ದೇವೇಗೌಡರ ಬಗ್ಗೆ ಮಾತನಾಡಲು ನಾಚಿಕೆ ಆಗುವುದಿಲ್ಲವೇ? : ಡಿಕೆಶಿ ವಿರುದ್ಧ ಹೆಚ್‌ಡಿಕೆ ಗರಂ

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ ನೈಸ್ ಯೋಜನೆಗೆ ಒಪ್ಪಂದ ಮಾಡಿಕೊಳ್ಳಲಾಯಿತು ಎಂದು ಹೇಳಿದ್ದ ಡಿಕೆಶಿ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಅಲ್ಲದೆ, ದೇವೇಗೌಡರ ಬಗ್ಗೆ ಮಾತನಾಡಲು ನಾಚಿಕೆ ಆಗುವುದಿಲ್ಲವೇ? ಎಂದು ಆಕ್ರೋಶ ಹೊರಹಾಕಿದ್ದಾರೆ.

Written by - Krishna N K | Last Updated : Jul 22, 2023, 05:01 PM IST
  • ಗಂಗೆಯಲ್ಲಿ ಸಾವಿರ ಸಲ ಮುಳುಗಿದರೂ ಈ ಪಾಪ ಅಳಿಯದು.
  • ಸದನ ಸಮಿತಿ ಶಿಫಾರಸಿನಂತೆ ಸಿಬಿಐ ತನಿಖೆಗೆ ವಹಿಸಲು ಆಗ್ರಹ.
  • ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ.
ದೇವೇಗೌಡರ ಬಗ್ಗೆ ಮಾತನಾಡಲು ನಾಚಿಕೆ ಆಗುವುದಿಲ್ಲವೇ? : ಡಿಕೆಶಿ ವಿರುದ್ಧ ಹೆಚ್‌ಡಿಕೆ ಗರಂ title=

ಬೆಂಗಳೂರು : ನೈಸ್ ಯೋಜನೆಗೆ ಸಂಬಂಧಿಸಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತೀವ್ರ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಪ್ರಹಾರ ನಡೆಸಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ ನೈಸ್ ಯೋಜನೆಗೆ ಒಪ್ಪಂದ ಮಾಡಿಕೊಳ್ಳಲಾಯಿತು ಎಂದು ಹೇಳಿದ್ದ ಡಿಕೆಶಿ ಅವರ ವಿರುದ್ಧ ಕಿಡಿಕಿಡಿಯಾಗಿರುವ ಅವರು, ನೈಸ್ ಅಕ್ರಮಗಳಲ್ಲಿ ನಿಮ್ಮ ಪಾತ್ರವೇನು ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಡಿಕೆಶಿ ಹಾಗೂ ಕೆಲ ಅಧಿಕಾರಿಗಳ ವಿರುದ್ಧ ಗಂಭೀರ ಅರೋಪ ಮಾಡಿದ್ದಾರೆ.

ಇದನ್ನೂ ಓದಿ: ಶೀಘ್ರವೇ 660 ಪಿಡಿಒ & 1323 ಗ್ರೇಡ್ ಕಾರ್ಯದರ್ಶಿಗಳ ನೇಮಕ!

ಇದೇನು ಬುಲ್ಡೋಜ್ ಬೆಂಗಳೂರಾ? : ನೈಸ್ ಯೋಜನೆಗೆ ಹೆಚ್.ಡಿ.ದೇವೇಗೌಡರೇ ಸಹಿ ಹಾಕಿದ್ದು ಎಂದು ಹೇಳುವ ಮೂಲಕ ತಾವು ಎಸಗಿದ ಅಕ್ರಮಕ್ಕೆ ತೇಪೆ ಹಚ್ಚಲು ಹೊರಟಿದ್ದಾರೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು. ಆದರೆ, ಅದೇ ದೇವೇಗೌಡರ ಕಾಲದಲ್ಲಿ ಆಗಿದ್ದ ಮೂಲ ಒಪ್ಪಂದದ ಬಗ್ಗೆ ಅವರದ್ದು ಧ್ಯಾನಸ್ಥ ಮೌನ!! ಯಾಕೆ?? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಬುಲ್ಡೋಜ್ ಬೆಂಗಳೂರು ಹಾಗೂ ಬುಲ್ಡೋಜ್ ಕರ್ನಾಟಕ ಎಂದು ಹ್ಯಾಷ್ ಟ್ಯಾಗ್ ಮಾಡಿ ನೇರವಾಗಿ ಡಿಕೆಶಿ ಅವರನ್ನು ಕುಟುಕಿದ್ದಾರೆ.

