೆದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಎಂದು ಆಕ್ರೋಶ ಹೊರಹಾಕಿದರು. 

ಇದನ್ನೂ ಓದಿ- 3000 ಕ್ಯೂಸೆಕ್ ನೀರು ಹರಿಸಲು ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಲು ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಿಎಂ, ಡಿಸಿಎಂ ಡಿಎಂಕೆ ಏಜೆಂಟರಾಗಿದ್ದಾರೆ: 
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಡಿಎಂಕೆ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ. ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು. 

ರೈತರ ಹೋರಾಟಕ್ಕೆ ಬಿಜೆಪಿ ಜೆಡಿಎಸ್ ಬೆಂಬಲ ನೀಡುತ್ತದೆ. ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಅಂದರೆ ಕಾನೂನು ಸುಸವ್ಯವಸ್ಥೆ ಹಾಳಾಗುತ್ತದೆ. ಅದಕ್ಕೆ ನೀವೇ ಕಾರಣ ಆಗುತ್ತೀರ. ರಾಜ್ಯದ ಜನರ ಹಿತದೃಷ್ಟಿಯಿಂದ ಜೆಡಿಎಸ್ ಹಾಗೂ ಬಿಜೆಪಿ ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ.‌ ನಿಮ್ಮ ರಾಜಕೀಯ ದೊಂಬರಾಟಕ್ಕೆ ಅವಕಾಶ ಕೊಡಲ್ಲ. ನಾಲ್ಕು ಲಕ್ಷ ಹೆಕ್ಟೇರ್ ತ‌.ನಾಡು ಬೆಳೆ ಬೆಳೆದಿದ್ದಾರೆ. ನೀವು ತ‌.ನಾಡಿನ ಏಜೆಂಟರಾಗಿ ವರ್ತನೆ ಮಾಡುತ್ತಿದ್ದೀರಿ. ಜನರ ರಕ್ಷಣೆಗೆ ಮುಂದಾಗದೇ ಇದ್ದರೆ ನಾವು ಹೋರಾಟ ಮಾಡುತ್ತೇವೆ. ಹಗುರವಾಗಿ ತೆಗೆದು ಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದರು.

ಸರ್ಕಾರ ಗ್ಯಾರಂಟಿಯ ಭ್ರಮೆಯಲ್ಲಿದೆ: 
ಸರ್ಕಾರ ಗ್ಯಾರಂಟಿಯ ಭ್ರಮಾ ಲೋಕದಲ್ಲಿದೆ. ಅದು ಬಿಟ್ಟು ಬೇರೆ ಏನು ಕಾಣುತ್ತಿಲ್ಲ. ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ‌. ನ್ಯಾಯ ದೊರಕುವವರೆಗೆ ನಾವು ಹೋರಾಟ ಮಾಡುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ನಾಡಿನ ನೆಲ ಜಲ ರಕ್ಷಣೆ ಮಾಡಲು ಎಲ್ಲದಕ್ಕೂ ತಾರ್ಕಿಕ ಅಂತ್ಯ ಕಾಣಲು ನಾವು ಒಟ್ಟಿಗೆ ಹೋರಾಟ ಮಾಡುತ್ತೇವೆ.‌ ರೈತರ ಬದುಕಿನ ಪ್ರಶ್ನೆ ನಮ್ಮ ಮುಂದಿದೆ. ಇದರಲ್ಲಿ ರಾಜಕಾರಣ ಇಲ್ಲ. ಆದರೆ ಸಿಎಂ ಇಲ್ಲಿ ರಾಜಕೀಯ ಬೆರೆಸಲು ಮುಂದಾಗಿದ್ದಾರೆ. ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳಬೇಕು. ಸರ್ವ ಪಕ್ಷ ಸಭೆ ನಡೆಸಬೇಕು ಎಂದು ನಾವು ಒತ್ತಡ ಹಾಕಿದ ಬಳಿಕ ಸಭೆ ಕರೆದಿದ್ದರು. ಆದರೆ ನಮ್ಮ ಸಲಹೆ ಗಳನ್ನು ಯಾಹುದನ್ನೂ ಪರಿಗಣಿಸಿಲ್ಲ. ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೆ ನೀರು ಬಿಡುವ ಪರಿಸ್ಥಿತಿ ಬಂತು. ಕೋರ್ಟ್ ಮುಂದೆ ಹೋಗಲು ಉಡಾಫೆ ಮಾಡಿದರು ಎಂದು ಟೀಕಿಸಿದರು.

