ಬೆಂಗಳೂರು: ಇದೊಂದು ಕಣ್ಣಾಮುಚ್ಚಾಲೆಯ ಬೋಗಸ್ ಬಜೆಟ್.ಜನರನ್ನು ಹೇಗೆಲ್ಲಾ ದಾರಿ ತಪ್ಪಿಸಬಹುದು ಎಂಬುದರ ಬಗ್ಗೆ ಪಿಎಚ್.ಡಿ ಮಾಡಿ ಈ ಬಜೆಟ್ ರೂಪಿಸಿದಂತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟೀಕಾ ಪ್ರಹಾರ ನಡೆಸಿದ್ದಾರೆ.
ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ, ಕೇಂದ್ರದ ನೆರವೂ ಸಿಕ್ಕಿಲ್ಲ. ಜಿಎಸ್ಟಿ ಸಾಲದ ಮೊರೆ ಅನಿವಾರ್ಯವಾಗಿದೆ ಎಂಬುದನ್ನು ಸಿ.ಎಂ ಯಡಿಯೂರಪ್ಪ ಅವರು ಭಾಷಣದ ಆರಂಭದಲ್ಲೇ ವಿವರಿಸಿದ್ದಾರೆ.ಕಳೆದ ವರ್ಷ ಮಾಡಿಕೊಂಡಿರುವ ಸಾಲವನ್ನೇ ತೀರಿಸಲು ಆಗಿಲ್ಲ. ಈಗ ಹೊಸದಾಗಿ 70 ಸಾವಿರ ಕೋಟಿ ರೂ. ಸಾಲದ ಹೊರೆ ರಾಜ್ಯದ ಜನರ ತಲೆ ಮೇಲೆ ಬೀಳಲಿದೆ ಎಂದು ಡಿಕೆ ಶಿವಕುಮಾರ್ (DK shivakumar) ಆಕ್ರೋಶ ವ್ಯಕ್ತಪಡಿಸಿದರು
"ಸಾಲ ಮಾಡಿ ತುಪ್ಪ ತಿನ್ನು" ಎಂದು ಸಾಲಗಾರರನ್ನು ಅಣಕಿಸುವ ಮಾತಿದೆ. ಆದರೆ ಈ ಸರಕಾರ ಸಾಲ ಮಾಡಿ ಜನರಿಗೆ ಮಣ್ಣು ತಿನ್ನಿಸಲು ಹೊರಟಿದೆ.
ರಾಜ್ಯಗಳ ಜಿಎಸ್ಟಿ ಪಾಲು ಹಂಚುವಾಗ ಗುಜರಾತ್, ಅಸ್ಸಾಂ ಮತ್ತಿತರ ರಾಜ್ಯಗಳ ಕಣ್ಣಿಗೆ ಬೆಣ್ಣೆ ಹಚ್ಚಿದ ಕೇಂದ್ರ ಸರಕಾರ ರಾಜ್ಯದ ಕಣ್ಣಿಗೆ ಸುಣ್ಣ ಸುರಿದಿದೆ. ಅದನ್ನು ರಾಜ್ಯ ಸರಕಾರವಾಗಲಿ, ರಾಜ್ಯದಿಂದ ಕೇಂದ್ರ ಪ್ರತಿನಿಧಿಸುತ್ತಿರುವ ಎರಡು ಡಜನ್ ಸಂಸದರು ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ.
ಅದರ ಫಲವೇ ಈಗ ರಾಜ್ಯದ ಜನರ ತಲೆ ಮೇಲೆ ಬೀಳುತ್ತಿರುವ ಸಾಲದ ಹೊರೆ.
ಇದನ್ನೂ ಓದಿ: DK Shivakumar: ಶಾಸಕ ಅಖಂಡ ಶ್ರೀನಿವಾಸಮೂರ್ತಿ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದ ಡಿಕೆಶಿ!
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅವೈಜ್ಞಾನಿಕ ಲಾಕ್ ಡೌನ್ ರಾಜ್ಯದ ಆರ್ಥಿಕ ಸ್ಥಿತಿ ಹದಗೆಡಿಸಿದೆ ಎಂಬುದನ್ನು ಮುಖ್ಯಮಂತ್ರಿಗಳೇ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.
