ಏಕಾಏಕಿ ಹೊತ್ತಿ ಉರಿದ ಕಾರು; ಮಹಿಳೆ ಸಜೀವ ದಹನ

ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 9ರ ಬಳಿ ನಡೆದಿರುವ ಘಟನೆ ಕುರಿತು ಮನ್ನಾಖೇಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Updated: Dec 5, 2019 , 11:51 AM IST
ಏಕಾಏಕಿ ಹೊತ್ತಿ ಉರಿದ ಕಾರು; ಮಹಿಳೆ ಸಜೀವ ದಹನ
ಸಾಂದರ್ಭಿಕ ಚಿತ್ರ

ಬೀದರ್: ಒಂದೇ ಕುಟುಂಬದ ನಾಲ್ವರು ಕಾರಿನಲ್ಲಿ ಚಲಿಸುತ್ತಿರುವಾಗ ಏಕಾಏಕಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಮಹಿಳೆಯೊಬ್ಬರು ಸಜೀವ ದಹನವಾದ ಹೃದಯವಿದ್ರಾವಕ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 9ರ ನಿರ್ಣಾ ಕ್ರಾಸ್ ಬಳಿ ಇಂದು ಮುಂಜಾನೆ ನಡೆದಿದೆ. 

ಮಾಹಿತಿ ಪ್ರಕಾರ, ಉದಯ ಕುಮಾರ್ ಎಂಬುವವರ ಪತ್ನಿ ಕಲ್ಯಾಣಿ ಈ ಘಟನೆಯಲ್ಲಿ ಸಜೀವ ದಹನವಾದ ದುರ್ದೈವಿ ಎನ್ನಲಾಗಿದೆ. ಇಂದು ಬೆಳಗಿನ ಜಾವ ಒಂದೇ ಕುಟುಂಬದ ನಾಲ್ವರು ಮಹಾರಾಷ್ಟ್ರದ ಉದಗೀರ್ ನಿಂದ ಹೈದ್ರಾಬಾದ್ ಗೆ ತೆರಳುತ್ತಿರುವಾಗ ಕಾರಿಗೆ ಬೆಂಕಿ ತಗುಲಿದೆ. ಈ ಸಂದರ್ಭದಲ್ಲಿ ಉದಯ ಕುಮಾರ್ ತಮ್ಮ ಇಬ್ಬರು ಮಕ್ಕಳೊಂದಿಗೆ ಕಾರಿನಿಂದ ಹಾರಿದ್ದಾರೆ. ಆದರೆ ಕಲ್ಯಾಣಿಯವರು ಸೀಟ್ ಬೆಲ್ಟ್ ತೆಗೆಯಲಾಗದೆ ಕಾರಿನಲ್ಲೇ ಸಜೀವ ದಹನವಾಗಿದ್ದಾರೆ.

ಉದಯ್ ಕುಮಾರ್ ಹಾಗೂ ಅವರ ಇಬ್ಬರೂ ಮಕ್ಕಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಾಥಮಿಕ ವರದಿಗಳ ಪ್ರಕಾರ, ಕಾರಿನ ಹಿಂಬದಿಯ ಎಸಿ(AC) ಬಿಸಿಯಾಗಿ ಸ್ಫೋಟಗೊಂಡ ಪರಿಣಾಮ ಕಾರು ಹೊತ್ತಿ ಉರಿದಿದೆ ಎಂದು ಹೇಳಲಾಗುತ್ತಿದೆ.