ನವದೆಹಲಿ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ರಣತಂತ್ರ ರೂಪಿಸುತ್ತಿರುವುದು ಹೊಸ ವಿಷಯವೇನಲ್ಲ. ಆದರೆ ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್. ಯಡಿಯೂರಪ್ಪ ಹಾಗೂ ಐವರು ಕಾಂಗ್ರೆಸ್ ಶಾಸಕರು ಒಂದೇ ವಿಮಾನದಲ್ಲಿ ದೆಹಲಿಗೆ ಆಗಮಿಸಿದ್ದು, ಬಿಜೆಪಿ ಆಪರೇಷನ್ ಕಮಲ ಮಾಡಲಿದೆಯಾ ಎಂಬ ಅನುಮಾನಗಳಿಗೆ ಪುಷ್ಟಿ ನೀಡಿದಂತಾಗಿದೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಇಂದು ಕೇಂದ್ರ ವಾಣಿಜ್ಯ ಮತ್ತು ಕೃಷಿ ಸಚಿವರ ಭೇಟಿ ಹಿನ್ನೆಲೆಯಲ್ಲಿ ದೆಹಲಿಗೆ ಆಗಮಿಸಿದ್ದು, ಅಡಿಕೆ ಬೆಳೆಗಾರರ ನಿಯೋಗದೊಂದಿಗೆ ಕೇಂದ್ರ ಸಚಿವರನ್ನು ಭೇಟಿಯಾಗಲಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ. ಆದರೆ ಸದ್ದಿಲ್ಲದೇ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿ ಕೈ ಶಾಸಕರನ್ನು ಮುಂದಿಟ್ಟುಕೊಂಡು ರಣತಂತ್ರ ಹೆಣೆಯುತ್ತಿದೆಯೇ ಎಂಬ ಸಂಶಯ ವ್ಯಕ್ತವಾಗುತ್ತಿದೆ.
ಯಡಿಯೂರಪ್ಪ ದೆಹಲಿಗೆ ಆಗಮಿಸಿದ ವಿಮಾನದಲ್ಲೇ ಐವರು ಕಾಂಗ್ರೆಸ್ ಶಾಸಕರಾದ ಸಚಿವ ರಮೇಶ್ ಜಾರಕಿಹೊಳಿ, ರಹೀಂ ಖಾನ್, ನಾರಾಯಣ್ ರಾವ್ ಸೇರಿದಂತೆ ಇನ್ನಿಬ್ಬರು ಶಾಸಕರು ಪಯಾಣ ಬೆಳಸಿದ್ದು, ಬಿಜೆಪಿ ಆಪರೇಷನ್ ಕಮಲ ಮಾಡಲಿದೆಯಾ ಎಂಬ ಚರ್ಚೆಗಳು ಒಂದೆಡೆಯಾದರೆ, ಯಡಿಯೂರಪ್ಪ ಹಾಗೂ ಕಾಂಗ್ರೆಸ್ ಶಾಸಕರು ವಿಮಾನದಲ್ಲಿ ಆಕಸ್ಮಿಕವಾಗಿ ಭೇಟಿಯಾಗಿರಬಹುದು ಎನ್ನುವ ಬಗ್ಗೆಯೂ ಚರ್ಚೆಗಳು ಆರಂಭವಾಗಿದೆ.