ಬೆಂಗಳೂರು: ಕೃಷಿ ಸಾಲಾ ಮನ್ನಾ, ರೈತರ ಆತ್ಮಹತ್ಯೆ ಹಾಗೂ ಕೃಷಿಕರ ಇತರ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇಂದು ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಪ್ರಗತಿಪರ ಕೃಷಿಕರ ಸಭೆ ಕರೆದಿದ್ದಾರೆ.
ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸಹ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ಸಹ ಈ ಸಭೆಗೆ ಆಹ್ವಾನಿಸಲಾಗಿದೆ. ಅಲ್ಲದೆ, ಪ್ರತಿ ಜಿಲ್ಲೆಯಿಂದ ಪ್ರಗತಿಪರ ಕೃಷಿಕರನ್ನು ಈ ಸಭೆಗೆ ಆಹ್ವಾನಿಸಲಾಗಿದೆ.
ಬಿಎಸ್ ವೈ ಮಂಗಳೂರಿಗೆ ತೆರಳುವ ಕಾರಣ ಸಿಎಂ ಕರೆದಿರುವ ರೈತರ ಸಭೆಯಲ್ಲಿ ವಿಧಾನಸಭೆ ವಿಪಕ್ಷ ಉಪನಾಯಕ ಗೋವಿಂದ ಕಾರಜೋಳ ಭಾಗವಹಿಸಲಿದ್ದಾರೆ ಎಂದು ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ವೈ ಮಂಗಳೂರಿನಲ್ಲಿ ಪ್ರವಾಹದಿಂದ ಮುಳುಗಿರುವ ಪರಿಸ್ಥಿತಿ ಇದೆ. ನಾನು ಮತ್ತು ಅನಂತಕುಮಾರ್ ರಾಜನಾಥ್ ಸಿಂಗ್ ಅವರ ಜೊತೆ ಎಲ್ಲಾ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದ್ದೇವೆ. ಎಲ್ಲಾ ನೆರವು ನೀಡುವ ಭರವಸೆಯನ್ನು ರಾಜನಾಥ್ ಸಿಂಗ್ ಕೊಟ್ಟಿದ್ದಾರೆ. ನಾನು ಕೂಡಾ ಮಂಗಳೂರಿಗೆ ಭೇಟಿ ಕೊಡುತ್ತೇನೆ. ಬುಧವಾರ ನಾನು ಮಂಗಳೂರಿಗೆ ತೆರಳುವ ಕಾರಣ ಸಿಎಂ ಕರೆದಿರುವ ರೈತರ ಸಭೆಗೆ ವಿಧಾನಸಭೆ ವಿಪಕ್ಷ ಉಪನಾಯಕ ಗೋವಿಂದ ಕಾರಜೋಳ ಭಾಗವಹಿಸಲಿದ್ದಾರೆ ಎಂದು ಹೇಳಿದರು.