ಬೆಂಗಳೂರು: 'ಮನುಷ್ಯತ್ವ ಇರುವವರು ಹಿಂದೂಗಳು, ಮನುಷ್ಯತ್ವ ಇಲ್ಲದವರು ಹಿಂದೂ ವಿರೋಧಿಗಳು,ನಾಡಿನ ಹೆಮ್ಮೆಯ ದಾರ್ಶನಿಕರಿಗೆ, ಸಂತರಿಗೆ, ಸಮಾಜ ಸುಧಾರಕರಿಗೆ ಅವಮಾನ ಮಾಡುವವರು ಮನುಷ್ಯತ್ವ ವಿರೋಧಿಗಳು ಎಂದು ಸಿದ್ದರಾಮಯ್ಯ ರಾಜ್ಯಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ತೀರ್ಥಹಳ್ಳಿಯಲ್ಲಿ ನಡೆದ ಜನಜಾಗೃತಿ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಸಿದ್ದರಾಮಯ್ಯ ಮಾತನಾಡುತ್ತಿದ್ದರು.
ಇಂದು ನಾವು ನಡೆಸಿರುವ ಪಾದಯಾತ್ರೆ ಯಾವುದೇ ರಾಜಕೀಯ ಲಾಭಕ್ಕಾಗಿ ಮಾಡುತ್ತಿರುವ ಹೋರಾಟ ಅಲ್ಲ. ಇಂದು ಕನ್ನಡದ ಮನಸುಗಳಿಗೆ ನೋವಾಗುವ ಕೆಲಸ ರಾಜ್ಯದಲ್ಲಿ ನಡೆಯುತ್ತಿದೆ. ಕನ್ನಡದ ಅಸ್ಮಿತೆಗೆ ಧಕ್ಕೆಯಾದಾಗ ಕನ್ನಡಪರ ಮನಸುಗಳು ಹೋರಾಟಕ್ಕೆ ಇಳಿಯಬೇಕಾಗುತ್ತದೆ.ಇಂದು ಬಸವಣ್ಣ, ಅಂಬೇಡ್ಕರ್, ಕುವೆಂಪು, ನಾರಾಯಣ ಗುರುಗಳಂತಹಾ ಮಹಾಪುರುಷರ ಚರಿತ್ರೆಯನ್ನು ತಿರುಚಲಾಗ್ತಿದೆ. ನಿಟ್ಟಿನಲ್ಲಿ ದೇಶದ ಭವಿಷ್ಯ ನಿರ್ಮಾಣ ಮಾಡುವ ಮಕ್ಕಳಿಗೆ ಎಂತಹಾ ಜ್ಞಾನ ತುಂಬಿಕೊಡಬೇಕು ಎಂಬುದು ಬಹಳ ಮುಖ್ಯ ಎಂದರು.
ಬಸವಣ್ಣನವರು ವೈದಿಕ ಧರ್ಮಕ್ಕೆ ಪರ್ಯಾಯವಾದ ಮನುಷ್ಯ ಧರ್ಮದ ಸ್ಥಾಪನೆ ಮಾಡಿದರು. ಅವರು ಮೌಢ್ಯ, ಕಂದಾಚಾರ, ಜಾತಿ ವ್ಯವಸ್ಥೆಗಳ ವಿರುದ್ಧ ಹೋರಾಟ ಮಾಡಿ ಮನುಷ್ಯ ಮನುಷ್ಯನಾಗಿ ಬಾಳುವ ಅವಕಾಶವಾಗಬೇಕು ದುಡಿದರು. ವೈದಿಕ ಧರ್ಮ ಮನುಷ್ಯ ವಿರೋಧಿಯಾಗಿತ್ತು, ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಮುಂತಾದ ಹಲವು ಮನುಷ್ಯ ವಿರೋಧಿ ಆಚರಣೆಗಳು ಇದ್ದವು. ಜಾತಿ, ಧರ್ಮಗಳ ನಡುವೆ ಕಂದರ ಸೃಷ್ಟಿಯಾಗಬಾರದು ಎಂದು ಹೋರಾಟ ಮಾಡಿದ ಬಸವಣ್ಣನವರ ಆಶಯಗಳಿಗೆ ವಿರುದ್ಧವಾಗಿ ಜನರನ್ನು ಮತ್ತೆ ವೈದಿಕ ಧರ್ಮದ ಕಡೆಗೆ ತೆಗೆದುಕೊಂಡು ಹೋಗುವ ಪ್ರಯತ್ನ ಇಂದು ಮಾಡಲಾಗುತ್ತಿದೆ. ಇದು ಆಗಬಾರದು ಎಂದು ಅವರು ಹೇಳಿದರು.
