Har Ghar Tiranga: ರಾಜ್ಯದ 1 ಕೋಟಿ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಗುರಿ- ಸಿಎಂ ಬೊಮ್ಮಾಯಿ

ರಾಜ್ಯದಲ್ಲಿ ಸುಮಾರು 1 ಕೋಟಿಗೂ ಹೆಚ್ಚು ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಗುರಿ ಹೊಂದಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

Written by - Prashobh Devanahalli | Edited by - Puttaraj K Alur | Last Updated : Aug 8, 2022, 07:30 PM IST
  • ಮನೆ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸುವ ‘ಹರ್ ಘರ್ ತಿರಂಗ’ ಅಭಿಯಾನ ಯಶಸ್ವಿಗೊಳಿಸುವಂತೆ ಸಿಎಂ ಸೂಚನೆ
  • ರಾಜ್ಯದಲ್ಲಿ ಸುಮಾರು 1 ಕೋಟಿಗೂ ಹೆಚ್ಚು ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಗುರಿ
  • ಆ.13ರಂದೇ ಧ್ವಜ ಹಾರಿಸಿ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಸಂಭ್ರಮದ ವಾತಾವರಣ ನಿರ್ಮಾಣವಾಗಬೇಕು
Har Ghar Tiranga: ರಾಜ್ಯದ 1 ಕೋಟಿ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಗುರಿ- ಸಿಎಂ ಬೊಮ್ಮಾಯಿ  title=
‘ಹರ್ ಘರ್ ತಿರಂಗ’ ಅಭಿಯಾನ

ಬೆಂಗಳೂರು: ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಮನೆ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸುವ ‘ಹರ್ ಘರ್ ತಿರಂಗ’ ಅಭಿಯಾನ ಯಶಸ್ವಿಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸೋಮವಾರ(ಆಗಸ್ಟ್ 8) ಅಭಿಯಾನದ ಸಿದ್ಧತೆ ಪರಿಶೀಲಿಸಿ ಮಾತನಾಡಿದ ಅವರು, ‘ಈ ಕಾರ್ಯಕ್ರಮವನ್ನು ಕೇವಲ ಕಾಟಾಚಾರಕ್ಕೆ ಮಾಡದೆ, ದೇಶದ ಮೇಲಿನ ಅಭಿಮಾನ ಪ್ರೀತಿಯಿಂದ ಆಯೋಜಿಸಬೇಕು. ಇದನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂಬ ತುಡಿತದೊಂದಿಗೆ ಕಾರ್ಯನಿರ್ವಹಿಸಬೇಕು’ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಇದನ್ನೂ ಓದಿ: ಸಿದ್ದರಾಮಯ್ಯ ನಿದ್ರೆಯಲ್ಲಿಯೂ ಕೇಸರಿ ಬಣ್ಣವನ್ನು ದ್ವೇಷಿಸುತ್ತಾರೆ: ಕಟೀಲ್

ರಾಜ್ಯದಲ್ಲಿ ಸುಮಾರು 1 ಕೋಟಿಗೂ ಹೆಚ್ಚು ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ ಧ್ವಜ ವಿತರಣೆ ಕಾರ್ಯ ನಡೆಯುತ್ತಿದೆ. ಆಗಸ್ಟ್ 13ರಂದೇ ಧ್ವಜ ಹಾರಿಸುವ ಮೂಲಕ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಸಂಭ್ರಮದ ವಾತಾವರಣ ನಿರ್ಮಾಣವಾಗಬೇಕು ಎಂದು ಸೂಚಿಸಿದರು.

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಸರ್ಕಾರಿ ಕಚೇರಿಗಳಲ್ಲಿ ಈ 3 ದಿನಗಳಂದು ಪ್ರತಿದಿನ ಬೆಳಗ್ಗೆ ಧ್ವಜಾರೋಹಣ ಮಾಡಿ, ಸಂಜೆ ಇಳಿಸಬೇಕು. ಮನೆಗಳಲ್ಲಿ ಆಗಸ್ಟ್ 13ರಂದು ಧ್ವಜಾರೋಹಣ ಮಾಡಿದರೆ, 15ರವರೆಗೆ ಇರಿಸಬಹುದಾಗಿದೆ ಎಂದು ತಿಳಿಸಿದರು. ಮುಖ್ಯ ಕಾರ್ಯದರ್ಶಿಗಳು ಮತ್ತೊಮ್ಮೆ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ನಿಗದಿತ ಗುರಿ ಸಾಧಿಸಲು ಜಿಲ್ಲಾಡಳಿತಗಳಿಗೆ ಮಾರ್ಗದರ್ಶನ ನೀಡುವಂತೆ ಸಿಎಂ ಇದೇ ವೇಳೆ ಸೂಚಿಸಿದರು.

ಇದನ್ನೂ ಓದಿ: ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ ನೀಡಿದ ಸಚಿವ ಬಿ.ಸಿ.ನಾಗೇಶ್

ಇದರೊಂದಿಗೆ ಕ್ವಿಟ್ ಇಂಡಿಯಾ ಚಳವಳಿಯ ಸ್ಮರಣಾರ್ಥ ಆಗಸ್ಟ್ 9 ರಿಂದ 14ರ ನಡುವೆ ಆಯಾ ಜಿಲ್ಲೆಗಳ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ತೆರಳಿ ಸನ್ಮಾನಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರೂ ಇದರಲ್ಲಿ ಭಾಗಿಯಾಗುವಂತೆ ಸಿಎಂ ಬೊಮ್ಮಾಯಿ ಸೂಚಿಸಿದರು.

ಸಭೆಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ವಿ.ಸೋಮಣ್ಣ, ಸಿ.ಸಿಪಾಟೀಲ್, ಬಿ.ಸಿ.ಪಾಟೀಲ್, ಆರಗ ಜ್ಞಾನೇಂದ್ರ, ಆನಂದ್ ಸಿಂಗ್, ನಾರಾಯಣಗೌಡ, ಸುನಿಲ್ ಕುಮಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎನ್.ಮಂಜುಳಾ ಮತ್ತು ಇತರ ಹಿರಿಯ ಅಧಿಕಾರಿಗಳು, ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಭಾಗವಹಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News