ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿ ಆದೇಶಿಸಿದ್ದ ಈ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಆದೇಶವನ್ನು ಹಿಂಪಡೆಯಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಸಚಿವ ಸಂಪುಟ ಸಭೆ ಬಳಿಕ ವಿಧಾನ ಸೌಧದಲ್ಲಿ ಸುದ್ದಿಗೋಷ್ಟಿ ಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್, ಡಿಕೆಶಿ ವಿರುದ್ಧ ತನಿಖೆಯನ್ನು ಸಿಬಿಐಗೆ ವಹಿಸಲು ಹಿಂದಿನ ಸರ್ಕಾರ ನಿರ್ಣಯ ಮಾಡಿತ್ತು. ಕಾನೂನಾತ್ಮಕವಾಗಿ ಸ್ಪೀಕರ್ ರಿಂದ ನಿರ್ಣಯ ಪಡೆಯಬೇಕಿತ್ತು. ಅದನ್ನು ಪಡೆದಿರಲಿಲ್ಲ. ಸಿಬಿಐಗೆ ಮಂಜೂರಾತಿ ನೀಡಿದ್ದರು. ಹಿಂದಿನ ಅಡ್ವೊಕೇಟ್ ಜನರಲ್ ಮತ್ತು ನಮ್ಮ ಸರ್ಕಾರದ ಅಡ್ವೊಕೇಟ್ ಜನರಲ್ ಅಭಿಪ್ರಾಯ ವನ್ನು ಗಂಭೀರವಾಗಿ ಪರಿಗಣಿಸಿ ಸ್ಪೀಕರ್ ರಿಂದ ಪಡೆಯಬೇಕಾದ ಅನುಮತಿಯನ್ನು ನಿಯಮಾನುಸಾರವಾಗಿ ಪಡೆಯದೆ ಅಂದಿನ ಸರ್ಕಾರ ತೆಗೆದುಕೊಂಡಿದ್ದ ಕ್ರಮ ಕಾನೂನು ಪ್ರಕಾರ ಇದ್ದಿಲ್ಲ ಎಂದು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಈ ಸಚಿವ ಸಂಪುಟ ಸಭೆಗೆ ಡಿಸಿಎಂ ಡಿಕೆಶಿ ಗೈರಾಗಿದ್ದರು. ಹಿತಾಸಕ್ತಿ ಸಂಘರ್ಷ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಿಂದ ದೂರ ಉಳಿದಿದ್ದರು ಎನ್ನಲಾಗಿದೆ.
ಇದನ್ನೂ ಓದಿ : ಬಿಜೆಪಿ 'ಸೋಮನಹಳ್ಳಿ ಮುದುಕಿ ಕಥೆ' ಆಗಿದೆ: ಡಿ.6ರ ನಂತರ ಎಲ್ಲವನ್ನೂ ಹೇಳುತ್ತೇನೆ: ವಿ.ಸೋಮಣ್ಣ
ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಗೃಹ ಇಲಾಖೆಗೆ ಈ ಸಂಬಂಧ ಕಾನೂನು ಅಭಿಪ್ರಾಯ ನೀಡಿದ್ದರು. ಈ ನಿಟ್ಟಿನಲ್ಲಿ ಒಳಾಡಳಿತ ಇಲಾಖೆ ಸಂಪುಟ ಸಭೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಡಿ.ಕೆ.ಶಿವಕುಮಾರ್ ವಿರುದ್ಧದ ಇದೇ ಅಕ್ರಮ ಆಸ್ತಿ ಗಳಿಗೆ ಪ್ರಕರಣ ನ.29ರಂದು ಹೈ ಕೋರ್ಟ್ ಮುಂದೆ ವಿಚಾರಣೆಗೆ ಬರಲಿದೆ.ಅಂದು ನಡೆಯುವ ವಿಚಾರಣೆ ವೇಳೆ ಸಚಿವ ಸಂಪುಟದ ತೀರ್ಮಾನವನ್ನು ಕೋರ್ಟ್ ಗೆ ಸಲ್ಲಿಸುವ ಸಾಧ್ಯತೆ ಇದೆ.
ಬಿಜೆಪಿ ಸರ್ಕಾರ ಏನು ಮಾಡಿತ್ತು : ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣವನ್ನು ಸೆ.25, 2019ರಂದು ದೆಹಲಿ ವಿಶೇಷ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಕಾಯ್ದೆ 1946 ಅಡಿ ಸೆಕ್ಷನ್ 6 ಅನ್ವಯ ತನಿಖೆ ಕೈಗೊಳ್ಳಲು ಸಿಬಿಐಗೆ ವಹಿಸಿ ಆದೇಶಿಸಿದ್ದರು.
ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿದ್ದ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕ ಹೈ ಕೋರ್ಟ್ 2020ರಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಈ ಅರ್ಜಿಯನ್ನು ಅಕ್ಟೋಬರ್ 18, 2023 ವಜಾಗೊಳಿಸಿತ್ತು. ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್, ತನಿಖೆ ಮುಂದುವರಿಸಲು ಅನುಮತಿ ನೀಡಿತ್ತು.
