ನವದೆಹಲಿ: ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕೆ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಸಚಿವಾಕಾಂಕ್ಷಿಗಳ ಆಸೆಗೆ ಮತ್ತೇ ಎಳ್ಳು ನೀರು ಬಿಟ್ಟಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಮಾಡಿ ಸಮಾಲೋಚನೆ ನಡೆಸಿದ ರಾಜ್ಯ ನಾಯಕರೊಂದಿಗೆ ಸದ್ಯಕ್ಕೆ ಸಂಪುಟ ವಿಸ್ತರಣೆ ಬೇಡ ಎಂದಿರುವ ರಾಹುಲ್ ಮೊದಲು ಪಕ್ಷದಲ್ಲಿನ ಬಂಡಾಯ ಶಮನ ಮಾಡಿ, ಬಳಿಕ ಸಂಪುಟ ವಿಸ್ತರಣೆ ಎಂದಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಜೇನುಗೂಡಿಗೆ ಕೈ ಹಾಕಿದಂತೆ:
ಅಕ್ಟೋಬರ್ ನಲ್ಲಿ ಸಂಪುಟ ವಿಸ್ತರಣೆ ಮಾಡಬೇಕೇ? ಅಥವಾ ಬೇಡವೇ? ಅನ್ನೋದನ್ನ ಆಮೇಲೆ ಚರ್ಚಿಸೋಣ ಎಂದು ತಿಳಿಸಿರುವ ರಾಗಾ, ಸದ್ಯ ಸರ್ಕಾರ ಮತ್ತು ಪಕ್ಷದಲ್ಲಿ ವಾತಾವರಣ ಸರಿ ಇಲ್ಲ. ಇಂತಹ ಸಮಯದಲ್ಲಿ ಸಂಪುಟ ವಿಸ್ತರಣೆಗೆ ಕೈ ಹಾಕಿದರೆ ಜೇನುಗೂಡಿಗೆ ಕೈ ಹಾಕಿದಂತೆ. ಆದ್ರಿಂದ ಸದ್ಯಕ್ಕೆ ಸಂಪುಟ ವಿಸ್ತರಣೆ ಬೇಡ, ಅಕ್ಟೋಬರ್ 3 ರ ಬಳಿಕ ನೋಡೋಣ ಎಂದಿದ್ದಾರೆ.
ಸೆಪ್ಟೆಂಬರ್ ಮೂರನೇ ವಾರದಲ್ಲಿ ಸಂಪುಟ ವಿಸ್ತರಣೆ ಎಂದಿದ್ದ ಕೆ.ಸಿ. ವೇಣುಗೋಪಾಲ್:
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಸಮನ್ವಯ ಸಮಿತಿ ಸಭೆ ಬಳಿಕ ಸಂಪುಟ ವಿಸ್ತರಣೆ ಗ್ಯಾರಂಟಿ ಎಂದಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಸದ್ಯಕ್ಕೆ ಸಂಪುಟ ವಿಸ್ತರಣೆ ಮಾಡುವುದು ಬೇಡ ಎಂದು ತಿಳಿಸಿರುವುದು ಸಚಿವಾಕಾಂಕ್ಷಿಗಳ ಆಸೆಗೆ ಮತ್ತೇ ಎಳ್ಳು ನೀರು ಬಿಟ್ಟಂತಾಗಿದೆ.