COVID 19 ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಿಎಂ ಯಡಿಯೂರಪ್ಪಗೆ ಎಚ್.ಕೆ. ಪಾಟೀಲ್ ಪತ್ರ

ವಿಶ್ವದಾದ್ಯಂತ ಮಹಾಮಾರಿ ಕೊರೋನಾವೈರಸ್ (ಕೋವಿಡ್-19)ರಿಂದಾಗಿ ಆಘಾತಕಾರಿ ಹಂತ ತಲುಪುತ್ತಿರುವ ಸಂದರ್ಭದಲ್ಲಿ ಕರ್ನಾಟಕದಲ್ಲಿಯೂ ಸಹ ಅತ್ಯಂತ ಗಂಭೀರವಾದ ಪರಿಸ್ಥಿತಿ ಈಗ ನಿರ್ಮಾಣವಾಗಿರುವ ಸಂದರ್ಭದಲ್ಲಿ ಅತ್ಯಂತ ಅವಶ್ಯಕ ಮತ್ತು ತುರ್ತಾಗಿ ಕೆಲವು ಕ್ರಮಗಳನ್ನು ಕೈಗೊಳ್ಳಲೇಬೇಕಾದ ಅವಶ್ಯಕತೆ ಇರುವುದರಿಂದ ಈ ಕೆಳಕಂಡ ಕೆಲ ಅಂಶಗಳನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ.

Last Updated : Jul 7, 2020, 03:40 PM IST
COVID 19 ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಿಎಂ ಯಡಿಯೂರಪ್ಪಗೆ ಎಚ್.ಕೆ. ಪಾಟೀಲ್ ಪತ್ರ title=

ಬೆಂಗಳೂರು: ರಾಜ್ಯದಲ್ಲಿ COVID 19 ಸೋಂಕು ಹರಡುವಿಕೆ ವ್ಯಾಪಕವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಏನು‌ ಮಾಡಬೇಕೆಂದು ಮಾಜಿ ಸಚಿವರಾದ ಎಚ್.ಕೆ. ಪಾಟೀಲ್ (HK Patila), ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರಿಗೆ ಪತ್ರ ಬರೆದಿದ್ದಾರೆ. ಪತ್ರದ ಸಂಪೂರ್ಣ ಸಾರಾಂಶ ಇಲ್ಲಿದೆ.

ಸನ್ಮಾನ್ಯ ಶ್ರೀ ಯಡಿಯೂರಪ್ಪನವರೇ,
ವಿಶ್ವದಾದ್ಯಂತ ಮಹಾಮಾರಿ   ಕೋವಿಡ್ -19 (COVID-19) ರಿಂದ ಜನರನ್ನು ರಕ್ಷಿಸಲು ಇಡೀ ವಿಶ್ವ ಆತಂಕಕ್ಕೀಡಾಗಿ ಗಂಭೀರವಾದ ಪರಿಸ್ಥಿತಿ ಎದುರಿಸುತ್ತಾ ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಾ, ಹೊಸ ಹೊಸ ಅನುಭವಗಳನ್ನು ಪಡೆಯುತ್ತಿದೆ. ಸರ್ಕಾರಗಳು ಮಾಡುತ್ತಿರುವ ಪ್ರಯತ್ನಗಳು ಏನೇನೂ ಸಾಲದು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕರ್ನಾಟಕ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯುವ ಗಂಭೀರ ರೋಗಿಗಳ ಕಾಳಜಿಯಲ್ಲಿ ಕೊರತೆ ಮತ್ತು ಇನ್ನೂ ಅನೇಕ ಕ್ರಮಗಳನ್ನು ಕೈಗೊಳ್ಳದೇ ಆಗಿರುವ ಪ್ರಮಾದಗಳು ಮತ್ತು ದೂರದೃಷ್ಠಿ ಮತ್ತು ದಿಕ್ಸೂಚಿ ಇಲ್ಲದ ಪರಿಣಾಮಕಾರಿ ಅಲ್ಲದ ಕ್ರಮಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿವೆ. ಇದರಿಂದಾಗಿ ಮಹಾಮಾರಿಯ ಹರಡುವಿಕೆ ಇನ್ನಷ್ಟು ಹೆಚ್ಚಾಗಬಹುದೆಂಬ ಕಳವಳಕಾರಿ ಪರಿಸ್ಥಿತಿ ಉಂಟಾಗಿದೆ. ಈ ಕಳವಳಕ್ಕೆ ಹಲವಾರು ಕಾರಣಗಳಿವೆ ಮತ್ತು ಪರಿಹಾರಕ್ಕೆ ಸಮರೋಪಾದಿಯಲ್ಲಿ ಅನುಷ್ಠಾನಗೊಳಿಸಬೇಕಾದ ಪರಿಣಾಮಕಾರಿ ಅನೇಕ ಮಾರ್ಗಸೂತ್ರಗಳಿವೆ. ಸರ್ಕಾರ ಜನರ ಕಾಳಜಿ ದೃಷ್ಠಿಯಿಂದ ಹಲವಾರು ಸಲಹೆಗಳನ್ನು ಸ್ವೀಕರಿಸಬೇಕಾಗಿದೆ ಮತ್ತು ತಾರ್ಕಿಕ ಅಂತ್ಯ ಕಾಣುವ ಸೂಕ್ತ ಮತ್ತು ಗಂಭೀರವಾದ ಕ್ರಮಗಳನ್ನು ಪ್ರಾಮಾಣಿಕವಾಗಿ ಕೈಗೊಳ್ಳಬೇಕಾಗಿದೆ.

