ಬೆಂಗಳೂರು: ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡುರಾವ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ರಾಜಭವನಕ್ಕೆ ಹೋಗಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದ ವಿರುದ್ಧ ದೂರು ನೀಡಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ.
ನಕಲಿ ಧ್ವನಿ ಸುರಳಿ ಸೃಷ್ಟಿಸಿ, ಜನತೆಯಲ್ಲಿ ಗೊಂದಲ ಮೂಡಿಸುವುದು ಕಾಂಗ್ರೆಸ್ಗೆ ಕರಗತವಾಗಿದೆ. ಅವರು ಯಾವ ಆಧಾರದಲ್ಲಿ ಇಂತಹ ಹೇಳಿಕೆ ನೀಡುತ್ತಿದ್ದಾರೆ? ಇಂತಹ ವೃತ ಪ್ರಯತ್ನಗಳು ಕಾಂಗ್ರೆಸ್ ಗೆ ಶೋಭೆ ತರುವುದಿಲ್ಲ. ಅನರ್ಹ ಶಾಸಕರ ಪ್ರಕರಣ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿರುವಾಗ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ನ್ಯಾಯಾಲಯದ ಮೇಲೆ ಪ್ರಭಾವ ಬೀರಿವುದು ಮಹಾ ಅಪರಾಧ ಮತ್ತು ರಾಜಕೀಯ ಕುತಂತ್ರವಾಗಿದೆ. ಇದೊಂದು ರಾಜಕೀಯ ಷಡ್ಯಂತ್ರ ಎಂದು ಡಿಸಿಎಂ ಕಾರಜೋಳ ತಿಳಿಸಿದ್ದಾರೆ.
ನೆರೆ ಸಂತ್ರಸ್ತರಿಗೆ ಹಾಗೂ ಜನತೆಯ ಕಷ್ಟಗಳಿಗೆ ಸ್ಪಂದಿಸುವುದನ್ನು ಬಿಟ್ಟು, ಅನಗತ್ಯ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದ ಅವರು, ಇದು ಕಾಂಗ್ರೆಸ್ ಪಕ್ಷದ ಬೌದಿಕ ದಿವಾಳಿಯ ಸಾಕ್ಷಿ ಎಂದು ವಾಗ್ಧಾಳಿ ನಡೆಸಿದರು.
ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಪ್ರಕೃತಿವಿಕೋಪದ ಸಂದರ್ಭದಲ್ಲಿ ಸಂತ್ರಸ್ತರಿಗೆ ಆತ್ಮಸೈರ್ಯ ತುಂಬಿ, ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಗೊಂದಲ ಮೂಡಿಸಿ, ಪುಕ್ಕಟೆ ಪ್ರಚಾರ ಪಡೆಯುವುದು ಸರಿಯಲ್ಲ ಎಂದು ಡಿಸಿಎಂ ತಿಳಿಸಿದ್ದಾರೆ.