ಇದನ್ನೂ ಓದಿ- Cauvery Water Dispute: 10 ಸಾವಿರ ಕ್ಯೂಸೆಕ್ಸ್ ಒಳಹರಿವು ಇದೆ ಎಂದು ಏಕೆ ಹೇಳ್ಬೇಕಿತ್ತು?- ಬೊಮ್ಮಾಯಿ

ನೀರವಾರಿ ಸಚಿವರಿಗೆ ಬೆಂಗಳೂರಿನಲ್ಲಿ ವ್ಯವಹಾರ ಮಾಡಲು ಸಮಯ ಇಲ್ಲ. ಅವರಿಗೆ ನೀರಿನ ಬಗ್ಗೆ ಸಮಯ ಕೊಡಲು ಆಗುತ್ತಾ?. 10, 000 ಕ್ಯುಸೆಕ್ಸ್ ಒಳಹರಿವು ಇದೆ ಎಂದು ಹೇಳುತ್ತಾರೆ. ಇದು ರಾಜ್ಯ ಸರ್ಕಾರದ ಉಡಾಫೆಗೆ ಹಿಡಿದ ಕನ್ನಡಿ. ಡಿಸಿಎಂ 3000 ಕ್ಯುಸೆಕ್ಸ್ ನೀರು ಬಿಡಲು ಹೇಳಿರುವುದು ತೃಪ್ತಿ ತಂದಿದೆ ಎಂದಿದ್ದಾರೆ. ಮೆಟ್ಟೂರು ಅಣೆಕಟ್ಟಿನಲ್ಲಿ ಒಳ ಹರಿವು  6,450 ಕ್ಯುಸೆಕ್ಸ್ ಇದೆ. ಹೊರ ಹರಿವು 7371 ಕ್ಯುಸೆಕ್ಸ್ ಇದೆ. ಆದರೆ, ನಮಗೆ ಒಂದು ಬೆಳೆ ಬೆಳೆಯಲು ಆಗುತ್ತಿಲ್ಲ. ಕೇಂದ್ರ ಸರ್ಕಾರವನ್ನು ಭೇಟಿ ಮಾಡಿ ಸ್ಥಳ ಪರಿಶೀಲನೆ ಮಾಡುವಂತೆ ಮನವಿ ಮಾಡಲು ಮೀನಾಮೇಷ ನೋಡುತ್ತಿದ್ದಾರೆ. ಮುಂದಿನ ದಿನ ಕುಡಿಯಲು ನೀರಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಹೆಚ್ ಡಿಡಿ ಪತ್ರ ಬರೆದಿದ್ದಾರೆ. ಆದರೆ ತ.ನಾಡು ಸಿಎಂ ಪಿಎಂ ನೇತೃತ್ವದ ಸಭೆಗೆ ಬರ್ತಾರ?. ಕಾಂಗ್ರೆಸ್ ನವರು ಸ್ಟಾಲಿನ್ ಅವರನ್ನು ಸಭೆಗೆ ಬರಲು ಒಪ್ಪಿಸುತ್ತೀರ?. ಗಾಂಧಿ ಪ್ರತಿಮೆ ಮುಂದೆ ಸಹಭಾಗಿತ್ವದಲ್ಲಿ ಹೋರಾಟ ನಡೆಸುತ್ತಿದ್ದೇವೆ. ಮುಂದಿನ ದಿನ ಒಗ್ಗಟ್ಟಾಗಿ ಹೋರಾಟ ಮಾಡುತ್ತೇವೆ. ಇದರ ಹಿಂದೆ ಯಾವುದೇ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದರು. 