ನೈಸ್ ರಸ್ತೆಯ 'ತಿರುಚಿದ ಒಪ್ಪಂದ'ದ ಬಗ್ಗೆಯೂ ಡಿಕೆಶಿ  ಅವರು ಹೇಳಬೇಕಿತ್ತಲ್ಲವೇ? ಬ್ರ್ಯಾಂಡ್ ಬೆಂಗಳೂರು ಟೀಮಿನ ಮುಖ್ಯಸ್ಥರ ಕರಾಮತ್ತಿನ ಬಗ್ಗೆಯೂ ಬೆಳಕು ಚೆಲ್ಲಬೇಕಲ್ಲವೇ? ಅದು ಬಿಟ್ಟು, ಸತ್ಯ ಮರೆಮಾಚಿ ಬರೀ 'ಸಹಿ'ಯ ಬಗ್ಗೆ ನೀವು ಗೊಣಗಿದ್ದು ಯಾಕೆ? ಸದನ ಸಮಿತಿ ವರದಿಯ ಬಗ್ಗೆಯೂ ಚಕಾರ ಎತ್ತದಿರುವುದು ಯಾಕೋ.. ಏನಿದು ಈ ನಿಗೂಢ ಸೋಜಿಗ?? ಎಂದು ಕುಮಾರಸ್ವಾಮಿ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಾವೆಲ್ಲ ಬಡ್ಡಿ ಮಕ್ಕಳು : ಮುಖ್ಯಮಂತ್ರಿ ಚಂದ್ರು

ಮೂಲ ಒಪ್ಪಂದ ನೆನಪಿಸಿದ ಹೆಚ್ ಡಿಕೆ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಉರುಫ್ ನೈಸ್ ರಸ್ತೆ ಯೋಜನೆಗೆ ರಾಜ್ಯ ಸರಕಾರದಿಂದ ನಯಾಪೈಸೆ ಕೊಡುವುದಿಲ್ಲ, ಪೂರ್ಣ ಹೂಡಿಕೆ ಹಣವನ್ನು ಕಂಪನಿಯೇ ಭರಿಸಬೇಕು, ಭೂಸ್ವಾಧೀನವೂ ಸೇರಿ ಸರಕಾರದ ಮೇಲೆ ಯಾವುದೇ ಹೊರೆ ಇರುವಂತಿಲ್ಲ. ಇದು ದೇವೇಗೌಡರ ಕಾಲದಲ್ಲಿ ಆದ ಮೂಲ ಒಪ್ಪಂದದ ಸಾರಾಂಶ.
ಹಾಗಾದರೆ, ಈ ಯೋಜನೆ 'ಸಾರ'ವಾಗಿದ್ದು ಯಾರಿಗೆ? ಎಂದು ಉಪ ಮುಖ್ಯಮಂತ್ರಿಗಳನ್ನು ಕುಟುಕಿದ್ದಾರೆ.

ಒಪ್ಪಂದ ತಿರುಚಿದ ಸೂತ್ರಧಾರ ಬ್ರ್ಯಾಂಡ್ ಬೆಂಗಳೂರು ಮುಖ್ಯಸ್ಥ: ಬ್ರ್ಯಾಂಡ್ ಬೆಂಗಳೂರು ಹರಿಕಾರಾಗಲು ಹೊರಟಿರುವ ನೀವು, 'ತಿರುಚಿದ ಒಪ್ಪಂದ'ದ ಸೂತ್ರಧಾರರನ್ನೇ ಪಕ್ಕದಲ್ಲಿ ಇಟ್ಟುಕೊಂಡಿದ್ದೀರಿ. ಒಪ್ಪಂದ ತಿರುಚಿದ ಪರಿಣಾಮ ರಾಜ್ಯವು ಕೋರ್ಟ್ ಕಟಕಟೆಯಲ್ಲಿ ನಿಲ್ಲಬೇಕಾಯಿತು. ಸಾವಿರಾರು ಕೋಟಿ ಲೂಟಿಯಾಯಿತು. ಸರಕಾರ & ಜನರ ಸಾವಿರಾರು ಎಕರೆ ಭೂಮಿ ಭೂಗಳ್ಳರ ಪಾಲಾಯಿತು ಎಂದು ಮಾಜಿ ಮುಖ್ಯ ಕಾರ್ಯದರ್ಶಿ ಇಬ್ಬರ ವಿರುದ್ಧ ಮಾಜಿ ಮುಖ್ಯಮಂತ್ರಿಗಳು ಟೀಕಾ ಪ್ರಹಾರ ನಡೆಸಿದ್ದಾರೆ.