ಇದನ್ನೂ ಓದಿ : Presidential polls 2022 : ರಾಷ್ಟ್ರಪತಿ ಚುನಾವಣೆ 2022: ದೀದಿ ನೇತೃತ್ವದ 'ವಿರೋಧ ಸಭೆ'ಯಲ್ಲಿ ಬಿರುಕು!
ಅಂಬೇಡ್ಕರ್ ಅವರು ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗದೇ ಹೋಗಿದ್ದರೆ ಈ ದೇಶಕ್ಕೆ ಇಂತಹಾ ಯೋಗ್ಯ ಸಂವಿಧಾನ ಸಿಗುತ್ತಿರಲಿಲ್ಲ. ಆರ್. ಎಸ್. ಎಸ್ ಮತ್ತು ಅಂಗ ಸಂಸ್ಥೆಗಳಿಗೆ ಸಂವಿಧಾನ ರಚನೆಯಾದ ದಿನದಿಂದಲೂ ಅದರ ಬಗ್ಗೆ ಗೌರವ ಇಲ್ಲ. ಕಾರಣ ಸಂವಿಧಾನ ಸಮಾನತೆ, ಜಾತ್ಯಾತೀತತೆಯನ್ನು ಸಾರುತ್ತದೆ, ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸಿಕೊಡುತ್ತದೆ. ಇದು ಮನುವಾದಿಗಳಿಗೆ ಇಷ್ಟವಿಲ್ಲ. ಎಲ್ಲಿ ಸಾಮಾಜಿಕ ಅಸಮಾನತೆ ಇರುತ್ತದೆ ಅಲ್ಲಿ ಮೇಲ್ವರ್ಗದ ಜನರು ಕೆಳವರ್ಗದ ಜನರನ್ನು ಶೋಷಣೆ ಮಾಡಲು ಅವಕಾಶ ಇರುತ್ತದೆ. ಇದು ಅವರ ಉದ್ದೇಶ. ಸಾವಿರಾರು ವರ್ಷಗಳ ಕಾಲ ಅಸಮಾನತೆ, ದೌರ್ಜನ್ಯವನ್ನು, ಗುಲಾಮಗಿರಿಯನ್ನು ಸಹಿಸಿಕೊಂಡು ಬದುಕ್ಕಿದ್ದೇವೆ. ಇದರ ವಿರುದ್ಧ ಧ್ವನಿಯೆತ್ತಿ, ಶಾಂತಿಯುತವಾದ ಪ್ರತಿಭಟನೆಯನ್ನು ಮಾಡಬೇಕಿದೆ. ಇಲ್ಲದಿದ್ದರೆ ಸಮಾನತೆ ಸಿಗುವುದಿಲ್ಲ. ಕಾರಣ ಜಾತಿ ವ್ಯವಸ್ಥೆ ಸಾಮಾಜಿಕವಾಗಿ ಬಹಳ ಆಳವಾಗಿ ಬೇರು ಬಿಟ್ಟಿದೆ. ಅಷ್ಟು ಸುಲಭದಲ್ಲಿ ಅದನ್ನು ನಿರ್ಮೂಲನೆ ಮಾಡಲಾಗಲ್ಲ ಎಂದು ಹೇಳಿದರು.
ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ನಾಡಿನ ಹಿರಿಯ ಸಾಹಿತಿಗಳು, ದಾರ್ಶನಿಕರು, ಸಮಾಜ ಸುಧಾರಕರು ಮುಂತಾದ ಮಹಾನ್ ಚೇತನಗಳಿಗೆ ಸಂಬಂಧಿತ ವಿಚಾರಗಳನ್ನು ತಿರುಚಿ, ದೇಶದ ಭವಿಷ್ಯ ರೂಪಿಸಬೇಕಾದ ಮಕ್ಕಳಿಗೆ ವಿಷವುಣಿಸಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ತೀರ್ಥಹಳ್ಳಿಯಲ್ಲಿ ನಡೆದ ಜನಜಾಗೃತಿ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದೆ. pic.twitter.com/nzVpWh0M2Z
— Siddaramaiah (@siddaramaiah) June 15, 2022
800 ವರ್ಷಗಳ ಹಿಂದೆ ಬಸವಣ್ಣನವರು ಇವನಾರವ, ಇವನಾರವ, ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ, ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯ, ಎನ್ನ ಮನೆ ಮಗನೆಂದೆನಿಸಯ್ಯ ಕೂಡಲಸಂಗಮದೇವ ಎಂದು ಹೇಳಿದ್ದರು. ಈಗಲೂ ಸಮಾಜದಲ್ಲಿ ಏನಾದರೂ ಬದಲಾವಣೆ ಆಗಿದೆಯಾ? ಅನೇಕ ಜನ ಈ ವಚನ ಹೇಳಿ ಜಾತಿ ಮಾಡುತ್ತಾರೆ. ಇಂತಹಾ ಮನಸುಗಳಿಂದ ದೇಶಭಕ್ತಿ, ಜಾತ್ಯತೀತತೆ, ಮಾನವೀಯ ಮೌಲ್ಯಗಳನ್ನು ಕಲಿಯಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು.
ಅಂಬೇಡ್ಕರ್ ಅವರು ಸೇರಿ 7 ಜನ ಸಂವಿಧಾನ ಕರಡು ರಚನಾ ಸಮಿತಿ ಸದಸ್ಯರಾಗಿದ್ದರು. ಅದರಲ್ಲಿ ಟಿ.