ರಾಷ್ಟ್ರೀಯ ಪಕ್ಷಗಳಿಂದ ಕರ್ನಾಟಕದ ಪ್ರತಿಷ್ಠೆಗೆ ಕೊಳ್ಳಿ: ಎಚ್​ಡಿಕೆ ಆಕ್ರೋಶ

ರಾಷ್ಟ್ರೀಯ ಪಕ್ಷಗಳೆರಡೂ(National Parties) ಕರ್ನಾಟಕದ ಪ್ರತಿಷ್ಠೆಗೆ ಕೊಳ್ಳಿ ಇಟ್ಟು ‘ವಿಕೃತ ಕೇಕೆʼ ಹಾಕುತ್ತಿವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಅಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಹಿಂದುಪರ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಸಂದಂಭ ಎಚ್​ಡಿಕೆ ಸರಣಿ ಟ್ವೀಟ್ ಮಾಡಿದ್ದಾರೆ.

Written by - Zee Kannada News Desk | Last Updated : Feb 23, 2022, 01:26 PM IST
  • ಅಭಿವೃದ್ಧಿ, ವಿಜ್ಞಾನ-ತಂತ್ರಜ್ಞಾನಕ್ಕೆ ಹೆಸರಾದ ಕರ್ನಾಟಕ ಈಗ ವಿರುದ್ಧ ದಿಕ್ಕಿನಲ್ಲಿ ಜಗತ್ತಿನ ಗಮನ ಸೆಳೆದು ಕೃತಾರ್ಥವಾಗುತ್ತಿದೆ
  • ರಾಷ್ಟ್ರೀಯ ಪಕ್ಷಗಳೆರಡೂ ಕರ್ನಾಟಕದ ಪ್ರತಿಷ್ಠೆಗೆ ಕೊಳ್ಳಿ ಇಟ್ಟು ‘ವಿಕೃತ ಕೇಕೆʼ ಹಾಕುತ್ತಿವೆ
  • ಶಾಂತಿ-ಭದ್ರತೆ ನಿರ್ವಹಣೆಯಲ್ಲಿ ವಿಫಲವಾಗಿರುವ ಸರ್ಕಾರಕ್ಕೆ ರಾಜ್ಯಪಾಲರು ಕಿವಿ ಹಿಂಡಲೇಬೇಕು
ರಾಷ್ಟ್ರೀಯ ಪಕ್ಷಗಳಿಂದ ಕರ್ನಾಟಕದ ಪ್ರತಿಷ್ಠೆಗೆ ಕೊಳ್ಳಿ: ಎಚ್​ಡಿಕೆ ಆಕ್ರೋಶ  title=
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ವಿರುದ್ಧ ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು: ರಾಷ್ಟ್ರೀಯ ಪಕ್ಷಗಳೆರಡೂ(National Parties) ಕರ್ನಾಟಕದ ಪ್ರತಿಷ್ಠೆಗೆ ಕೊಳ್ಳಿ ಇಟ್ಟು ‘ವಿಕೃತ ಕೇಕೆʼ ಹಾಕುತ್ತಿವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಅಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಹಿಂದುಪರ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಸಂದಂಭ ಎಚ್​ಡಿಕೆ ಸರಣಿ ಟ್ವೀಟ್ ಮಾಡಿದ್ದಾರೆ.

‘ರಾಜ್ಯದಲ್ಲಿ ಶಾಂತಿ-ಭದ್ರತೆಗೆ ಅಪಾಯ ಎದುರಾಗಿದೆ. ಅಭಿವೃದ್ಧಿ, ಆವಿಷ್ಕಾರ, ಸೃಜನಶೀಲ, ವಿಜ್ಞಾನ-ತಂತ್ರಜ್ಞಾನಕ್ಕೆ ಹೆಸರಾದ ಕರ್ನಾಟಕ(Karnataka) ಈಗ ವಿರುದ್ಧ ದಿಕ್ಕಿನಲ್ಲಿ ಜಗತ್ತಿನ ಗಮನ ಸೆಳೆದು ಕೃತಾರ್ಥವಾಗುತ್ತಿದೆ. ರಾಷ್ಟ್ರೀಯ ಪಕ್ಷಗಳೆರಡೂ ಕರ್ನಾಟಕದ  ಪ್ರತಿಷ್ಠೆಗೆ ಕೊಳ್ಳಿ ಇಟ್ಟು ‘ವಿಕೃತ ಕೇಕೆʼ ಹಾಕುತ್ತಿವೆ’ ಅಂತಾ ಕಿಡಿಕಾರಿದ್ದಾರೆ.