ಆದರೂ ಜನರ ಕಣ್ಣಿಗೆ ಮಣ್ಣೆರೆಚುವ ರೀತಿಯಲ್ಲಿ ಘೋಷಣೆಗಳ ಮೇಲೆ ಘೋಷಣೆಗಳನ್ನು ಸಿಎಂ ಪ್ರಕಟಿಸಿದ್ದಾರೆ.
ಆದರೆ ಇದಕ್ಕೆ ಸಂಪನ್ಮೂಲ ಕ್ರೋಡೀಕರಣ ಹೇಗೆ? ಎಲ್ಲಿಂದ ದುಡ್ಡು ತರುತ್ತಾರೆ ಎಂಬುದನ್ನೇ ಹೇಳಿಲ್ಲ. ಹೀಗಾಗಿ ಈ ಘೋಷಣೆಗಳೆಲ್ಲ ಘೋಷಣೆಯಾಗಿಯೇ ಉಳಿದುಕೊಳ್ಳುವ ಅಪಾಯವಿದೆ.
ಪ್ರತಿ ಬಾರಿ ಬಜೆಟ್ ಅನ್ನು ಮಂಡಿಸುವಾಗ ಇಲಾಖೆವಾರು ಅನುದಾನ ಹಂಚಿಕೆ ಮಾಡಲಾಗುತ್ತದೆ. ಆಗ ಯಾವ ಇಲಾಖೆಗೆ ಏನು, ಎಷ್ಟು ಎಂಬುದು ತಿಳಿಯುತ್ತದೆ.
ಆದರೆ ಈಗ ಸರ್ಕಾರ ವಲಯವಾರು ಘೋಷಣೆ ಮಾಡಿ "ಗುಂಪಲ್ಲಿ ಗೋವಿಂದಾ" ಎನ್ನುವಂತೆ ಜನರ ಕಣ್ಣಿಗೆ ಮಣ್ಣೆರಚಿದೆ.
ಕೃಷಿಗೆ 31,028 ಕೋಟಿ ಘೋಷಿಸಿ, ಇದು ರೈತರಿಗೆ ಬಂಪರ್ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಇದು ಕೇವಲ ಕೃಷಿ ಕ್ಷೇತ್ರಕ್ಕೆ ಮಾತ್ರವಲ್ಲ. ಅದಕ್ಕೆ ಪೂರಕವಾಗಿರುವ ನೀರಾವರಿ ಯೋಜನೆಗಳು, ತೋಟಗಾರಿಕೆ, ಕೃಷಿ ಮಾರುಕಟ್ಟೆ ಹೀಗೆ ಎಲ್ಲವನ್ನೂ ಒಳಗೊಂಡಿದೆ.
ಸರಕಾರದ ಕಣ್ ಕಟ್ ಆಟಕ್ಕೆ ಇದೊಂದು ಸ್ಯಾಂಪಲ್ ಅಷ್ಟೇ.
ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿಗೆ 61 ಸಾವಿರ ಕೋಟಿ ರುಪಾಯಿ ಎಂದು ಬಿಂಬಿಸುತ್ತಿರುವ ಸರ್ಕಾರ, ಇದರಲ್ಲಿ ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ, ವಸತಿ, ಕಾರ್ಮಿಕ, ಮಾನವ ಸಂಪನ್ಮೂಲ, ಗ್ರಾಮೀಣಭಿವೃದ್ಧಿ ಇಲಾಖೆಯನ್ನೂ ಸೇರಿಸಿದೆ.
ಇದನ್ನೂ ಓದಿ: DK Shivakumar: 'ಎಸ್.ಎಂ.ಕೃಷ್ಣ ರೀತಿ ಪಾಂಚಜನ್ಯ ಮೊಳಗಿಸಿ ಮತ್ತೆ ಕೈ ಅಧಿಕಾರಕ್ಕೆ'
ಇನ್ನು ಒಂದು ರೂಪಾಯಿ ಹೊರೆ ಹಾಕದ ಬಜೆಟ್ ಎಂದು ಸಿಎಂ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಆದರೆ ಈಗಾಗಲೇ ರಾಜ್ಯ ಸರಕಾರ ಪೆಟ್ರೋಲ್ ಮೇಲೆ 33 ರೂ., ಡೀಸೆಲ್ ಮೇಲೆ 20 ರೂ. ಸುಂಕ ವಸೂಲಿ ಮಾಡುತ್ತಿದೆ.