ವಿಶ್ವದಾದ್ಯಂತ ಮಹಾಮಾರಿ  ಕರೋನವೈರಸ್ (Coronavirus) ಕೋವಿಡ್-19 ರಿಂದಾಗಿ ಆಘಾತಕಾರಿ ಹಂತ ತಲುಪುತ್ತಿರುವ ಸಂದರ್ಭದಲ್ಲಿ ಕರ್ನಾಟಕದಲ್ಲಿಯೂ ಸಹ ಅತ್ಯಂತ ಗಂಭೀರವಾದ ಪರಿಸ್ಥಿತಿ ಈಗ ನಿರ್ಮಾಣವಾಗಿರುವ ಸಂದರ್ಭದಲ್ಲಿ ಅತ್ಯಂತ ಅವಶ್ಯಕ ಮತ್ತು ತುರ್ತಾಗಿ ಕೆಲವು ಕ್ರಮಗಳನ್ನು ಕೈಗೊಳ್ಳಲೇಬೇಕಾದ ಅವಶ್ಯಕತೆ ಇರುವುದರಿಂದ ಈ ಕೆಳಕಂಡ ಕೆಲ ಅಂಶಗಳನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ.

ಅದಕ್ಕಾಗಿ ಈ ಹಿನ್ನೆಲೆಯಲ್ಲಿ ದಿನಾಂಕ 24.3.2020 ಮತ್ತು 26.3.2020 ಮತ್ತು 1.4.2020 ಮತ್ತು 5.4.2020, 20.4.2020, 13.5.2020 ಮತ್ತು 26.6.2020ರಂದು ನಾನು ಬರೆದ ಪತ್ರಗಳನ್ನು ಹಾಗೂ ದಿನಾಂಕ 12.3.2020 ಮತ್ತು 23.3.2020 ರಂದು ವಿಧಾನಸಭೆಯಲ್ಲಿ ನಾನು ಈ ವಿಷಯ ಪ್ರಸ್ತಾಪಿಸಿದಾಗ ಮಾಡಿದ ಹಲವಾರು ಸಲಹೆಗಳು ತಮ್ಮ ಗಮನದಲ್ಲಿರಲಿಕ್ಕೆ ಸಾಕು.