‘ಶಿಕ್ಷಣದ ಕಾಶಿ ಕರ್ನಾಟಕದ ಶಾಲೆ-ಕಾಲೇಜುಗಳಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಸಿ ಮಕ್ಕಳಲ್ಲಿ ದ್ವೇಷದ ವಿಷವುಕ್ಕಿಸಲಾಗುತ್ತಿದೆ. 2 ವರ್ಷದಿಂದ ಕೋವಿಡ್‌ ಹೊಡೆತದಿಂದ ಮಲಗಿರುವ ವಿದ್ಯಾರಂಗವನ್ನುಸರ್ವನಾಶ ಮಾಡುವ ಹುನ್ನಾರವಷ್ಟೇ ಇದು. ಬಡವರ ಮಕ್ಕಳು ಓದಿ ವಿದ್ಯಾವಂತರಾಗಬಾರದೇ?’ ಅಂತಾ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸಮಾಜ ಘಾತುಕರನ್ನು ಬೆಳೆಸಿದ್ದು ಕಾಂಗ್ರೆಸ್, ಮತಾಂಧರನ್ನು ಪೋಷಿಸಿದ್ದು ಸಿದ್ದರಾಮಯ್ಯ: ಬಿಜೆಪಿ

‘ಎರಡೂ ರಾಷ್ಟ್ರೀಯ ಪಕ್ಷಗಳು(National Parties) ರಾಜ್ಯಾದ್ಯಂತ ‘ರಾಜಕೀಯ ಕೊರೊನಾʼವನ್ನು ಹಬ್ಬಿಸುತ್ತಿವೆ. ಆ ಮೂಲಕ ಜನರ ಮನಸ್ಸುಗಳನ್ನು ಹಾಳು ಮಾಡುತ್ತಿವೆ. ಈ ಮಹಾಮಾರಿಗೆ ಲಸಿಕೆ ಇಲ್ಲ. ಜನರು ಈ ಹುನ್ನಾರವನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದು. ಅಧಿಕೃತ ಪ್ರತಿಪಕ್ಷದ ಸ್ವಪ್ರತಿಷ್ಠೆ, ಆಡಳಿತ ಪಕ್ಷದ ಅಸಮರ್ಥತೆಗೆ ವಿಧಾನ ಕಲಾಪ ಆಪೋಶನವಾಯಿತು. ‘ನಾನು ಹೊಡೆದಂಗೆ ಮಾಡುತ್ತೇನೆ, ನೀನು ಅತ್ತಂಗೆ ಮಾಡುʼ ಎನ್ನುವಂತೆ ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಕುಮ್ಮಕ್ಕಾಗಿ ‘ಕಲಾಪಕ್ಕೆ ಕುಣಿಕೆʼ ಬಿಗಿದು ಜನರ ಆಶೋತ್ತರಗಳನ್ನು ಸದನದಲ್ಲೇ ಸಮಾಧಿ ಮಾಡಿದವು’ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಿಗದಿತ ವೇಳಾಪಟ್ಟಿಗಿಂತ 3 ದಿನ ಮೊದಲೇ ಮುಗಿದ ಅಧಿವೇಶನ(Assembly Session)ದಲ್ಲಿ ಆರೂವರೆ ಕೋಟಿ ಕನ್ನಡಿಗರಿಗೆ ಸೊನ್ನೆ ಸುತ್ತಲಾಗಿದೆ. ಜನಪ್ರತಿನಿಧಿಗಳ ಕೇವಲ ಟಿಎ-ಡಿಎಗಾಗಿ ಮತ್ತು ವೇತನ, ಭತ್ಯೆ ಏರಿಸಿಕೊಳ್ಳಲಷ್ಟೇ ಅಧಿವೇಶನ ನಡೆದಿದೆ. ಜನರು ಏನೆಂದುಕೊಂಡಾರು? ಎಂಬ ಕನಿಷ್ಠ ಭಯವೂ ಇಲ್ಲದ ‘ಆತ್ಮವಂಚನೆಯ ಪರಾಕಾಷ್ಠೆʼ ಇದು’ ಅಂತಾ ಟ್ವೀಟ್ ಮಾಡಿದ್ದಾರೆ.