ಬಜೆಟ್ ಮುನ್ನವೇ ಆಸ್ತಿ ತೆರಿಗೆ ಹೆಚ್ಚಿಸಿದೆ. ವಿದ್ಯುತ್, ನೀರಿನ ದರ ಏರಿಕೆ ಮಾಡಿದೆ. ಈಗಾಗಲೇ ಸುಲಿಗೆ ಮಾಡಲು ಆರಂಭಿಸಿರುವ ಬಿಜೆಪಿ ಈಗ ತಾನು ಜನರ ಮೇಲೆ ಹೊರೆ ಹಾಕಿಲ್ಲ ಎಂದು ಸುಳ್ಳು ಹೇಳುತ್ತಿದೆ.
ಹೀಗೆ ರಾಜ್ಯ ಸರ್ಕಾರ ತನ್ನ ಹುಳುಕು ಮುಚ್ಚಿಕೊಳ್ಳಲು ಬಜೆಟ್ ನಲ್ಲಿ ಸುಳ್ಳಿನ ಹೊಳೆ ಹರಿಸಿದೆ.
ಇನ್ನು ಈ ಬಾರಿ ಬಜೆಟ್ ನಲ್ಲಿ ನಿಗಮಗಳ ಉದ್ದದ ಪಟ್ಟಿಯನ್ನೇ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕೆಲಸ ಮಾಡಬೇಕು. ಎಲ್ಲ ಜಾತಿ, ಧರ್ಮದ ಜನರ ಹಿತ ಚಿಂತಿಸಬೇಕು.
ಆದರೆ ಈ ಸರ್ಕಾರ ಜಾತಿ, ಧರ್ಮದ ಹೆಸರಲ್ಲಿ ಸಮಾಜ ಒಡೆದು ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದೆ.
ಈ ನಿಗಮಗಳಿಂದಲೇ ಆಯಾ ಸಮುದಾಯದ ಏಳಿಗೆಯಾಗುವುದಾದರೆ, ನಿಗಮಗಳೇ ಇಲ್ಲದ ಬೇರೆ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿಲ್ಲ ಎಂದು ಅರ್ಥವೇ?
ಈ ನಿಗಮಗಳ ಹೆಸರಲ್ಲೂ ಸರ್ಕಾರ ಜನರನ್ನು ದಾರಿ ತಪ್ಪಿಸುತ್ತಿದೆ. ಹಿಂದುಳಿದ ವರ್ಗಕ್ಕೆ ಸೇರಿದ ಅಂಬೇಡ್ಕರ್, ವಾಲ್ಮೀಕಿ, ಆದಿಜಾಂಬವ, ಭೋವಿ, ತಾಂಡ, ಸಫಾಯಿ ಕರ್ಮಚಾರಿ, ಬಾಬು ಜಗಜೀವನ್ ರಾಮ್, ಮಡಿವಾಳ ಮಾಚಿದೇವ, ಉಪ್ಪಾರ, ಆರ್ಯಶೈವ, ವಿಶ್ವಕರ್ಮ, ಕಾಡುಗೊಲ್ಲ, ಅಂಬಿಗರ ಚೌಡಯ್ಯ, ಸವಿತಾ ಸಮಾಜ - ಹೀಗೆ ಎಲ್ಲ ನಿಗಮಗಳಿಗೂ ಒಟ್ಟಾರೆ ಸರ್ಕಾರ ಕೊಟ್ಟಿರೋದು ಕೇವಲ 500 ಕೋಟಿ ರು.
ಅನುದಾನ ಯಾರಿಗೆ ಎಷ್ಟು, ಇದಕ್ಕೆ ಮಾನದಂಡವೇನು ಎಂಬುದನ್ನೂ ವಿವರಿಸಿಲ್ಲ. ಇದು ಜನರಿಗೆ ಟೋಪಿ ಹಾಕುವ ಹುನ್ನಾರವಲ್ಲದೇ ಮತ್ತೇನು?
ಒಟ್ಟಿನಲ್ಲಿ ಈ ಬಜೆಟ್ ನಲ್ಲಿ ರಾಜ್ಯದ ಜನರ ಪರವಾಗಿ ಯಾವುದೇ ಯೋಜನೆ ರೂಪಿಸಿಲ್ಲ. ಇದು ಜನರಿಗೆ ಗಾಳಿ ಗೋಪುರ ತೋರಿಸಿ ದಾರಿ ತಪ್ಪಿಸುವ ಬಜೆಟ್ ಆಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.