ಯಾದಗಿರಿ: ಚಾಮರಾಜನಗರದಲ್ಲಿ ನಡೆದ ಸುಳ್ವಾಡಿ ಮಾರಮ್ಮನ ದೇವಾಲಯದ ಪ್ರಸಾದದಲ್ಲಿ ದುಷ್ಕರ್ಮಿಗಳು ವಿಷ ಬೆರೆಸಿದ ಘಟನೆ ಬೆನ್ನಲೇ ಇದೀಗ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರ ಕೆ ಗ್ರಾಮದಲ್ಲಿ ದುಷ್ಕರ್ಮಿಗಳು ಕುಡಿಯುವ ನೀರಿನ ಟ್ಯಾಂಕಿಗೆ ವಿಷ ಬೆರೆಸಿರುವ ಘಟನೆ ಬುಧವಾರ ನಡೆದಿದೆ. ಈ ಘಟನೆಯಲ್ಲಿ ನೀರು ಕುಡಿದ 60 ವರ್ಷದ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ.
ಗ್ರಾಮಕ್ಕೆ ನೀರು ಸರಬರಾಜು ಮಾಡುವ ಮೌನೇಶ ಮತ್ತು ತಾಯಿ ನಾಗಮ್ಮ ಎನ್ನುವವರು ನೀರು ಪೂರೈಕೆ ವೇಳೆ ನೀರಿನ ವಾಸನೆ ಕಂಡು ಅನುಮಾನಗೊಂಡು ಆ ನೀರನ್ನು ಸೇವಿಸಿ ಪರಿಶೀಲಿಸಿದಾಗ ನೀರಿನಲ್ಲಿ ಏನೂ ಬೆರೆಸಿರುವುದು ಗಮನಕ್ಕೆ ಬಂದಿದೆ. ಅಷ್ಟರಲ್ಲೇ, ಅಸ್ವಸ್ಥರಾದ ಇಬ್ಬರನ್ನೂ ಕೆಂಭಾವಿ ಸಮುದಾಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತ ವಾಂತಿ ಮಾಡಿಕೊಂಡ ಹಾಗೂ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆ ಕೆಂಭಾವಿ ಆಸ್ಪತ್ರೆಯಿಂದ ಕಲಬುರಗಿಗೆ ರವಾನಿಸಲಾಗುತ್ತಿತ್ತು. ಈ ವೇಳೆ ರಸ್ತೆ ಮಧ್ಯೆ ಹೊನ್ನಮ್ಮ ಸಾವನ್ನಪ್ಪಿದ್ದಾರೆ. ಮಗ ಮೌನೇಶ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.
ನೀರಿನಲ್ಲಿ ವಿಷ ಬೆರೆಸಿರುವ ವಿಚಾರ ತಿಳಿಯುತ್ತಿದ್ದಂತೆ, ಸ್ಥಳೀಯ ಅಧಿಕಾರಿಗಳು ತಕ್ಷಣ ಎಚ್ಚೆತ್ತು ಗ್ರಾಮಗಳಿಗೆ ನೀರು ಪೂರೈಕೆಯನ್ನು ತಡೆದಿದ್ದಾರೆ. ಅಲ್ಲದೇ ಪೂರೈಕೆ ಮಾಡಲಾಗಿದ್ದ ನೀರನ್ನು ಸೇವನೆ ಮಾಡದಂತೆ ಗ್ರಾಮಗಳಲ್ಲಿ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ. ಇದರಿಂದಾಗಿ ಮುಂದೆ ನಡೆಯಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ.
ಘಟನೆ ಬಗ್ಗೆ ಕೆಂಬಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತಿದ್ದಾರೆ.