ಕೋವಿಡ್-19 ಕೊರೋನಾ ವೈರಸ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರವು ಎಲ್ಲಾ ರಂಗಗಳಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂಬ ಭಾವನೆಗಳು ಜನಮಾನಸದಲ್ಲಿ ಗಟ್ಟಿಗೊಳ್ಳುತ್ತಿವೆ. ಕೋವಿಡ್ ಸೋಂಕಿತರಿಗೆ ಮತ್ತು ಶಂಕಿತರಿಗೆ ಗುಣಮಟ್ಟದ ಸೇವೆ ಮತ್ತು ಉತ್ತಮ ಚಿಕಿತ್ಸೆ ಒದಗಿಸುವಲ್ಲಿ ಆಗುತ್ತಿರುವ ದೈನಂದಿನ ವೈಫಲ್ಯಗಳು ರಾಜ್ಯದಲ್ಲಿ ಒಂದು ಕರಾಳ ಅಧ್ಯಾಯವನ್ನು ಆರಂಭಿಸಿವೆ. ಸೋಂಕಿತರಿರಲಿ ಅಥವಾ ಶಂಕಿತರಿರಲಿ ಅವರಿಗೆ ಕನಿಷ್ಠ ಸೌಲಭ್ಯಗಳುಳ್ಳ ಸೇವೆ ದೊರಕುವುದು ಮರೀಚಿಕೆಯಾಗಿ ಮಾನವೀಯ ಅನುಕಂಪದ ಕ್ರಮಗಳು ಇಲ್ಲದಿರುವುದರಿಂದ ಶಂಕಿತರು ಮತ್ತು ಸೋಂಕಿತರು ವಿಲವಿಲ ಒದ್ದಾಡುವಂತಾಗಿದೆ.

ಕರೋನಾ ನಿರ್ವಹಣೆಯಲ್ಲಿ ಪ್ರತಿಯೊಂದು ಪರಿಕರದ ಖರೀದಿಯಲ್ಲಿ ಭ್ರಷ್ಠಾಚಾರದ ದೂರುಗಳು ಕೇಳಿಬಂದಿದ್ದು, ಸರ್ಕಾರ ಖರೀದಿಸಿರುವ ಉಪಕರಣಗಳು, ಪರಿಕರಗಳು, ಚಿಕಿತ್ಸಾ ಸಾಮಗ್ರಿಗಳು ಕಳಪೆಮಟ್ಟದ್ದವೆಂದು ದೂರುಗಳು ಪುಂಖಾನುಪುಂಖವಾಗಿ ಕೇಳಿಬರುತ್ತಿರುವುದರಿಂದ ಕೋವಿಡ್ ನಿರ್ವಹಣೆಯಲ್ಲಿ ಭ್ರಷ್ಠಾಚಾರದ ಸಂದೇಹಗಳು ಬಲವಾಗುತ್ತಿವೆ.

ಕರ್ನಾಟಕ ಸರ್ಕಾರ ಕೋವಿಡ್-19 ಕೊರೋನಾ ವೈರಸ್ ನಿರ್ವಹಣೆಯ ನಿರ್ಲಕ್ಷ್ಯ ಮತ್ತು ತಾತ್ಸಾರ ಮನೋಭಾವದಿಂದ ನಿರ್ವಹಿಸುತ್ತಿದ್ದು, ಆಸ್ಪತ್ರಯಲ್ಲಿ ಹಾಸಿಗೆ, ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್ ವ್ಯವಸ್ಥೆ ಉತ್ತಮ ಗುಣಮಟ್ಟದ ಊಟ ಸಹಿತ ಒದಗಿಸದೇ ಇರುವ ಅಧಿಕಾರಶಾಹಿಯ ನಿರ್ಲಜ್ಯ ವರ್ತನೆಯನ್ನು ಜನ ಶಪಿಸುತ್ತಿದ್ದಾರೆ.

