ಡಿ.ಕೆ. ಶಿವಕುಮಾರ್​ ವಿರುದ್ಧ ಇಡಿ ಅಧಿಕಾರಿಗಳಿಂದ ಎಫ್​ಐಆರ್ ದಾಖಲು

ಮತ್ತೆ ಬಂಧನ ಭೀತಿಯಲ್ಲಿ ಡಿಕೆಶಿ.

Last Updated : Sep 18, 2018, 01:41 PM IST
ಡಿ.ಕೆ. ಶಿವಕುಮಾರ್​ ವಿರುದ್ಧ ಇಡಿ ಅಧಿಕಾರಿಗಳಿಂದ ಎಫ್​ಐಆರ್ ದಾಖಲು title=
File image

ನವದೆಹಲಿ: ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ದೆಹಲಿಯಲ್ಲಿ ಎಫ್​ಐಆರ್ ದಾಖಲಿಸಿದ್ದು, ಡಿಕೆಶಿಗೆ ಮತ್ತೆ ಬಂಧನ ಭೀತಿ ಎದುರಾಗಿದೆ.

ಕೇಂದ್ರದ ಹಿಡಿತದಲ್ಲಿರುವ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಬಿಜೆಪಿ ವಿರೋಧಿಗಳನ್ನು ಮಣಿಸಲು ಯತ್ನಿಸುತ್ತಿದೆ ಎಂಬ ಗಂಭೀರ ಆರೋಪ ಆಗಾಗ ಕೇಳಿಬರುತ್ತಿದೆ. ಇದೀಗ ಇಡಿ ಡಿಕೆಶಿ ವಿರುದ್ಧ ಎಫ್​ಐಆರ್ ದಾಖಲಿಸಿರುವುದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಡಿಕೆಶಿ ಅವರನ್ನು ಬಂಧಿಸಲಿದ್ದಾರೆಯೇ ಎಂಬ ಅನುಮಾನ ರಾಜಕೀಯ ವಲಯದಲ್ಲಿ ಮೂಡಿದೆ.

ಮನಿ ಲಾಂಡರಿಂಗ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಎಫ್​ಐಆರ್​ನಲ್ಲಿ ಡಿಕೆಶಿ ಹೊರತು ಪಡಿಸಿ, ಕರ್ನಾಟಕ ಭವನದ ಮಾಜಿ ಸಿಬ್ಬಂದಿ ರಾಜೇಂದ್ರನ್​ ಮತ್ತು ದೆಹಲಿ ಕರ್ನಾಟಕ ಭವನದ ಆಂಜನೇಯ ಹನುಮಂತ್ ಅವರನ್ನೂ ಹೆಸರಿಸಲಾಗಿದೆ.

ದೆಹಲಿಯ ಅಪಾರ್ಟ್​ವೆುಂಟ್​ನಲ್ಲಿ ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದ 8.59 ಕೋಟಿ ರೂ.ಗೆ ಸಂಬಂಧಿಸಿದಂತೆ ತನಿಖೆ ಮಾಡಿದ್ದ ಐಟಿ ಅಧಿಕಾರಿಗಳು ನಂತರ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡಿತ್ತು. ಇದೀಗ ಪ್ರಕರಣ ಸಂಬಂಧ ಎಫ್​ಐಆರ್​ ದಾಖಲಿಸಿಕೊಂಡು ಇಡಿ ತನಿಖೆ ಮುಂದುವರೆಸಿದೆ. ಅಕ್ರಮವಾಗಿ ಹಣವನ್ನು ಮನೆಯಲ್ಲಿ ಶೇಖರಿಸಿಟ್ಟಿದ್ದು, ಯಾವುದೇ ದಾಖಲೆಗಳು ಲಭ್ಯವಾಗಿಲ್ಲ ಎಂದು ತನಿಖೆಯ ವೇಳೆ ತಿಳಿದು ಬಂದಿರುವುದಾಗಿ ಜಾರಿ ನಿರ್ದೇಶನಾಲಯದ ಉನ್ನತ ಮೂಲಗಳು ತಿಳಿಸಿವೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಶನಿವಾರ(ಸೆ.15) ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಇದರಿಂದ ನಿರಾಳರಾಗಿದ್ದ ಡಿಕೆಶಿ ಈಗ ಮತ್ತೆ ಬಂಧನ ಭೀತಿಗೆ ಸಿಲುಕಿದ್ದಾರೆ.

Trending News