ಮಾನಸಿಕ ಅಸ್ವಸ್ಥ ಮಹಿಳೆಗೆ ಮರುವಸತಿ ಕಲ್ಪಿಸಿದ ಸರ್ಕಾರ

                    

Last Updated : Nov 22, 2017, 05:41 PM IST
ಮಾನಸಿಕ ಅಸ್ವಸ್ಥ ಮಹಿಳೆಗೆ ಮರುವಸತಿ ಕಲ್ಪಿಸಿದ ಸರ್ಕಾರ title=
Pic: Twitter

ಬೆಳಗಾವಿ: ಉತ್ತರ ಪ್ರದೇಶದ ಪೊಲೀಸರು ರಕ್ಷಿಸಿ ಸ್ವಾಧಾರ ಗೃಹದಲ್ಲಿ ಇರಿಸಿದ್ದ ಕನ್ನಡದ ಮಹಿಳೆಯನ್ನು ಅಧಿಕಾರಿಗಳು ರಾಜ್ಯಕ್ಕೆ ವಾಪಸ್ ಕರೆತಂದು ಮರು ವಸತಿ ಸೌಕರ್ಯ ಕಲ್ಪಿಸಿದ್ದಾರೆ. 

ಮಾನಸಿಕವಾಗಿ ಅಸ್ವಸ್ಥರಾಗಿರುವ ಲಕ್ಷ್ಮಿ ಎಂಬ ಮಹಿಳೆ ಉತ್ತರ ಪ್ರದೇಶದ ಸುಲ್ತಾನ್ ಪುರ ರೈಲ್ವೆ ನಿಲ್ದಾಣದಲ್ಲಿ ಪೊಲೀಸರ ಕೈಗೆ ಸಿಕ್ಕಿದ್ದರು. ಅವರನ್ನು ಅಲ್ಲಿಯ ಸ್ವಯಂ ಸೇವಾ ಸಂಸ್ಥೆ ನಡೆಸುತ್ತಿರುವ ಸ್ವಾಧಾರ ಗೃಹದಲ್ಲಿ ಇರಿಸಲಾಗಿತ್ತು. 

ಮಹಿಳೆಯ ಭಾಷೆ ಕನ್ನಡ ಎಂದು ತಿಳಿದ ಬಳಿಕ ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥರಾದ ಎಸ್.ಪಿ.ಸಿಂಗ್ ಅವರು ರಾಜ್ಯ ಸರ್ಕಾರದ ಹಂಗಾಮಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ರಾಜ್ಯಕ್ಕೆ ಕರೆದುಕೊಂಡು ಹೋಗುವಂತೆ ಮನವಿ ಮಾಡಿದರು. 

ರತ್ನಪ್ರಭಾ ಅವರ ಸೂಚನೆಯ ಮೇರೆಗೆ ಅಲ್ಲಿಗೆ ತೆರಳಿದ್ದ ಅಧಿಕಾರಿಗಳ ತಂಡ ಲಕ್ಷ್ಮಿ ಅವರನ್ನು ರಾಜ್ಯಕ್ಕೆ ಕರೆತಂದಿದೆ. ವಾಸ ಸ್ಥಳದ ವಿವರ ಲಭ್ಯವಾಗದ ಕಾರಣ ಲಕ್ಷ್ಮಿ ಅವರನ್ನು ಬಾಗಲಕೋಟೆಯ ನವನಗರದ ಸೃಷ್ಟಿ ಮಹಿಳಾ ಮರು ವಸತಿ ಕೇಂದ್ರದಲ್ಲಿ ಇರಿಸಲಾಗಿದೆ. ಮಾನಸಿಕವಾಗಿ ಅಸ್ವಸ್ಥರಾಗಿರುವ ಲಕ್ಷ್ಮಿ ಅವರಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆಯನ್ನೂ ಮಾಡಲಾಗಿದೆ. 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಉಮಾಶ್ರೀ ಅವರು ಬೆಳಗಾವಿಯ ಸುವರ್ಣ ಸೌಧದಲ್ಲಿ ಇಂದು ಲಕ್ಷ್ಮಿ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು. 

 

ಇದೇ ವೇಳೆ ಮುಖ್ಯಮಂತ್ರಿಯವರು ಲಕ್ಷ್ಮಿ ಅವರಿಗೆ ಸೀರೆ, ಹೊದಿಕೆ, ಹಣ್ಣು ಹಂಪಲು ನೀಡಿದರು. ಮುಖ್ಯಮಂತ್ರಿಯವರು ಕೇಳಿದ ಪ್ರಶ್ನೆಗಳಿಗೆ ಲಕ್ಷ್ಮಿ ಅವರು ನಾನು ಕನ್ನಡತಿ. ನನಗೆ ಕನ್ನಡ ಮಾತ್ರ ಗೊತ್ತು ಎಂದಷ್ಟೇ ಉತ್ತರಿಸಿದರು. 

ಲಕ್ಷ್ಮಿ ಅವರಿಗೆ ಸೂಕ್ತ ಮರು ವಸತಿ ಸೌಕರ್ಯ ಕಲ್ಪಿಸುವುದರ ಜೊತೆಗೆ ಚಿಕಿತ್ಸೆಗೂ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿಯವರು ಸೂಚಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಉಮಾ ಮಹದೇವನ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

Trending News