1. ಕೋವಿಡ್-19 ಸಂಕಷ್ಟದ ಪರಮಾವಧಿಯ ಈ ಸಂದರ್ಭದಲ್ಲಿ ರಾಜ್ಯದ ಪ್ರತಿಯೊಬ್ಬ ನಾಗರೀಕರನ್ನು ಕೊರೊನಾ ವಿಮೆ ವ್ಯಾಪ್ತಿಗೆ ಸರ್ಕಾರವೇ ವಿಮಾ ಕಂಪನಿಯ ಪ್ರೀಮಿಯಂ ಭರಿಸಿ ವಿಮೆ ವ್ಯಾಪ್ತಿಗೆ ತಕ್ಷಣ ತರಬೇಕು. ಪರಿಸ್ಥಿತಿ ಹದಗೆಡುವ ಮತ್ತು ಇನ್ನಷ್ಟು ಕೈಮೀರುವ ಮುನ್ನ ಈ ನಿರ್ಣಯ ಆಗಬೇಕು.

2. ಆಸ್ಪತ್ರೆಗಳಲ್ಲಿ ವೈದ್ಯರಿಗೆ, ಸಿಬ್ಬಂದಿಗೆ, ನರ್ಸ್‍ಗಳಿಗೆ ಸ್ವಚ್ಚತಾ ಕೆಲಸಗಾರರಿಗೆ ಮತ್ತು ಪೌರ ಕಾರ್ಮಿಕರಿಗೆ ಸೋಂಕು ತಗುಲುತ್ತಿದೆ. ಇದರಿಂದಾಗಿ ಆಸ್ಪತ್ರೆಗಳಲ್ಲಿ ತೀವ್ರವಾದ ಸಿಬ್ಬಂದಿ ಕೊರತೆ ಎದುರಾಗಿದೆ. ಈ ಕೊರತೆಯನ್ನು ನೀಗಿಸಲು ಚಿಕಿತ್ಸೆಗೆ ತೊಂದರೆಯಾಗದೇ ಇರಲು ತಕ್ಷಣವೇ ಕೋವಿಡ್-19 ತುರ್ತು ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು. ತನ್ಮೂಲಕ ಚಿಕಿತ್ಸೆಗೆ ಸಿಬ್ಬಂದಿ ಕೊರತೆಯಾಗದಂತೆ ನೋಡಿಕೊಳ್ಳಬೇಕು.

3. ಆಂಬುಲೆನ್ಸ್‍ಗಳ ಕೊರತೆ ತೀವ್ರಪ್ರಮಾಣದಲ್ಲಿದೆ. ಸೋಂಕಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು 2-3 ದಿನಗಳ ವಿಳಂಬವಾಗುತ್ತಿದೆ. ಆಂಬುಲೆನ್ಸ್ ಸಿಗದೇ ಮನೆ ಬಾಗಿಲಲ್ಲಿ ಕೆಲವರು ಮೃತಪಟ್ಟಿದ್ದಾರೆ. ಕೆಲವರಂತೂ ಹಾಸಿಗೆ ಸಿಗದೇ ಆಸ್ಪತ್ರೆಯ ಆವರಣದಲ್ಲಿಯೇ ಮೃತಪಟ್ಟಿದ್ದಾರೆ. ಆಂಬುಲೆನ್ಸ್‍ಗಳನ್ನು ಒದಗಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ, ಕೆ.ಎಸ್.ಆರ್.ಟಿ.ಸಿ ಮತ್ತು ಬಿಎಂ.ಟಿಸಿಯ ಸಾವಿರಾರು ಬಸ್‍ಗಳು ತಮ್ಮ ದೈನಂದಿನ ಸೇವೆಯನ್ನು ನಿಲ್ಲಿಸಿ ಖಾಲಿ ನಿಂತಿರುವಾಗಿ ಆ ಬಸ್‍ಗಳನ್ನು ತಾತ್ಕಾಲಿಕವಾಗಿ ಕನಿಷ್ಠ ಸೌಲಭ್ಯದೊಂದಿಗೆ ಆಂಬುಲೆನ್ಸ್ ರೂಪದಲ್ಲಿ ಪರಿವರ್ತಿಸಿ ರೋಗಿಗಳನ್ನು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಬೇಕು.

