ಬೆಂಗಳೂರು: ಚುನಾವಣೆ ಹೊಸ್ತಿಲಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಚಟುವಟಿಕೆ ತಾರಕಕ್ಕೇರಿದೆ. ಬಿಜೆಪಿಯಲ್ಲೂ ಸಹ ಚುನಾವಣಾ ಸಿದ್ಧತೆ ಜೋರಾಗಿಯೇ ಇದೆ. ಹಿಂದೆ ಗುಜರಾತ್ ಚುನಾವಣಾ ಫಲಿತಾಂಶ ಬಂದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತಮ್ಮ ಮುಂದಿನ ಗುರಿ ಕರ್ನಾಟಕ ಎಂದು ಹೇಳಿದ್ದರು. ಅದರಂತೆಯೇ ಅವರು ಸಿದ್ಧತೆಯನ್ನು ಸಹ ನಡೆಸಿದ್ದಾರೆ. ಡಿ. 31 ರಂದು ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿದ್ದ ಷಾ, ಬೂತ್ ಮಟ್ಟದ ಸಮಿತಿ ರಚನೆ ಹಾಗೂ ಚುನಾವಣಾ ಸಿದ್ದತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಜನವರಿ 9 ರೊಳಗೆ ಬೂತ್ ಸಮಿತಿಗಳ ಕಾರ್ಯಗಳನ್ನು ಪೂರ್ಣಗೊಳಿಸುವ ಟಾಸ್ಕ್ ಸಹ ನೀಡಿದ್ದರು. ಆ ಟಾಸ್ಕ್ನ ಅವಧಿ ಬಿಜೆಪಿ ಕಾರ್ಯಕರ್ತರಿಗೆ ಇಂದು ಪೂರ್ಣಗೊಂಡಿದ್ದು, ಷಾ ಅದನ್ನು ಪರಿಶೀಲನೆ ನಡೆಸಲಿದ್ದಾರೆ.
ಬಿಜೆಪಿ ಅಧ್ಯಕ್ಷ ಅಮಿತ್ ಷಾ ಕರ್ನಾಟಕಕ್ಕೆ ಭೇಟಿ ನೀದುತ್ತಿರುವುದರ ಫುಲ್ ಡೀಟೇಲ್ಸ್ ಇಲ್ಲಿದೆ...
* ಇಂದು ಸಂಜೆ 4.45 ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಮಿತ್ ಷಾ ಆಗಮನ.
* ಸಂಜೆ 5.30 ರಿಂದ ಬೆಂಗಳೂರು ಹೊರವಲಯದ ರಾಯಲ್ ಆರ್ಕಿಡ್ ರೆಸಾರ್ಟ್ ನಲ್ಲಿ ಬಿಜೆಪಿ ನಾಯಕರ ಜೊತೆ ಸಭೆ ಆರಂಭ.
* ತಡರಾತ್ರಿ 10.30 ರವರೆಗೆ ಸರಣಿ ಸಭೆ ನಡೆಸಲಿರುವ ಅಮಿತ್ ಷಾ.
* ಸಭೆ ಬಳಿಕ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಷಾ ವಾಸ್ತವ್ಯ.
* ಜನವರಿ 10 ರ ಬೆಳಗ್ಗೆ 11.30 ಕ್ಕೆ ಹೆಲಿಕಾಪ್ಟರ್ ಮೂಲಕ ಚಿತ್ರದುರ್ಗಕ್ಕೆ ಷಾ ಪ್ರಯಾಣ.
* ಚಿತ್ರದುರ್ಗದ ಹೊಳೆಲ್ಕರೆಯ ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ಭಾಗಿಯಾಗಲಿರುವ ಅಮಿತ್ ಷಾ.
* ಸಮಾವೇಶ ಬಳಿಕ ಮದ್ಯಾಹ್ನ 2.30ಕ್ಕೆ ಚಿತ್ರದುರ್ಗದಿಂದ ಬೆಂಗಳೂರು ಕಡೆ ಅಮಿತ್ ಷಾ ಪ್ರಯಾಣ.
* ಮಧ್ಯಾಹ್ನ 3.30ಕ್ಕೆ ಬೆಂಗಳೂರಿನಿಂದ ಷಾ ನಿರ್ಗಮನ.
ಚಾಣಾಕ್ಷ ಎಂದೇ ಪ್ರಸಿದ್ಧಿ ಪಡೆದಿರುವ ಅಮಿತ್ ಷಾ ಮುಂಬರುವ ಚುನಾವಣೆಗೆ ಭಾರಿ ಸಿದ್ಧತೆ ನಡೆಸುತ್ತಿದ್ದು, ಬೂತ್ ಮಟ್ಟದ ಕಾರ್ಯಕರ್ತರಿಂದ ಹಿಡಿದು ರಾಜ್ಯದ ಪ್ರಮುಖ ನಾಯಕರವರೆಗೂ ಎಲ್ಲರಿಗೂ ಡ್ರಿಲ್ ಮಾಡಿಸುತ್ತಿದ್ದಾರೆ. ಈ ಚಾಣಾಕ್ಷನ ಯೋಜನೆಗಳು ಕರ್ನಾಟಕದ ಮತದಾರರ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ. ಕರುನಾಡ ಜನತೆ ಈ ಬಾರಿ ಚುನಾವಣೆಯಲ್ಲಿ ಕಮಲ ಅರಳಿಸುವರೆ ಎಂಬುದು ಚುನಾವಣೆಯ ನಂತರವಷ್ಟೇ ತಿಳಿಯಲು ಸಾಧ್ಯ.