ಟಿ ಕೃಷ್ಣಮಾಚಾರಿ ಕೂಡ ಒಬ್ಬರು. ಇವರ ಜೊತೆ ಬಹಳಷ್ಟು ಮಂದಿ ಕಾನೂನು ತಜ್ಞರಿದ್ದರು, ಆದರೆ ಅಂಬೇಡ್ಕರ್ ಅವರಿಗೆ ಈ ದೇಶದ ಜಾತಿ ವ್ಯವಸ್ಥೆ ಮತ್ತು ಸಾಮಾಜಿಕ ವ್ಯವಸ್ಥೆ ಬಗ್ಗೆ ಇದ್ದ ಜ್ಞಾನ ಬೇರೆ ಯಾರಿಗೂ ಇರಲಿಲ್ಲ. ಆದ್ದರಿಂದ ಇವುಗಳಿಗೆ ಸೂಕ್ತ ಪರಿಹಾರ ಕೊಡುವ ಕೆಲಸವನ್ನು ಸಂವಿಧಾನದ ಮೂಲಕ ಅವರು ಮಾಡಿದ್ದಾರೆ. ಯಾರು ಜಾತಿ ವ್ಯವಸ್ಥೆ, ಅಸಮಾನತೆಯನ್ನು ಹುಟ್ಟುಹಾಕಿದ್ದಾರೆ ಅಂಥವರ ಕೈಗೆ ಸಂವಿಧಾನ ರಚನೆ ಮಾಡುವ ಅವಕಾಶ ಸಿಕ್ಕಿದ್ದರೆ ನಮಗೆ ಇಂತಹಾ ಶ್ರೇಷ್ಠ ಸಂವಿಧಾನ ಸಿಗಲು ಸಾಧ್ಯವಿರಲಿಲ್ಲ. ಅಂಬೇಡ್ಕರರನ್ನು ಸಂವಿಧಾನ ಶಿಲ್ಪಿ ಎಂದು ಕರೆದವರು ಟಿ.ಟಿ ಕೃಷ್ಣಮಾಚಾರಿ. ಇದನ್ನು ರೋಹಿತ್ ಚಕ್ರತೀರ್ಥನ ಮೂಲಕ ತೆಗಿಸಿದ್ದೀರಲ್ಲ ನಿಮಗೆ ಮಾನ ಮರ್ಯಾದಿ ಇದೆಯಾ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
1949 ನವೆಂಬರ್ 26 ರಂದು ಅಂಬೇಡ್ಕರ್ ಅವರು ಮಾಡಿದ ಭಾಷಣವನ್ನು ಓದಿದರೆ ನಿಮಗಿರುವ ಎಲ್ಲ ಸಂಶಯಗಳು ನಿವಾರಣೆಯಾಗಲಿದೆ. ದಯಮಾಡಿ ಎಲ್ಲರೂ ಇದನ್ನು ಓದಬೇಕು. ದೇಶದ ಸಾಮಾಜಿಕ ವ್ಯವಸ್ಥೆ ಬಗ್ಗೆ ಅವರಿಗಿದ್ದ ಜ್ಞಾನದ ಮಟ್ಟ ಇದರಿಂದ ಅರ್ಥವಾಗುತ್ತದೆ. ಮುಂದೆ ದೇಶ ಹೇಗಿರಬೇಕು ಎಂಬುದಕ್ಕೆ ಅವರ ಭಾಷಣ ಕೈಗನ್ನಡಿ. ಹಿಂದೂ ಧರ್ಮ, ನಾವು ಹಿಂದೂಗಳು ಎಂದು ಕೆಲವರು ನಾಟಕವಾಡುತ್ತಾರೆ. ಅವರು ಮಾತ್ರ ಹಿಂದೂಗಳ? ನಾವೆಲ್ಲ ಹಿಂದೂಗಳಲ್ಲವೇ? ಕುವೆಂಪು, ಅಂಬೇಡ್ಕರ್, ನಾರಾಯಣ ಗುರುಗಳು ಹಿಂದೂಗಳಲ್ಲವೇ? ಮನುಷ್ಯತ್ವ ಇರುವವರು ಹಿಂದೂಗಳು, ಮನುಷ್ಯತ್ವ ಇಲ್ಲದವರು ಹಿಂದೂ ವಿರೋಧಿಗಳು. ನಾಡಿನ ಹೆಮ್ಮೆಯ ದಾರ್ಶನಿಕರಿಗೆ, ಸಂತರಿಗೆ, ಸಮಾಜ ಸುಧಾರಕರಿಗೆ ಅವಮಾನ ಮಾಡುವವರು ಮನುಷ್ಯತ್ವ ವಿರೋಧಿಗಳು.
