ಬೆಂಗಳೂರು: ತಮಿಳುನಾಡಿನ ‘ವಿಡುದಲೈ ಚಿರುತೈಗಳ್ ಕಚ್ಚಿ (VCK)’ ಕೊಡಮಾಡುವ ‘ಡಾ. ಬಿ.ಆರ್.ಅಂಬೇಡ್ಕರ್ ಸುದರ್ ಪ್ರಶಸ್ತಿ’ಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಶನಿವಾರ ಚೆನ್ನೈನಲ್ಲಿ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಅವರು, ‘ಸಾಮಾಜಿಕ ನ್ಯಾಯ ಖಾತ್ರಿಪಡಿಸುವಲ್ಲಿ ಕೇಂದ್ರದ ಬಿಜೆಪಿ ಸರ್ಕಾರವು ‘ದ್ವಂದ್ವ’ ನಿಲುವು ಅನುಸರಿಸುತ್ತಿದೆ’ ಎಂದು ಹೇಳಿದರು.
ಅಂಬೇಡ್ಕರ್ಗೆ ಜಯವಾಗಲಿ, ಪೆರಿಯಾರ್ಗೆ ಜಯವಾಗಲಿ ಎಂದು ಸಿದ್ದರಾಮಯ್ಯ ತಮಿಳಿನಲ್ಲಿಭಾಷಣ ಆರಂಭಿಸಿದರು. ‘ಪೆರಿಯಾರ್ ಅವರ ನಾಡಿನಲ್ಲಿ ಅಂಬೇಡ್ಕರ್ ಹೆಸರಿನಲ್ಲಿ ನೀಡಲಾಗುತ್ತಿರುವ ಈ ಪ್ರಶಸ್ತಿಯನ್ನು ಬಹಳ ಸಂತೋಷದಿಂದ ಸ್ವೀಕರಿಸುತ್ತಿದ್ದೇನೆ. ಲಿಬರೇಶನ್ ಟೈಗರ್ಸ್ ಪಕ್ಷವು ಸನಾತನ ಧರ್ಮ ಮತ್ತು ಅದರ ಪರಿಣಾಮಗಳ ವಿರುದ್ಧ ಹೋರಾಡುತ್ತಿದೆ. ಸಾಮಾಜಿಕ ಭಿನ್ನತೆ ರಾಜಕೀಯ ಭಿನ್ನತೆ ಮುಂತಾದ ಹಲವು ಭಿನ್ನತೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಜಾತಿ-ಧರ್ಮದ ಸೃಷ್ಟಿಕರ್ತರು ಅಸಮಾನತೆ ಸೃಷ್ಟಿಸಿದರು. ಇದರಿಂದ ಅವರು ತಮ್ಮ ಕೆಳಗಿರುವವರನ್ನು ತುಳಿಯಬಹುದು. ದಮನಿತರಿಗೆ ಸಾಮಾಜಿಕ ನ್ಯಾಯ ಸಿಗದಿದ್ದರೆ ನಮ್ಮ ಸ್ವಾತಂತ್ರ್ಯದಿಂದ ಏನು ಪ್ರಯೋಜನ’ವೆಂದು ಅವರು ಪ್ರಶ್ನಿಸಿದರು.
ಇದನ್ನೂ ಓದಿ: PSI Recruitment scam : ಪಿಎಸ್ಐ ನೇಮಕಾತಿ ಅಕ್ರಮ : ಸ್ಟ್ರಾಂಗ್ ರೂಮ್ ಗೆ ನುಗ್ಗಿ 22 OMR ಶೀಟ್ ತಿದ್ದಿದ್ದ ಪೊಲೀಸರು
‘ಅಂಬೇಡ್ಕರ್ ಅವರು ಒಂದು ನಿರ್ದಿಷ್ಟ ಸಮುದಾಯಕ್ಕಾಗಿ ಹೋರಾಡದೆ ಎಲ್ಲ ತುಳಿತಕ್ಕೊಳಗಾದ ಜನರಿಗಾಗಿ ಹೋರಾಡಿದರು. ಇಂದು ಈ ದೇಶವು ದುರದೃಷ್ಟಕರ ಸ್ಥಿತಿಯಲ್ಲಿದೆ, ದೇಶವನ್ನು ಒಡೆಯಲು ಬಯಸುವವರ ಕೈಯಲ್ಲಿ ಆಡಳಿತ-ಅಧಿಕಾರವಿದೆ. ಕ್ರಾಂತಿಕಾರಿ ಅಂಬೇಡ್ಕರ್ ಬರೆದ ಸಂವಿಧಾನವನ್ನು ಬದಲಾಯಿಸಲು ಅವರು ಬಯಸುತ್ತಿದ್ದಾರೆ. ಬಿಜೆಪಿ ಎಂದಿಗೂ ಸಾಮಾಜಿಕ ನ್ಯಾಯದ ಕಾವಲುಗಾರನಾಗಲು ಸಾಧ್ಯವಿಲ್ಲ. ಇಂದು ಈ ದೇಶದ ದೊಡ್ಡ ನಾಚಿಕೆಗೇಡು ಎಂದರೆ ಈ ದೇಶದ ಆಡಳಿತಗಾರರು. ಈ ದೇಶ ವಿಭಜನೆಗೆ ಕಾರಣರಾಗುತ್ತಿದ್ದಾರೆ. ಈಗ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರ ಸಾಮಾಜಿಕ ನ್ಯಾಯಕ್ಕಾಗಿ ನಾವೂ ಹೋರಾಟ ನಡೆಸುತ್ತಿದ್ದೇವೆ ಎನ್ನುತ್ತಿದೆ. ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದೇವೆ ಎನ್ನುತ್ತಾರೆ. ಆದರೆ, ಅನಂತಕುಮಾರ್ ಹೆಗಡೆಯಂತವರು ‘ನಾವು ಅಧಿಕಾರಕ್ಕೆ ಬಂದಿರುವುದೇ ಈ ದೇಶದ ಸಂವಿಧಾನ ಬದಲಾಯಿಸಲು’ ಎನ್ನುತ್ತಾರೆ. ಇದು ಪ್ರಧಾನಿ ಅಥವಾ ಗೃಹ ಸಚಿವರಿಗೆ ಗೊತ್ತಿಲ್ಲವೇ?’ ಎಂದು ಕಿಡಿಕಾರಿದರು.
