ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಹಾಗೂ ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ (Ramesh Jarakiholi) ನಡುವಿನ ಜಗಳ ಎಲ್ಲರಿಗೂ ಗೊತ್ತಿರುವ ವಿಷಯ. ಈಗ ಇದೇ ಮೊದಲ ಬಾರಿಗೆ ರಮೇಶ್ ಜಾರಕಿಹೊಳಿ ಅವರು ಡಿ.ಕೆ. ಶಿವಕುಮಾರ್ ಅವರು ಪ್ರತಿನಿಧಿಸುವ ಕನಕಪುರ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ.
ರಮೇಶ್ ಜಾರಕಿಹೊಳಿ ತಮ್ಮ ರಾಜಕೀಯ ವೈರಿ ಡಿ.ಕೆ. ಶಿವಕುಮಾರ್ ಅವರ ಕ್ಷೇತ್ರ ಕನಕಪುರಕ್ಕೆ ಭೇಟಿ ನ ಕೊಡುತ್ತಿರುವುದು ಕುತೂಹಲ ಮೂಡಿಸಿದೆ. ಡಿ.ಕೆ. ಶಿವಕುಮಾರ್ ಮೇಲಿನ ಹಠದಿಂದಾಗಿ ಹಿಂದೆ ಡಿ.ಕೆ. ಶಿವಕುಮಾರ್ ನಿರ್ವಹಿಸಿದ್ದ ಜಲಸಂಪನ್ಮೂಲ ಖಾತೆಯೇ ಬೇಕೆಂದು ಪಟ್ಟುಹಾಕಿ ಅದೇ ಖಾತೆಯನ್ನು ಗಿಟ್ಟಿಸಿಕೊಂಡಿರುವ ರಮೇಶ್ ಜಾರಕಿಹೊಳಿ ಈಗ ಅದೇ ಖಾತೆಯ ಕೆಲಸದ ಮೇಲೆ ಡಿ.ಕೆ. ಶಿವಕುಮಾರ್ ಕ್ಷೇತ್ರ ಕನಕಪುರಕ್ಕೆ ಭೇಟಿ ನೀಡುತ್ತಿದ್ದಾರೆ.
ಸೋಮವಾರ ಕನಕಪುರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮೇಕೆದಾಟು ಯೋಜನೆ ಸ್ಥಳ ವೀಕ್ಷಣೆಗೆ ತೆರಳಲಿದ್ದಾರೆ. ಕನಕಪುರದ ಸಂಗಮ ಬಳಿ ಇರುವ ಮೇಕೆದಾಟು (Mekedatu) ವೀಕ್ಷಣೆಯ ಬಳಿಕ ಅಂದು ಮಧ್ಯಾಹ್ನ 12ಗಂಟೆಗೆ 'ಮಯೂರ ಸಂಗಮ' (Mayura Sangama) ದ ಕೆ ಎಸ್ ಡಿಸಿ (KSDC) ಹೋಟೆಲ್ ನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ರಮೇಶ್ ಜಾರಕಿಹೊಳಿ ತಮ್ಮ ಕ್ಷೇತ್ರಕ್ಕೆ ಪ್ರವಾಸ ನೀಡುವ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಡಿ.ಕೆ. ಶಿವಕುಮಾರ್ ಭೇಟಿಯಾಗುತ್ತಾರಾ ಎನ್ನುವ ಕುತೂಹಲವೂ ಹುಟ್ಟುಕೊಂಡಿದೆ.