ಇಂದು ಕಿಮ್ಮನೆ ರತ್ನಾಕರ್ ಅವರಿಂದ ಆರಂಭವಾದ ಚಳವಳಿಗೆ ರಾಜಕೀಯ ರೂಪ ಕೊಡಬಾರದು, ರಾಜಕೀಯ ರೂಪ ಪಡೆಯದೆ ಇದ್ದರೆ ಇದು ಹೆಚ್ಚು ಯಶಸ್ವಿಯಾಗಲು ಸಾಧ್ಯ. ಇಲ್ಲಿ ಬಹಳಷ್ಟು ಜನ ಸಾಹಿತಿಗಳು, ರೈತಪರ, ಕನ್ನಡಪರ ಹೋರಾಟಗಾರರು, ಸಮಾಜದ ಹಲವು ಸಂಘ ಸಂಸ್ಥೆಗಳು ಬಂದಿವೆ. ಅವರೆಲ್ಲರಿಗೂ ನನ್ನ ಧನ್ಯವಾದಗಳು. ನಾಡು ನುಡಿಯ ಪರವಾದ ಇಂಥಾ ಕಾರ್ಯಕ್ರಮಗಳಿಗೆ ನಮ್ಮ ಸಂಪೂರ್ಣವಾದ ಬೆಂಬಲ ಸದಾಕಾಲ ಇರಲಿದೆ. ಇಂದು ಸಾಂಸ್ಕೃತಿಕ ಭಯೋತ್ಪಾದನೆ ನಡೆಯುತ್ತಿದೆ. ಇದರ ವಿರುದ್ಧ ಕನ್ನಡದ ಮನಸುಗಳು ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಇದನ್ನೂ ಓದಿ : Railway Employee : ರೈಲ್ವೆ ನೌಕರರಿಗೆ ಸಿಹಿ ಸುದ್ದಿ : 14% ರಷ್ಟು DA ಹೆಚ್ಚಿಸಿದ ಕೇಂದ್ರ ಸರ್ಕಾರ!
ಬಸವರಾಜ ಬೊಮ್ಮಾಯಿ ಪಠ್ಯಪುಸ್ಕರ ಪರಿಷ್ಕರಣಾ ಸಮಿತಿಯನ್ನು ವಿಸರ್ಜನೆ ಮಾಡಿದ್ದಾರೆ, ಆದರೆ ಆ ಸಮಿತಿ ಶಿಫಾರಸು ಮಾಡಿದ್ದ ಪಠ್ಯಗಳನ್ನು ತಿರಸ್ಕಾರ ಮಾಡಿಲ್ಲ. ಶಿಕ್ಷಣ ಸಚಿವ ನಾಗೇಶ್ ಅವರ ತಂದೆ ಚಂದ್ರಶೇಖರಯ್ಯ ಅವರು ರಾಮಕೃಷ್ಣ ಹೆಗಡೆ ಅವರ ಶಿಷ್ಯ, ಆದರೆ ಈ ಪುಣ್ಯಾತ್ಮ ನಾಗೇಶ್ ಆರ್. ಎಸ್. ಎಸ್ ಸೇರಿಕೊಂಡು ಬರೀ ಸುಳ್ಳು ಹೇಳುತ್ತಾರೆ. ಇಂಥವರು ಮಕ್ಕಳಿಗೆ ವಿದ್ಯೆ ಕಲಿಸಲು ಅರ್ಹರೆ? ಇಲ್ಲಿನ ಶಾಸಕ ಜ್ಞಾನೇಂದ್ರರಿಗೆ ಜ್ಞಾನವೇ ಇಲ್ಲ. ಆತ ಅಜ್ಞಾನಿ. ಕರ್ನಾಟಕ ಕಂಡ ಅತ್ಯಂತ ಅಸಮರ್ಥ ಗೃಹ ಸಚಿವ ಅಂದರೆ ಆರಗ ಜ್ಞಾನೇಂದ್ರ. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹಾ ಅಸಮರ್ಥ ಗೃಹ ಸಚಿವರನ್ನೇ ನಾನು ನೋಡಿಲ್ಲ. ಮಕ್ಕಳಿಗೆ ವಿಷ ಉಣಿಸುವ ಇಂಥವರ ವಿರುದ್ಧ ನಾವು ಹೋರಾಟವನ್ನು ಮಾಡಲೇಬೇಕು. ಈ ನಿಟ್ಟಿನಲ್ಲಿ ಇಂಥಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಆಶಿಸುತ್ತೇನೆ" ಎಂದು ಅವರು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.