ಈ ತೀರ್ಪು ಸ್ವೀಕರಿಸಿದ ಮೂರು ತಿಂಗಳ ಒಳಗೆ ಸಿಬಿಐ ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಬೇಕು. ತನಿಖಾಧಿಕಾರಿ ದೋಷಾರೋಪ ಪಟ್ಟಿ ಸಲ್ಲಿಸಿದರೆ ಆರೋಪ ಮುಕ್ತಿ ಕೋರಿ ಅಥವಾ ಆರೋಪ ಪಟ್ಟಿಯನ್ನು ವಜಾಗೊಳಿಸುವಂತೆ ಕೋರುವ ಸ್ವಾತಂತ್ರ್ಯ ಡಿ.ಕೆ.ಶಿವಕುಮಾರ್ ಗೆ ಇರಲಿದೆ ಎಂದು ನ್ಯಾಯಪೀಠ ಹೇಳಿತ್ತು. ಈ ಕುರಿತ ಸಂಪುಟಗಟ್ಟಲೆ ದಾಖಲೆಗಳೆಲ್ಲಾ ತನಿಖಾಧಿಕಾರಿಯ ಪರಿಶೀಲನೆಯಲ್ಲಿವೆ. ಸಿಬಿಐ ತನ್ನ ತನಿಖೆಯನ್ನು ಬಹುತೇಕ ಸಮಾಪ್ತಿಯ ಹಂತಕ್ಕೆ ತಂದು ನಿಲ್ಲಿಸಿದೆ. ಹೀಗಾಗಿ, ಅರ್ಜಿದಾರರು ಎಫ್‌ಐಆರ್ ರದ್ದುಪಡಿಸುವಂತೆ ಕೋರುವಲ್ಲಿ ವಿಳಂಬವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.
ತನಿಖೆಯ ಈ ಹಂತದಲ್ಲಿ, ನ್ಯಾಯಾಲಯ ಎಫ್ಐಆರ್ ರದ್ದು ಕೋರಿದ ಮನವಿಯನ್ನು ಪುರಸ್ಕರಿಸಲು ಆಗದು. ಅಂತಿಮ ವರದಿ ಸಲ್ಲಿಸುವ ಮೊದಲೇ ಇಂತಹ ಮನವಿಯನ್ನು ಮಾನ್ಯ ಮಾಡಿದರೆ ಅದು ಮತ್ತೊಂದು ಮಿನಿ ವಿಚಾರಣೆಯೇ ಆಗಿಬಿಡುತ್ತದೆ. ಒಂದು ವೇಳೆ ಸಿಬಿಐ ತನಿಖೆ ವಿಳಂಬವಾಗುತ್ತಿದೆ ಎನ್ನಿಸಿದರೆ ಅರ್ಜಿದಾರರು ಅದಕ್ಕೆ ಕಾಲಮಿತಿ ಕೋರಿಕೆ ಸಲ್ಲಿಸಬಹುದು‘ ಎಂದು ತಿಳಿಸಿದೆ.
ಇದನ್ನೂ ಓದಿ : ವಿದ್ಯಾರ್ಥಿಗಳ ಪ್ರವಾಸಕ್ಕೂ ಕಾಂಗ್ರೆಸ್ ಸರ್ಕಾರದಿಂದ ಕೊಕ್ಕೆ: ಬಿಜೆಪಿ ಆಕ್ರೋಶ
ಪ್ರಕರಣವೇನು? : ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ವಿವಿಧ ಕಲಂಗಳ ಅಡಿಯಲ್ಲಿ 2020ರ ಅ. 3ರಂದು ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ‘ಸಿಬಿಐ ದಾಖಲಿಸಿರುವ ಎಫ್‌ಐಆರ್ ಕಾನೂನು ಬಾಹಿರವಾಗಿದ್ದು, ತನಿಖೆ ರದ್ದುಪಡಿಸಬೇಕು’ ಎಂದು ಕೋರಿ ಶಿವಕುಮಾರ್, 2022ರ ಜುಲೈನಲ್ಲಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ, 2023ರ ಫೆಬ್ರುವರಿ 10ರಂದು ತನಿಖೆಗೆ ಮಧ್ಯಂತರ ತಡೆ ನೀಡಿತ್ತು. ಈ ತಡೆ ಆದೇಶವನ್ನು ಈ ತನಕ ವಿಸ್ತರಿಸಿಕೊಂಡು ಬರಲಾಗಿತ್ತು. ವಿಚಾರಣೆಯನ್ನು 2023ರ ಜುಲೈ 31ರಂದು ಪೂರ್ಣಗೊಳಿಸಿದ್ದ ನ್ಯಾಯಪೀಠ ತೀರ್ಪು ಕಾಯ್ದಿರಿಸಿತ್ತು.
‘ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸಿದ್ದ ರಾಜ್ಯ ಸರ್ಕಾರದ ಆದೇಶ ರದ್ದುಪಡಿಸಬೇಕು‘ ಎಂದು ಕೋರಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಮತ್ತೊಂದು ಅರ್ಜಿಯನ್ನು ನಾಲ್ಕು ತಿಂಗಳ ಹಿಂದಷ್ಟೇ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿತ್ತು. ಇದೀಗ ಡಿ.ಕೆ.ಶಿವಕುಮಾರ್ ವಿರುದ್ಧದ ಇದೇ ಅಕ್ರಮ ಆಸ್ತಿ ಗಳಿಗೆ ಪ್ರಕರಣ ನ.29ರಂದು ಹೈ ಕೋರ್ಟ್ ಮುಂದೆ ವಿಚಾರಣೆಗೆ ಬರಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.