4. ಉತ್ತಮ ಚಿಕಿತ್ಸೆ, ಆಂಬುಲೆನ್ಸ್ ಸೇವೆ ಮತ್ತು ಗೌರವಯುತ ಅಂತ್ಯಸಂಸ್ಕಾರಗಳು ಅತ್ಯಂತ ಪ್ರಮುಖವಾದ ಮಾನವ ಹಕ್ಕುಗಳಾಗಿದ್ದು, ಈ ಹಕ್ಕುಗಳನ್ನು ದಿನನಿತ್ಯವು ನಮ್ಮ ರಾಜ್ಯದಲ್ಲಿ ಉಲ್ಲಂಘಿಸಲಾಗುತ್ತಿದೆ. ಈ ಸೇವೆಗಳನ್ನು ಒದಗಿಸುವಲ್ಲಿ ಆಗುತ್ತಿರುವ ಪ್ರಮಾದ ಮತ್ತು ಹೀನಾಯವಾದ ಪರಿಸ್ಥಿತಿಯ ಬಗ್ಗೆ ತಕ್ಷಣವೇ ಸರಿಪಡಿಸಲು ಉನ್ನತಮಟ್ಟದ ಸಮಿತಿ ನೇಮಿಸಿ ಸೂಕ್ತವಾದಂತಹ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು. ಕೊರೋನಾದಂತಹ ಸಂಕಷ್ಟದ ಸಂದರ್ಭದಲ್ಲಿ ನಮ್ಮ ರಾಜ್ಯದಲ್ಲಿ ಪ್ರಮುಖವಾಗಿರುವ ಈ ಮೂರು ಕೆಲಸಗಳನ್ನು ನಾವು ತಕ್ಷಣ ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಬೇಕು.

5. ವೈರಾಣು ಹರಡುವಿಕೆ ವ್ಯಾಪಕವಾಗಿದೆ. ತಪಾಸಣೆಗಳು ಸಮರ್ಪಕವಾಗಿಲ್ಲ ಮತ್ತು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ತಪಾಸಣೆಯಾದ ಮಾದರಿಗಳ ಪರೀಕ್ಷಾ ಫಲಿತಾಂಶ 6-8 ದಿನಗಳಾದರೂ ಲಭ್ಯವಾಗುತ್ತಿಲ್ಲ. ನನ್ನ ಮಾಹಿತಿಯ ಪ್ರಕಾರ ಇಂದಿನ ದಿನಾಂಕಕ್ಕೆ 40,000-50,000 ತಪಾಸಣಾ ಫಲಿತಾಂಶಗಳು ಲಭ್ಯವಾಗಿಲ್ಲ. ಕೋವಿಡ್-19ರ ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯವಾದಷ್ಟು ಬೇಗ ತಪಾಸಣೆಗಳನ್ನು ಕೈಗೊಳ್ಳುವ ಬಗ್ಗೆ ಚರ್ಚಿಸಿದ್ದೇವೆ. ಆದರೆ ಈ ತಪಾಸಣೆಗಳು ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ದಕ್ಷಿಣ ಕೋರಿಯಾ ರಾಷ್ಟ್ರದಲ್ಲಿ ಸಾಮೂಹಿಕ ತಪಾಸಣೆ (Mass Testing)ಗಳನ್ನು ನಡೆಸಿ ತ್ವರಿತಗತಿ  (Rapid test)  ತಪಾಸಣೆಯನ್ನು ಕೈಗೊಳ್ಳಲಾಯಿತು. ಈ ತಪಾಸಣೆಗಳ ಫಲಿತಾಂಶವು ಶೇ. 85 ರಷ್ಟು ನಿಖರವಾಗಿರುತ್ತದೆ ಮತ್ತು 10 ನಿಮಿಷದಲ್ಲಿ ವರದಿ ಕೈಗೆ ಲಭ್ಯವಾಗುತ್ತದೆ. ಈಗ ಈ ತಪಾಸಣಾ ಕಿಟ್‍ಗಳು ICMR ಅನುಮೋದಿತವಾಗಿ ಲಭ್ಯವಾಗುತ್ತಿವೆ. ಕೋವಿಡ್-19 ಮಹಾಮಾರಿಯ ಹರಡುವಿಕೆಯನ್ನು ಸಂಪೂರ್ಣ ಅರಿಯಲು ಹಾಗೂ ಸೂಕ್ತ ಕ್ರಮ ವಹಿಸಲು ಇದರಿಂದ ಸಾಧ್ಯವಾಗುತ್ತದೆ. ಈ ಕಿಟ್‍ಗಳನ್ನು ಎಲ್ಲಾ ಜಿಲ್ಲಾ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಒದಗಿಸುವುದು ಸೂಕ್ತ.