‘ಹಿಜಾಬ್, ಕೇಸರಿ ಶಾಲು ಮತ್ತು ಶಿವಮೊಗ್ಗದಲ್ಲಿ ನಡೆದ ಯುವಕನ ಕೊಲೆ(Shivamogga Youth Murder Case)... ಇವೆಲ್ಲಾ ಯಾರಿಂದ ಯಾರಿಗಾಗಿ ನಡೆಯುತ್ತಿವೆ? ಈ ‘ಟೂಲ್ʼಕಿಟ್ʼ ರೂವಾರಿಗಳು ಯಾರು? ಅಧಿವೇಶನವನ್ನು ಹಳ್ಳ ಹಿಡಿಸಿದ್ದಕ್ಕೂ ಈ ಎಲ್ಲಾ ಪ್ರತಿಗಾಮಿ ಘಟನೆಗಳಿಗೆ ಸಂಬಂಧ ಇದೆ ಎನ್ನುವ ಅನುಮಾನ ನನ್ನದು. ಸತ್ಯವೇನೆಂಬುದು ಜನರಿಗೆ ಗೊತ್ತಾಗಬೇಕು’ ಅಂತಾ ಎಚ್​ಡಿಕೆ ಹೇಳಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಹೇಳುವುದೆಲ್ಲವೂ ಸುಳ್ಳು, ಸುಳ್ಳು, ಸುಳ್ಳು: ಬಿಜೆಪಿ ಟೀಕೆ

‘ಸಾವಿನ ಮನೆಯಲ್ಲಿ ಮತಫಸಲು ತೆಗೆಯುವ ನಿರ್ಲಜ್ಜ ನಡೆ ಅಸಹನೀಯ. ಶಾಂತಿಯನ್ನು ಕದಡಿದ ಪಾಪ ಸುಮ್ಮನೆ ಬಿಡುವುದಿಲ್ಲ. ಹಚ್ಚಹಸರಿನ ನಿರ್ಮಲ ಮಲೆನಾಡಿನಲ್ಲಿ ಹೊತ್ತಿ ಉರಿಯುತ್ತಿರುವ ‘ದ್ವೇಷದಳ್ಳುರಿʼ ಇಡೀ ರಾಜ್ಯಕ್ಕೇ ಶಾಪವಾಗಿ ಪರಿಣಮಿಸಲಿದೆ. ರಾಜ್ಯಪಾಲರು ತಕ್ಷಣ ಮಧ್ಯಪ್ರವೇಶ ಮಾಡಬೇಕು. ಅವರು ಯಾರ ಕೈಗೊಂಬೆಯೂ ಆಗಬಾರದು ಎಂದು ನಾನು ಮತ್ತೊಮ್ಮೆ ಆಗ್ರಹಿಸುತ್ತಿದ್ದೇನೆ. ಶಾಂತಿ-ಭದ್ರತೆ ನಿರ್ವಹಣೆಯಲ್ಲಿ ವಿಫಲವಾಗಿರುವ ಸರ್ಕಾರಕ್ಕೆ ರಾಜ್ಯಪಾಲರು ಕಿವಿ ಹಿಂಡಲೇಬೇಕು ಎಂಬುದು ನನ್ನ ಒತ್ತಾಯ’ ಅಂತಾ ಎಚ್​ಡಿಕೆ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News