ಬೆಂಗಳೂರು: ಕೊಡಗು ನೆರೆ ಸಂತ್ರಸ್ತರ ಶಿಬಿರಕ್ಕೆ ಭೇಟಿ ಕೊಟ್ಟು ನಿರಾಶ್ರಿತರಿಗೆ ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಜನರನ್ನು ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಅವರು, ಅಲ್ಲಿ ಆಶ್ರಯ ಪಡೆದಿರುವ ಪ್ರವಾಹ ಸಂತ್ರಸ್ತರಿಗೆ ಬಿಸ್ಕೆಟ್ ಪ್ಯಾಕೆಟ್ ಗಳನ್ನು ಕೈಗೆ ನೀಡದೆ ಎಸೆದಿರುವುದು ಇದೀಗ ವ್ಯಾಪಕ ಟೀಕೆಗೆ ಕಾರಣವಾಗಿದೆ. ಇದೀಗ ಸಚಿವ ಹೆಚ್.ಡಿ. ರೇವಣ್ಣ ನಡೆಗೆ ಸಿಎಂ ಕುಮಾರಸ್ವಾಮಿ ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದ್ದಾರೆ.
ರೇವಣ್ಣ ವಿಚಾರದಲ್ಲಿ ಅನ್ಯಥಾ ಭಾವಿಸಬೇಡಿ ಎಂದಿರುವ ಸಿಎಂ, ರೇವಣ್ಣ ಅವರು ಕಳೆದ ನಾಲ್ಕೈದು ದಿನಗಳಿಂದಲೂ ನಿರಾಶ್ರಿತರಿಗೆ ಹಾಲು, ಆಹಾರ, ಬಟ್ಟೆ ಇನ್ನಿತರ ಅಗತ್ಯ ವಸ್ತುಗಳನ್ನು ಪೂರೈಸುವ ಕೆಲಸದಲ್ಲಿ ನಿರತರಾಗಿದ್ದಾರೆ. ರೇವಣ್ಣ ಬಿಸ್ಕೆಟ್ ಎಸೆದಿದ್ದು ತಪ್ಪು. ಒಂದು ಶಿಬಿರದಲ್ಲಿ ಮಾತ್ರ ಜನಜಂಗುಳಿಯಿಂದ ಹೀಗಾಗಿದೆ. ಈ ಘಟನೆಯಿಂದ ಅವರಿಗೂ ನೋವಾಗಿದೆ. ಒಳ್ಳೆ ಕೆಲಸ ಮಾಡಿ ಕೊನೆಗೂ ಈ ಘಟನೆಯಿಂದ ನೊಂದುಕೊಂಡಿದ್ದಾರೆ. ಎಲ್ಲೋ ಒಂದು ಕಡೆ ತಪ್ಪಾಗಿದೆ ಆದರೆ ದುರಂಕಾರದಿಂದ ವರ್ತಿಸಿಲ್ಲ ಎಂದು ಸಿಎಂ ಕುಮಾರಸ್ವಾಮಿ ಸಚಿವ ರೇವಣ್ಣ ಅವರ ವರ್ತನೆಗೆ ಸಮಜಾಯಿಷಿ ನೀಡಿದ್ದಾರೆ.
ಈ ಹಿಂದೆ ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿ, ಹಾಸನ ಕೆಎಂಎಫ್ನಿಂದ ಉಚಿತವಾಗಿ ಸಾವಿರಾರು ಲೀಟರ್ ಹಾಲು ಮತ್ತು ಬಿಸ್ಕೆಟ್ ಸರಬರಾಜು ಮಾಡಿ ಮಾನವೀಯತೆ ಮೆರೆದಿದ್ದ ರೇವಣ್ಣ ಅವರು, ಭಾನುವಾರ ಜಿಲ್ಲೆಯ ರಾಮನಾಥಪುರದಲ್ಲಿನ ಗಂಜಿ ಕೇಂದ್ರಕ್ಕೆ ಭೇಟಿ ನೀಡಿ, ಸಂತ್ರಸ್ತರಿಗೆ ಬಿಸ್ಕೆಟ್ ಎಸೆದಿದ್ದಾರೆ. ಈ ಬಗ್ಗೆ ರಾಜ್ಯಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.