ಕೇಂದ್ರದ ಸದಸ್ಯರು ರಾಜ್ಯದ ಪರ ಮಾತನಾಡುತ್ತಿದ್ದಾರೆ:
ಸಂಸದ ತೇಜಸ್ವಿ ಸೂರ್ಯ ಮಾತನಾಡುತ್ತಾ, ರಾಜ್ಯ ಸರ್ಕಾರ ಕಳೆದ ಮೂರು ನಾಲ್ಕು ತಿಂಗಳಿಂದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಸರಿಯಾದ ವಾದ ಮಂಡಿಸಿಲ್ಲ. ಹಾಗಾಗಿ ರಾಜ್ಯಕ್ಕೆ ವ್ಯತಿರಿಕ್ತ ಆದೇಶ ಬರುವಂತಾಗಿದೆ. ಬರ ಪೀಡಿತ ಎಂದು ಪ್ರಾಧಿಕಾರದ ಮುಂದೆ ತರಲು ಸರ್ಕಾರ ವಿಫಲವಾಗಿದೆ. ಜೂನ್ ವರೆಗೆ ನಮಗೆ ಕುಡಿಯಲು, ರೈತರಿಗೆ ಒಟ್ಟು 106 ಟಿಎಂಸಿ ನೀರು ಬೇಕು. ಆದರೆ ಈಗ ಇರುವ ನೀರು ಬರೇ 50 ಟಿಎಂಸಿ ಇದೆ. ಸಂಕಷ್ಟವನ್ನು ಹಂಚಿಕೊಳ್ಳುವುದು ತ.ನಾಡು ಹೊಣೆಯಾಗಿದೆ. ನಿನ್ನೆ ಬೆಂಗಳೂರು ಬಂದ್ ಇತ್ತು. ಆದರೂ, 19 ದಿನಗಳ ಕಾಲ 3000 ಕ್ಯುಸೆಕ್ಸ್ ನೀರು ಬಿಡಲು ಶಿಫಾರಸು ಮಾಡಲಾಗಿದೆ. ಆದರೂ ಡಿಸಿಎಂ ಡಿಕೆಶಿ ಈ ಶಿಫಾರಸು ನಮಗೆ ತೃಪ್ತಿ ತಂದಿದೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಕಿಡಿ ಕಾರಿದರು.

ಇದನ್ನೂ ಓದಿ- ತಮಿಳುನಾಡು ಬೇಡಿಕೆ ತಿರಸ್ಕಾರ ಮಾಡಿದ್ದು ಸಂತಸ ತಂದಿದೆ: ಡಿ.ಕೆ.ಶಿವಕುಮಾರ್

ಕಳೆದ ನಾಲ್ಕು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಗಳು ರಾಜ್ಯದ ಪರ ಮಾತನಾಡಿರುವ ಬಗ್ಗೆ ಬಹಿರಂಗ ಪಡಿಸಿ. ಕೇಂದ್ರ ಸರ್ಕಾರದ ಸದಸ್ಯರು, ರಾಜ್ಯದ ಪರ‌ ಮಾತನಾಡಿದ್ದಾರೋ ಇಲ್ಲವೋ ಎಂದು ಬಹಿರಂಗ‌ಪಡಿಸಿ. ರಾಜ್ಯದ ಪರವಾಗಿ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ್ದಾರೆ ಎಂದು ತಿಳಿಸಿದರು.

ಸರ್ಕಾರ ಕುಂಬಕರಣ ನಿದ್ದೆಯಲ್ಲಿದೆ:
ಇದೇ ವೇಳೆ ಬಿ.ವೈ.ವಿಜಯೇಂದ್ರ ಮಾತನಾಡುತ್ತಾ, ರಾಜ್ಯ ಸರ್ಕಾರ ಕುಂಬ ಕರಣ ನಿದ್ದೆಯಲ್ಲಿದೆ. ಕಾವೇರಿ ವಿಚಾರದಲ್ಲಿ ಸರ್ಕಾರ ಪ್ರತಿ ಹಂತದಲ್ಲೂ ಮೈ ಮರೆತಿದೆ. ಕಾಂಗ್ರೆಸ್ ಸಪೂರ್ಣವಾಗಿ ಎಡವಿದೆ. ಜೆಡಿಎಸ್ ಪಕ್ಷ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ‌. ಅದಕ್ಕಾಗಿ ಹೋರಾಟಕ್ಕೆ ಇಳಿದಿದ್ದಾರೆ. ನೀವು ರಾಜಕಾರಣ ಮಾಡುತ್ತಿದ್ದೀರ. ಕಾವೇರಿ ಕೊಳ್ಳದ ರೈತರ ಪರವಾಗಿ ಮಾತನಾಡಲು ಆಗುತ್ತಿಲ್ಲ‌. ಇಂಡಿಯಾ ಮೈತ್ರಿಗಾಗಿ ತ‌.ನಾಡು ಸಿಎಂ ಸ್ಟಾಲಿನ್ ಜೊತೆ ಕುಳಿತುಕೊಳ್ಳುತ್ತಾರೆ. ಆದರೆ ರೈತರ ಸಂಕಷ್ಟದ ಬಗ್ಗೆ ಮಾತನಾಡಲು ಆಗುತ್ತಿಲ್ಲ ಎಂದು ಕಿಡಿ ಕಾರಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News