‘ಪ್ರಧಾನಿ ಮೋದಿಯವರ ಅನುಮತಿ ಮೇರೆಗೆ ಅನಂತಕುಮಾರ್ ಹೆಗಡೆ ಈ ಮಾತುಗಳನ್ನು ಹೇಳುತ್ತಿದ್ದಾರೆಂದು ನಾನು ನಂಬುತ್ತೇನೆ. ಇಲ್ಲದಿದ್ದರೆ ಅವರನ್ನು ಪಕ್ಷದಿಂದ ಹೊರಹಾಕಬೇಕಿತ್ತಲ್ಲವೇ? ಬಿಜೆಪಿ ಎಂದಿಗೂ ಸಂವಿಧಾನವನ್ನು ಗೌರವಿಸಿಲ್ಲ. RSS ಆರಂಭವಾದಾಗಿನಿಂದಲೂ ದಮನಿತ ಸಮುದಾಯದ ಯಾರಾದರೂ ಸಂಘಟನೆಯ ನಾಯಕರಾಗಿ ಬಂದಿದ್ದಾರೆಯೇ? ‘ಒಂದು ದೇಶ, ಒಂದು ನಾಯಕ, ಒಂದು ಸಿದ್ಧಾಂತ’ ಎಂಬ ಹಿಟ್ಲರ್ನಂತೆ RSSಗೆ ಕಲ್ಪನೆ ಇದೆ. RSSಗೆ ಗೋಬೆಲ್ಸ್ನಂತೆ ಸುಳ್ಳು ಹೇಳಲು ಬಿಜೆಪಿ ಎಂಬ ರಾಜಕೀಯ ಪಕ್ಷವಿದೆ’ ಎಂದು ಸಿದ್ದರಾಮಯ್ಯ ಟೀಕಿಸಿದರು.
ಇದನ್ನೂ ಓದಿ: Monkeypox Case : ರಾಜ್ಯದ ಜನರೇ ಎಚ್ಚರ : ಬೆಂಗಳೂರಲ್ಲಿ ಮಂಕಿಪಾಕ್ಸ್ ಗುಣಲಕ್ಷಣಗಳಿರುವ ವ್ಯಕ್ತಿ ಪತ್ತೆ
‘ಮೀಸಲಾತಿ ಭಿಕ್ಷೆಯಲ್ಲ, ಅದು ನಮ್ಮ ಬದುಕುವ ಹಕ್ಕು. ಪ್ರಧಾನಿ ಮೋದಿ ಸರ್ಕಾರ ಶ್ರೀಮಂತರಿಗಾಗಿಯೋ ಅಥವಾ ಬಡವರಿಗಾಗಿಯೋ ಎಂದು ಯೋಚಿಸಬೇಕು. ಬಿಜೆಪಿ ಸರ್ಕಾರವು ಮೀಸಲಾತಿಯನ್ನು ತೊಡೆದುಹಾಕಲು ಸಾರ್ವಜನಿಕ ವಲಯದ ಕಂಪನಿಗಳನ್ನು ಖಾಸಗೀಕರಣಗೊಳಿಸಲು ಬಹಳ ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ. ಈಗ ಖಾಸಗಿ ಕಂಪನಿಗಳಲ್ಲೂ ಮೀಸಲಾತಿಗಾಗಿ ಹೋರಾಟ ನಡೆಸಬೇಕಿದೆ. ಸಾಮಾಜಿಕ ನ್ಯಾಯವನ್ನು ಸುಮ್ಮನೆ ಮಾತನಾಡುವುದಕ್ಕಿಂತ ಕಾರ್ಯರೂಪಕ್ಕೆ ತರಬೇಕು. ಪ್ರಧಾನಿ ಮೋದಿ ಅವರಿಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇದ್ದರೆ ದೀನದಲಿತರು ಮತ್ತು ಹಿಂದುಳಿದವರಿಗೆ ವಿಶೇಷ ಅನುದಾನ ನೀಡಬಹುದೇ?’ ಎಂದು ಪ್ರಶ್ನಿಸಿದರು.
‘ಜನಸಂಖ್ಯೆಯ ಆಧಾರದ ಮೇಲೆ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನರಿಗೆ ಬಜೆಟ್ ಹಂಚಿಕೆ ಮಾಡಬೇಕು’ ಎಂದು ಇದೇ ವೇಳೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಸಿದ್ದರಾಮಯ್ಯ ಮನವಿ ಮಾಡಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.