ದೇವೇಗೌಡರ ಬಗ್ಗೆ ಮಾತನಾಡಲು ನಾಚಿಕೆ ಆಗುವುದಿಲ್ಲವೇ?: ಬ್ರ್ಯಾಂಡ್ ಬೆಂಗಳೂರು ಎಂದರೆ ಬುಲ್ಡೋಜ್ ಬೆಂಗಳೂರಾ? ಇಡೀ ಬೆಂಗಳೂರು ನಗರವನ್ನು ಛಿದ್ರಛಿದ್ರ ಮಾಡಿ ಪೋಗದಸ್ತಾಗಿ ಬುಲ್ಡೋಜ್ ಮಾಡಿ ಕಿಸೆ ತುಂಬಿಸಿಕೊಳ್ಳುವುದಾ? ಕರ್ನಾಟಕವನ್ನು ಕಡಲೇಪುರಿಯಂತೆ ಮುಕ್ಕಿ ತಿನ್ನುವುದಾ? ಎಂದು ಪ್ರಶ್ನಿಸಿರುವ ಅವರು; 2014-2016ರಲ್ಲಿನ ಸದನ ಸಮಿತಿ ವರದಿಯನ್ನು ತಾವು ಓದಿಲ್ಲವೇ? ಅಥವಾ ಅದನ್ನು ಓದದೇ ಕಸದ ಬುಟ್ಟಿಗೆ ಎಸೆದಿದ್ದೀರಾ? ಕೊಳ್ಳೆ ಹೊಡೆದ ಈಸ್ಟ್ ಇಂಡಿಯಾದಂಥ ಕಂಪನಿ ಜತೆ ಕೈ ಜೋಡಿಸಿದ ನಿಮಗೆ, ದೇವೇಗೌಡರ ಹೆಸರು ಹೇಳುವ ಅರ್ಹತೆ ಇದೆಯಾ? ರಾಜ್ಯದ ಅಭ್ಯುದಯಕ್ಕೆ ಬದುಕನ್ನೇ ಮೀಸಲಿಟ್ಟ ಆ ಹಿರಿಯ ಜೀವದ ಬಗ್ಗೆ ನಾಲಿಗೆ ಜಾರಿ ಬಿಡಲು ನಾಚಿಕೆ ಆಗುವುದಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ಜನರ ಜೀವನ ದುಸ್ತರವಾಗಿದೆ: ಬಸವರಾಜ ಬೊಮ್ಮಾಯಿ

ಅಸಹ್ಯ ಅನಿಸುವುದಿಲ್ಲವೇ?: ನೈಸ್ ಕರ್ಮವನ್ನೆಲ್ಲ ಒಮ್ಮೆ ಕಣ್ಮುಚ್ಚಿ ನೆನಪು ಮಾಡಿಕೊಳ್ಳಿ. ಅಲ್ಲಿ ನೀವೆಲ್ಲಿ ನಿಲ್ಲುತ್ತಿರಿ ಎಂದು ಊಹಿಸಿಕೊಳ್ಳಿ, ಮಾಡಿದ ಪಾಪಗಳೆಲ್ಲವೂ ಸ್ಲೈಡುಗಳಂತೆ ಪ್ರತ್ಯಕ್ಷವಾಗುತ್ತವೆ. ಗಂಗೆಯಲ್ಲಿ ಸಾವಿರ ಸಲ ಮುಳುಗಿದರೂ ಅಳಿಯದ ಪಾಪವದು.ರಾಜ್ಯವನ್ನೇ ದೋಚಿದ ಖಾಸಗಿ ಕಂಪನಿಗೆ 'ಪೊಲಿಟಿಕಲ್ ಏಜೆಂಟ್' ಆಗುವುದಕ್ಕೆ ಅಸಹ್ಯ ಅನಿಸುವುದಿಲ್ಲವೇ? ಎಂದು ಕುಮಾರಸ್ವಾಮಿ ಅವರು ಕಿಡಿ ಕಾರಿದ್ದಾರೆ.

