ಬೆಂಗಳೂರು: ರೈತರ ಕೃಷಿ ಸಾಲ ಮನ್ನಾ, ರೈತರ ಆತ್ಮಹತ್ಯೆ ಹಾಗೂ ಕೃಷಿಕರ ಇತರ ಸಮಸ್ಯೆಗಳ ಕುರಿತು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಪ್ರಗತಿಪರ ಕೃಷಿಕರ ಜತೆ ಸಮಾಲೋಚಿನೆ ನಡೆಸಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಸಾಲಮನ್ನಾ ವಿಚಾರ ಕುರಿತು ತೀರ್ಮಾನ ಕೈಗೊಳ್ಳಲು 15 ದಿನಗಳ ಕಾಲಾವಕಾಶ ಕೋರಿದ್ದಾರೆ.
ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಇಂದು ರಾಜ್ಯದ 30 ಜಿಲ್ಲೆಗಳಿಂದ ಆಗಮಿಸಿದ್ದ ರೈತ ಸಂಘಟನೆಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ ನಂತರ ಮಾತನಾಡಿದ ಅವರು, ರಾಜ್ಯದ ರೈತರ ಎಲ್ಲಾ ಸಾಲ ಮನ್ನಾ ಮಾಡಬೇಕು ಎಂಬ ಆಸೆ ಇದೆ. ಸಾಲಮನ್ನಾ ವಿಚಾರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲು 15 ದಿನಗಳ ಕಾಲಾವಕಾಶ ನೀಡಿ ಎಂದು ಮನವಿ ಮಾಡಿದರು.
ಸಾಲಮನ್ನಾ ವಿಚಾರದಲ್ಲಿ ರೈತರಿಗೆ ಯಾವುದೇ ಆತಂಕ ಬೇಡ ಎಂದು ಅಭಯ ನೀಡಿದ ಸಿಎಂ, ರಾಹುಲ್ ಗಾಂಧಿ ಇನ್ನೆರೆಡು ದಿನಗಳಲ್ಲಿ ಬರುತ್ತಾರೆ. ಅವರು ವಿದೇಶದಿಂದ ವಾಪಸ್ಸಾದ ಬಳಿಕ ಅವರೊಂದಿಗೆ ಚರ್ಚಿಸಿ 15 ದಿನಗಳೊಳಗೆ ಅಂತಿಮ ನಿರ್ಧಾರ ತಿಳಿಸುತ್ತೇವೆ. ಎರಡು ಹಂತದಲ್ಲಿ ಸಾಲ ಮನ್ನಾ ಜಾರಿಗೆ ತರಲು ಚಿಂತನೆ ನಡೆಸಿದ್ದೇನೆ. ಮೊದಲಿಗೆ ಸಹಕಾರ ಸಂಸ್ಥೆಗಳಲ್ಲಿ ರೈತರು ಪಡೆದಿರುವ ಬೆಳೆ ಸಾಲವನ್ನು ಮನ್ನಾ ಮಾಡಲಾಗುವುದು. ನಂತರ ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು. ಏಪ್ರಿಲ್ 1, 2009ರಿಂದ ಡಿಸೆಂಬರ್ 31, 2017ರವರೆಗಿನ ರೈತರ ಸಾಲ ಮನ್ನಾ ಮಾಡುವ ಯೋಜನೆಯನ್ನು ರೂಪಿಸುತ್ತಿದ್ದೇವೆ ಎಂದು ಸಿಎಂ ತಿಳಿಸಿದರು.
ರಾಜ್ಯದ ಬಜೆಟ್ 2 ಲಕ್ಷ ಕೋಟಿ
ಇದೇ ಸಮಯದಲ್ಲಿ 2 ಲಕ್ಷ ಕೋಟಿ ರಾಜ್ಯ ಬಜೆಟ್ ಮಂಡಿಸುವ ಸುಳಿವು ನೀಡಿದ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಇದರಲ್ಲಿಯೇ ಸಾಲಮನ್ನಾ ಮಾಡಿ, ಸಮಾಜ ಕಲ್ಯಾಣ ಇಲಾಖೆ, ನೀರಾವರಿ, ಶಿಕ್ಷಣ ಕ್ಷೇತ್ರ ಸೇರಿ ಎಲ್ಲ ಕ್ಷೇತ್ರಗಳ ಯೋಜನೆಗಳಿಗೂ ಅನುದಾನ ನೀಡಬೇಕಿದೆ ಎಂದರು.
ಖಜಾನೆ ಭದ್ರವಾಗಿರಲಿದೆ
ನಗರ ಪ್ರದೇಶದ ಅಭಿವೃದ್ಧಿಯ ಹಣ ರೈತರ ಸಾಲ ಮನ್ನಾಗಾಗಿ ಬಳಕೆಯಾಗಲಿದೆ. ಅದರಿಂದ ಬೆಂಗಳೂರಿನ ನಾಗರಿಕರ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂಬುದು ಸರಿಯಲ್ಲ. ಈ ಸರ್ಕಾರ 5 ವರ್ಷಗಳ ಕಾಲ ಇರುತ್ತೆ, ರೈತರ ಸಾಲವನ್ನೂ ಮನ್ನಾ ಮಾಡುತ್ತೇವೆ, ಖಜಾನೆಯೂ ಭದ್ರವಾಗಿರಲಿದೆ ಎಂದು ಕುಮಾರಸ್ವಾಮಿ ಹೇಳಿದರು.