6. ಜೀವರಕ್ಷಕ ಸಾಧನಗಳಾದ ಸೂಕ್ತವಾದ ಔಷಧಿ ಸಕಾಲಕ್ಕೆ ಲಭ್ಯಗೊಳಿಸುವುದು, ಅಗತ್ಯವಿದ್ದಲ್ಲಿ ಐ.ಸಿ.ಯು ಮತ್ತು ವೆಂಟಿಲೇಟರ್‍ಗಳನ್ನು ಅಗತ್ಯಕ್ಕೆ ತಕ್ಕಷ್ಟು ಸುಸಜ್ಜಿತ ಸ್ಥಿತಿಯಲ್ಲಿ ಕಾಪಾಡಿಕೊಳ್ಳುವುದು ಮತ್ತು ಹೊಸ ವ್ಯವಸ್ಥೆಯನ್ನು ರೂಪಿಸುವುದು ಇಂದಿನ ಅಗತ್ಯಗಳಾಗಿವೆ. ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳನ್ನು ಮತ್ತು ಸೌಲಭ್ಯ ಹೊಂದಿರುವ ತಾರಾ ಹೊಟೇಲ್‍ಗಳನ್ನು ಮತ್ತು ಆಸ್ಪತ್ರೆಯ ಅಗತ್ಯ ಪರಿಕರಗಳನ್ನು ಸರ್ಕಾರ ತನ್ನ ಸುಪರ್ದಿಗೆ ಪಡೆದುಕೊಳ್ಳಬೇಕೆಂದು ನಾನು ಹಲವಾರು ಸಂದರ್ಭಗಳಲ್ಲಿ ತಮ್ಮನ್ನು ಕೋರಿದ್ದೇನೆ. 

ಈ ಎಲ್ಲಾ ಕ್ರಮಗಳನ್ನು ತಕ್ಷಣ ಕೈಗೊಳ್ಳಿ. ಇಲ್ಲದಿದ್ದರೆ ಬೆಂಗಳೂರನ್ನು, ಕರ್ನಾಟಕವನ್ನು ಇಟಲಿ ಅಥವಾ ನ್ಯೂಯಾರ್ಕ್‍ನಂಥ ಹೀನಾಯ ಸ್ಥಿತಿಗೆ ದೂಡಿದ್ದಕ್ಕಾಗಿ ಜನರ ಆಕ್ರೋಶಕ್ಕೆ ಬಲಿಯಾಗುತ್ತೀರಿ. ದಯವಿಟ್ಟು ತುರ್ತಾದ ಇಂಥ ಸಂದರ್ಭದಲ್ಲಿ ಸೂಕ್ತವಾದಂಥ ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ತೆಗೆದುಕೊಂಡು ಜನರ ಅಪೇಕ್ಷೆ ಮತ್ತು ನಿರೀಕ್ಷೆಗಳನ್ನು ಗಮನದಲ್ಲಿರಿಸಿ ದೃಢ ಹೆಜ್ಜೆಗಳಿಗೆ ಒತ್ತಾಯಿಸುವೆ.

ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ
ಎಚ್.ಕೆ.ಪಾಟೀಲ, ಶಾಸಕರು
 

Trending News