ಅಧಿಕಾರಿಗಳ ಅನೈತಿಕ ಭ್ರಷ್ಟವ್ಯೂಹ: ನೈಸ್ ಯೋಜನೆ ಯಾರಿಗೆಲ್ಲಾ ಕಾಮಧೇನು, ಕಲ್ಪವೃಕ್ಷವಾಗಿದೆ ನನಗಿಂತ ನಿಮಗೆ ಚೆನ್ನಾಗಿ ಗೊತ್ತು. ಧನಪಿಶಾಚಿ ರಾಜಕಾರಣಿಗಳು, ಮುಖ್ಯ ಕಾರ್ಯದರ್ಶಿ ಮಟ್ಟದವರೂ ಸೇರಿ ಅನೇಕ ಅಧಿಕಾರಿಗಳ 'ಅನೈತಿಕ ಭ್ರಷ್ಟವ್ಯೂಹ' ಕರ್ನಾಟಕವನ್ನು ಕಂಡರಿಯದ ರೀತಿಯಲ್ಲಿ ಲೂಟಿ ಮಾಡಿದೆ. ಈ ಲೂಟಿಯ ಕಥೆಯಲ್ಲಿ ನಿಮ್ಮ ಪಾತ್ರವೇನು? ಎಂದು ಡಿಕೆಶಿ ಅವರನ್ನು ಕುಮಾರಸ್ವಾಮಿ ಅವರು ನೇರವಾಗಿ ಪ್ರಶ್ನಿಸಿದ್ದಾರೆ.

ತಾವು ಈಗ ಫುಲ್ ಬ್ಯುಸಿ, ನಾನು ಬಲ್ಲೆ. ಆದರೂ ಕೊಂಚ ಬಿಡುವು ಮಾಡಿಕೊಳ್ಳಿ, ಸದನ ಸಮಿತಿ ವರದಿಯ ಮೇಲೆ ಕಣ್ಣಾಡಿಸಿ. ದೇವೇಗೌಡರು ಸಿಎಂ ಆಗಿದ್ದ 1995ರ ಅಕ್ಟೋಬರ್, ನವೆಂಬರಿನಲ್ಲಿ ಈ ಯೋಜನೆಗೆ ಸಹಿ ಹಾಕುವ ವೇಳೆ ಇಂದಿನ ಮುಖ್ಯಮಂತ್ರಿಗಳೂ ಅಂದು ಹಣಕಾಸು ಸಚಿವರಾಗಿದ್ದರು.ಅವರಿಗೂ ಸತ್ಯ ಗೊತ್ತಿರುತ್ತದೆ. ಒಮ್ಮೆ ವಿಚಾರಿಸಲು ನಿಮಗೇನು ಸಮಸ್ಯೆ? ಎಂದಿದ್ದಾರೆ ಅವರು.

ಸಿಬಿಐ ತನಿಖೆಗೆ ವಹಿಸಿ: ಸದನ ಸಮಿತಿಯ ಕೊನೆ ಪ್ಯಾರಾ ಓದಿಕೊಳ್ಳಿ. ಸಮಿತಿ ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ. ನಿಮಗೆ ಧೈರ್ಯವಿದ್ದರೆ ಸಿಬಿಐ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಿ. ನೂರಾ ಮೂವತ್ತೈದು ಸೀಟುಗಳ ಬಹುಮತ ಸರಕಾರ ನಿಮ್ಮದಲ್ಲವೇ? ನುಡಿದಂತೆ ನಡೆಯುವ ಸರಕಾರ ನಿಮ್ಮದಲ್ಲವೇ?? ನೀವು ನುಡಿದಂತೆ ನಡೆಯುವ ಸಮಯ ಬಂದಿದೆ. ನಡೆದು ತೋರಿಸುವಿರಾ? ಎಂದು ಅವರು ಕೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News