ಬೆಂಗಳೂರು : ಐತಿಹಾಸಿಕ ಧರ್ಮರಾಯಸ್ವಾಮಿ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಚೈತ್ರ ಪೌರ್ಣಿಮೆಯ ಬೆಳದಿಂಗಳ ಬೆಳಕಿನಲ್ಲಿ ಕರಗ ನಡೆಯಲಿದೆ. ಈ ನಿಟ್ಟಿನಲ್ಲಿ ಇಂದು ಮಧ್ಯರಾತ್ರಿ 12.30ಕ್ಕೆ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹೂವಿನ ಕರಗ ಹೊರಡಲಿದೆ. ಈ ಕ್ಷಣಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ. ಈ ಬಾರಿ ಕೂಡಾ ಕರಗವನ್ನು ತಿಗಳ ಸಮುದಾಯದ ಅರ್ಚಕ ವಿ.ಜ್ಞಾನೇಂದ್ರ ಹೊರಲಿದ್ದಾರೆ.
ರಾಜಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ, ವೀರಕುಮಾರರ ಅಲಗು ಸೇವೆ, ಶಂಖನಾದ, ಗುಡಿಯ ಗಂಟೆಗಳ ಸದ್ದು, ಗೋವಿಂದನ ನಾಮಸ್ಮರಣೆ ಸಡಗರವನ್ನು ಇಮ್ಮದಿಗೊಳಿಸಲಿದೆ. ಕರಗ ನೋಡುವ ಸಲುವಾಗಿ ಸಾವಿರಾರು ಮಂದಿ ಭಕ್ತರು ತಿಗಳರಪೇಟೆಯಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದ ಬಳಿ ಸೇರಲಿದ್ದಾರೆ.
ಇದನ್ನೂ ಓದಿ : ತುಮಕೂರಿನ ಕುಂದೂರಿನಲ್ಲಿ ಬೋನಿಗೆ ಬಿದ್ದ ಚಿರತೆ
ಕರಗ ವೀಕ್ಷಿಸಲು ನಗರದ ತಿಗಳರಪೇಟೆ ಹಾಗೂ ಸುತ್ತಮುತ್ತಲ ನಾನಾ ಭಾಗದ ಜನರು ಸೇರಿದಂತೆ ಮಾಲೂರು, ಹೊಸಕೋಟೆ, ನೆಲಮಂಗಲ, ತುಮಕೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ, ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ಧರ್ಮಪುರಿ, ಸೇಲಂ, ಸುಳಗಿರಿ, ಚಪ್ಪಡಿ, ಡೆಂಕಣಿಕೋಟೆ, ಗುಮ್ಮಳಾಪುರ, ಈರೋಡ್, ಸೇಲಂ ಮುಂತಾದ ಕಡೆಗಳಿಂದ ತಿಗಳ ಸಮುದಾಯ ಸೇರಿದಂತೆ ವಿವಿಧ ಧರ್ಮೀಯ ಭಕ್ತಸಮೂಹವೇ ಹರಿದುಬರಲಿದೆ.
ನಗರದ ತಿಗಳರಪೇಟೆಯ ಬೆಂಗಳೂರು ಕರಗ ಉತ್ಸವ ಕೋಮು ಸೌಹಾರ್ದತೆಯ ಪ್ರತೀಕವಾಗಿದೆ. ಉತ್ಸವದಂದು ಕರಗಕರ್ತರು ಮಧ್ಯರಾತ್ರಿ ಅಕ್ಕಿಪೇಟೆಯ ಮಸ್ತಾನ್ ಸಾಹೇಬರ ದರ್ಗಾಕ್ಕೆ ತೆರಳಿ ಪದ್ಧತಿಯಂತೆ ಪೂಜೆ ಸಲ್ಲಿಸಲಿದ್ದಾರೆ. ಯಾವುದೇ ಭೇದ ಭಾವವಿಲ್ಲದೆ ಹಿಂದೂ ಮುಸ್ಲಿಂ ಜನಾಂಗದವರು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
ಇದನ್ನೂ ಓದಿ : 2023-24 ನೇ ಸಾಲಿನ ಶಾಲಾ ಶೈಕ್ಷಣಿಕ ವೇಳಾಪಟ್ಟಿ : ಈ ವರ್ಷ ಇಷ್ಟು ದಿನ ಶಾಲೆಗೆ ರಜೆ
ಕರಗದ ಮೆರವಣಿಗೆಯು ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಳದಿಂದ ಹೊರಟು ಹಲಸೂರುಪೇಟೆ ಆಂಜನೇಯ ಸ್ವಾಮಿ ದೇವಸ್ಥಾನ, ಶ್ರೀರಾಮ ದೇವಾಲಯ ಮತ್ತು ಪ್ರಸನ್ನ ಗಂಗಾಧರೇಶ್ವರಸ್ವಾಮಿ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಲಿದೆ. ನಂತರ ನಗರ್ತಪೇಟೆಯ ವೇಣುಗೋಪಾಲಸ್ವಾಮಿ ದೇವಾಲಯದಿಂದ ಭೈರೇದೇವರ ದೇವಾಲಯದ ಮಾರ್ಗವಾಗಿ ಕಬ್ಬನ್ ಪೇಟೆಯ ಶ್ರೀರಾಮಸೇವಾ ಮಂದಿರ, 15ನೇ ಗಲ್ಲಿ ಹಾಗೂ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಲಿದೆ. ಬಳಿಕ ಮಕ್ಕಳ ಬಸವಣ್ಣ ಗುಡಿ, ಗಾಣಿಗರ ಪೇಟೆ ಚೆನ್ನರಾಯಸ್ವಾಮಿ ದೇವಸ್ಥಾನದಿಂದ ಅವೆನ್ಯೂ ರಸ್ತೆ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆ, ರಾಣಾಸಿಂಗ್ ಪೇಟೆ ರಸ್ತೆ, ಮಸ್ತಾನ್ ಸಾಬ್ ದರ್ಗಾ, ಬಳೇಪೇಟೆ, ಅಣ್ಣಮ್ಮ ದೇವಸ್ಥಾನ, ಕಿಲಾರಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಕುಂಬಾರ ಪೇಟೆ, ಕಬ್ಬನ್‌ಪೇಟೆ ಮಾರ್ಗವಾಗಿ ಪುನಃ ತಿಗಳರಪೇಟೆಗೆ ಬಂದು ಸೇರಲಿದೆ.
ಕರಗದ ವೇಳೆ ಯಾವುದೇ ಅನಾಹುತ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮಾರ್ಚ್ 29ಕ್ಕೆ ಆರಂಭವಾಗಿರುವ ಕರಗ ಉತ್ಸವ ಏಪ್ರಿಲ್ 8ರವರೆಗೆ ಅದ್ಧೂರಿಯಾಗಿ ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.