ಪಕ್ಷದಲ್ಲಿನ ತಾರತಮ್ಯದಿಂದ ಬೇಸತ್ತು ರಾಜೀನಾಮೆ ನೀಡುತ್ತಿದ್ದೇನೆ: ರಾಮಲಿಂಗಾ ರೆಡ್ಡಿ

ಪಕ್ಷದಲ್ಲಿನ ತಾರತಮ್ಯದಿಂದ ಮೂಲೆಗುಂಪು ಮಾಡುತ್ತಿದ್ದಾರೆ. ಇದರಿಂದ ಬೇಸತ್ತು ರಾಜೀನಾಮೆ ನೀಡುತ್ತಿದ್ದೇನೆ ಎಂದು ಶಾಸಕ ಡಿ.ರಾಮಲಿಂಗಾರೆಡ್ಡಿ ಹೇಳಿದ್ದಾರೆ.

Last Updated : Jul 6, 2019, 02:35 PM IST
ಪಕ್ಷದಲ್ಲಿನ ತಾರತಮ್ಯದಿಂದ ಬೇಸತ್ತು ರಾಜೀನಾಮೆ ನೀಡುತ್ತಿದ್ದೇನೆ: ರಾಮಲಿಂಗಾ ರೆಡ್ಡಿ title=

ಬೆಂಗಳೂರು: ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌ನ ಅತೃಪ್ತ ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ವಿಧಾನಸೌಧಕ್ಕೆ ತೆರಳಿದ್ದು, ಇವರಲ್ಲಿ ಕಾಂಗ್ರೆಸ್ ಪಕ್ಷದ ನಿಷ್ಟಾವಂತ ನಾಯಕ ಎಂದೇ ಕರೆಸಿಕೊಂಡಿದ್ದ ಮಾಜಿ ಸಚಿವ, ಬಿಟಿಎಂ ಲೇಔಟ್‌ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ರಾಮಲಿಂಗಾರೆಡ್ಡಿ ಅವರು ತಾವು ರಾಜೀನಾಮೆ ನೀಡುತ್ತಿರುವುದಾಗಿ ಖಚಿತಪಡಿಸಿದ್ದಾರೆ. 

ವಿಧಾನಸೌಧದ ಸ್ಪೀಕರ್ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ನೀಡದ ಬಗ್ಗೆ ನನಗೆ ಬೇಸರವಿಲ್ಲ. ಪಕ್ಷದ ಹೈಕಮ್ಯಾಂಡ್ ಬಗ್ಗೆಯಾಗಲೀ, ಪಕ್ಷದ ಬಗ್ಗೆಯಾಗಲೀ ಅಸಮಾಧಾನವಿಲ್ಲ. ಆದರೆ ಪಕ್ಷದಲ್ಲಿನ ತಾರತಮ್ಯದಿಂದ ಮೂಲೆಗುಂಪು ಮಾಡುತ್ತಿದ್ದಾರೆ. ಇದರಿಂದ ಬೇಸತ್ತು ರಾಜೀನಾಮೆ ನೀಡುತ್ತಿದ್ದೇನೆ ಎಂದಿದ್ದಾರೆ. 

ಇದೇ ವೇಳೆ ಕಾಂಗ್ರೆಸ್ ನಾಯಕರು ನಿಮ್ಮನ್ನು ಸಂಪರ್ಕಿಸಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಶ್ವರ್ ಖಂಡ್ರೆ ಅವರು ಮನೆಗೆ ಬಂದಿದ್ದರು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕರೆ ಮಾಡಿದ್ದರು. ರಾಜೀನಾಮೆ ನೀಡಬೇಡಿ ಏನು ಮನವೊಲಿಸಲು ಪ್ರಯತ್ನಿಸಿದರು. ವಿದ್ಯಾರ್ಥಿ ಆಗಿದ್ದಾಗಿನಿಂದ ಕಾಂಗ್ರೆಸ್ ಪಕ್ಷದಲ್ಲಿ ಇದ್ದವನು ನಾನು. ಈಗ ಪಕ್ಷ ಬಿಟ್ಟು ಹೋಗಲು ಬೇಸರವಾಗುತ್ತಿದೆ. ಆದರೆ ಕೆಲವು ಕಾರಣಗಳಿಗಾಗಿ ರಾಜೀನಾಮೆ ನೀಡುತ್ತಿದ್ದೇನೆ, ಸದ್ಯಕ್ಕೆ ಬಿಜೆಪಿ ಸೇರುವ ಯಾವ ನಿರ್ಧಾರವನ್ನೂ ಮಾಡಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಪುತ್ರಿ ಸೌಮ್ಯ ರೆಡ್ಡಿ ಸಹ ರಾಜೀನಾಮೆ ನೀಡುತ್ತಿದ್ದಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ನಾನೊಬ್ಬನೇ ಬಂದಿದ್ದೇನೆ. ನಾನು ಯಾರ ಗುಂಪಿನಲ್ಲೂ ಗುರುತಿಸಿಕೊಂಡಿಲ್ಲ. ಮತ್ಯಾರಾರು ರಾಜೀನಾಮೆ ನೀಡುತ್ತಿದ್ದಾರೆ ಎಂಬ ಮಾಹಿತಿ ಇಲ್ಲ, ಸೌಮ್ಯ ರೆಡ್ಡಿ ರಾಜೀನಾಮೆ ಬಗ್ಗೆ ಅವರನ್ನೇ ಕೇಳಿ. ನಾನಂತೂ ರಾಜೀನಾಮೆ ನೀಡುವುದು ಖಚಿತ ಎಂದು ಹೇಳಿದರು. 

Trending News