ರಾಮನಗರ: ರಾಷ್ಟ್ರಧ್ವಜಕ್ಕೆ ಗೌರವ ಕೊಡುವ ಬಗ್ಗೆ ಸಿದ್ದರಾಮಯ್ಯ ಅವರಿಂದ ಪಾಠ ಕಲಿಯಬೇಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ಚನ್ನಪಟ್ಟಣ ತಾಲೂಕಿನ ತಗಚಗೆರೆ ಗ್ರಾಮದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ನಾನು ಕೂಡ ಸಂವಿಧಾನವನ್ನು ಓದಿಕೊಂಡಿದ್ದೇನೆ. ಆದರೆ, ನನಗೆ ಸ್ವಯಂ ಘೋಷಿತ ಸಂವಿಧಾನ ತಜ್ಞರೆನಿಸಿಕೊಂಡಿರುವವರಿಂದ ಬೋಧನೆ ಬೇಡ ಎಂದರು.
ಇದನ್ನೂ ಓದಿ: ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಆತಿಥ್ಯ ಭಾರತದ ಮಡಿಲಿಗೆ
ದೇಶಕ್ಕೆ ಸ್ವಾತಂತ್ರ್ಯ ಬರುವಾಗ ಕಟ್ಟಿದ ಕಾಂಗ್ರೆಸ್ಸೇ ಬೇರೆ. ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ಸಚನ್ನು ಬರಖಾಸ್ತು ಮಾಡಬೇಕೆಂದು ಮಹಾತ್ಮ ಗಾಂಧೀಜಿ ಅವರು ಅಂದೇ ಹೇಳಿದ್ದರು. ಅವರ ಆಶಯಕ್ಕೆ ವಿರುದ್ಧವಾಗಿ ಮುಂದುವರಿದ ಕಾಂಗ್ರೆಸ್ ಪಕ್ಷವು ಇಂದು ಎಂಥಾ ದಯನೀಯ ಸ್ಥಿತಿಗೆ ಮುಟ್ಟಿದೆ ಎಂಬುದನ್ನು ಎಲ್ಲರೂ ನೋಡುತ್ತಿದ್ದಾರೆಂದು ಮಾಜಿ ಮುಖ್ಯಮಂತ್ರಿಗಳು ಕುಟುಕಿದರು.
ನಾನು 1959 ರಲ್ಲಿ ಹುಟ್ಟಿದ್ದೇನೆ. ಸ್ವಾತಂತ್ರ್ಯ ಹೋರಾಟಕ್ಕೆ ನನ್ನದು ಏನೂ ಕೊಡುಗೆ ಇಲ್ಲ. ಈಗ ಸ್ವಾತಂತ್ರ್ಯದ ಇತಿಹಾಸ ಹೇಳುತ್ತಿರುವವರು ಹುಟ್ಟಿದ್ದರಾ? ಆಗ ಸ್ವಾತಂತ್ರ್ಯಕ್ಕಾಗಿ ರಕ್ತಪಾತವೇ ಆಗಿತ್ತು. ಈಗ ಧರ್ಮದ ಹೆಸರಿನಲ್ಲಿ ಅಂಥದ್ದು ನಡೆಯುವುದು ಬೇಕಾ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಶ್ರೀನಗರದಲ್ಲಿ ಬಾವುಟ ಹಾರಿಸಲು ಹೋಗಿ 12 ಜನರನ್ನು ಸಾಯಿಸಿದರು ಅಂದಿದ್ದರು ಕಾಂಗ್ರೆಸ್ಸಿಗರು.
ಬಿಜೆಪಿಯವರಿಂದ ವಾಚಾಮಗೋಚರ ಟೀಕೆಗೆ ಒಳಗಾಗಿದ್ದರು. ಆಗ ರಾಷ್ಟ್ರಧ್ವಜ ಕಾಣಲಿಲ್ಲವೇ ಇವರಿಗೆ? ರಾಜ್ಯದ ಜನರ ಬಗ್ಗೆ, ಅಭಿವೃದ್ಧಿ ಚರ್ಚೆ ಮಾಡುವುದನ್ನು ಬಿಟ್ಟು ರಾಷ್ಟ್ರಧ್ವಜದ ಬಗ್ಗೆ ವಿಷಯಾಂತರ ಮಾಡುತ್ತಿದ್ದಾರೆ. ಶಕ್ತಿ ಇದ್ದರೆ ಬೀದಿಯಲ್ಲಿ ಹೋರಾಟ ಮಾಡಲಿ. ಅದಕ್ಕೆ ಹೇಳಿದ್ದೇನೆ, ಕಲಾಪಕ್ಕೆ ಅಡ್ಡಿ ಮಾಡುವವರನ್ನು ಅಮಾನತು ಮಾಡಿ. ಇಲ್ಲವೇ ಸದನ ಮುಂದೂಡಿ ಎಂದು ಒತ್ತಾಯ ಮಾಡಿದ್ದೇನೆ. ಸುಖಾ ಸುಮ್ಮನೆ ತೆರಿಗೆ ಹಣ ಪೋಲು ಮಾಡುವುದು ಬೇಡ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಇದನ್ನೂ ಓದಿ: Team India Test ತಂಡಕ್ಕೆ ಸಿಕ್ಕ ಹೊಸ ಸಾರಥಿ, ಈ ಆಟಗಾರನಿಗೆ ಜವಾಬ್ದಾರಿ ವಹಿಸಿದ ಸೆಲೆಕ್ಟರ್ಸ್
ಬಿಜೆಪಿ ಮೈತ್ರಿ ಬಗ್ಗೆ ಆಹ್ವಾನ ಇಲ್ಲ
ಜೆಡಿಎಸ್ - ಬಿಜೆಪಿ ಮೈತ್ರಿ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ಅವರಿಂದ ಯಾವ ಆಹ್ವಾನವೂ ಬಂದಿಲ್ಲ ನಮಗೆ. ಪ್ರಧಾನಿ ಮೋದಿಯವರು ದೇವೇಗೌಡರನ್ನು ಮೆಚ್ಚಿಕೊಳ್ಳುವುದು ಅವರಿಬ್ಬರ ವೈಯಕ್ತಿಕ ಸಂಬಂಧ. ಅದರಲ್ಲಿ ರಾಜಕೀಯ ಇಲ್ಲ. ಚುನಾವಣೆಗೆ ಇನ್ನೂ ಒಂದು ವರ್ಷ ಸಮಯ ಇದೆ, ಏನೆಲ್ಲ ನಡೆಯುತ್ತದೆಯೋ ಕಾದು ನೋಡೋಣ. ಈಗಂತೂ ಬಿಜೆಪಿಯವರು ನಮ್ಮ ಬಳಿ ಬರುವ ಪ್ರಮೇಯ ಇಲ್ಲ. ಸದ್ಯಕ್ಕೆ ಅವರಿಗೆ ಪೂರ್ಣ ಬಹುಮತ ಇದೆ ಎಂದರು ಕುಮಾರಸ್ವಾಮಿ.
ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇಲ್ಲ. ಅವರದ್ದು 70 ಸೀಟ್ ಅಷ್ಟೇ. ಅದರ ಮೇಲೆ ಕಾಂಗ್ರೆಸ್ ಹೋಗಲ್ಲ. ಹೀಗಾಗಿ
ಜೆಡಿಎಸ್ ಶಾಸಕರ ಬ್ರೈನ್ ವಾಷ್ ಮಾಡುತ್ತಿದ್ದಾರೆ ಕಾಂಗ್ರೆಸ್ ನಾಯಕರು. ನಮಗೂ ರಾಜಕೀಯ ಗೊತ್ತಿದೆ. ನನಗೆ ಯಾವ ಶಾಕ್ ಇಲ್ಲ, ಯಾರು ಯಾರು ಹೋಗ್ತಾರೆಂದು ನನಗೆ ಗೊತ್ತು. ಇವರ ಹಣೆಬರಹ ಗೊತ್ತಿದೆ, ಯಾರು ಯಾರು ಡಬಲ್ ಗೇಮ್ ಆಡ್ತಿದ್ದಾರೆಂದು ಗೊತ್ತು. ಎಲ್ಲಕ್ಕೂ ಕಾಲ ಕೂಡಿ ಬರುತ್ತದೆ. ನಮ್ಮದು ರೈತರು ಕಟ್ಟಿರುವ ಪಕ್ಷ. ನಾವು ಯಾವ ಆಪರೇಷನ್ ಅನ್ನು ಮಾಡಲ್ಲ, ಅದರ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದರು.
ಮಕ್ಕಳ ಜತೆ ಚೆಲ್ಲಾಟ ಬೇಡ
ನಾನು ಮಂಡ್ಯದಲ್ಲಿ ಮಾತನಾಡುವಾಗ ಮಕ್ಕಳ ಜತೆ ಚೆಲ್ಲಾಟ ಆಡಬೇಡಿ ಎಂದು ರಾಷ್ಟ್ರೀಯ ಪಕ್ಷಗಳಿಗೆ ಹೇಳಿದ್ದೇನೆ. ಮಾತನಾಡುವಾಗ ಹಿಜಾಬ್ ಎಂದು ಮಾಧ್ಯಮಮಿತ್ರರು ಕೇಳಿದರು. ಆಗ ನಾನು ಹಿಜಾಬ್ - ಗಿಜಾಬ್ ಗೊತ್ತಿಲ್ಲ, ಮಕ್ಕಳ ಭವಿಷ್ಯ ಮುಖ್ಯ ಅಂದಿದ್ದೇನೆ. ಆಡುಭಾಷೆಯಲ್ಲಿ ಮಾತನಾಡುವಾಗ ಮದುವೆ-ಗಿದುವೆ ಅನ್ನುತ್ತೇವಲ್ಲ ಹಾಗೆ. ಅದನ್ನೇ ಹಿಜಾಬ್ ಬಗ್ಗೆ ಕುಮಾರಸ್ವಾಮಿ ಅಗೌರವವಾಗಿ ಮಾತನಾಡಿದ್ದಾರೆಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಯಾವುದೇ ಸಮಾಜಕ್ಕೆ, ಧರ್ಮಕ್ಕೆ ಅಪಚಾರ ಮಾಡಲ್ಲ, ಮಾಡುವುದೂ ಇಲ್ಲ. ಅಂಥ ಮನಃಸ್ಥಿತಿಯೂ ನನ್ನದಲ್ಲ. ನಾನು ಎಲ್ಲರನ್ನು ಗೌರವಿಸುವವನು. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು. ದೇಶವನ್ನು ಲೂಟೆ ಹೊಡೆದವರು ಈಗ ರಾಷ್ಟ್ರಧ್ವಜ, ರಾಷ್ಟ್ರಭಕ್ತಿ ಬಗ್ಗೆ ಮಾತನಾಡುತ್ತಿದ್ದಾರೆಂದು ಕಾಂಗ್ರೆಸ್ಸಿಗರಿಗೆ ತಿರುಗೇಟು ಕೊಟ್ಟರು.
ಇದನ್ನೂ ಓದಿ: Virat Kohli : ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್ : ಟೀಂನಿಂದ ಕೊಹ್ಲಿ ಔಟ್!
2023ಕ್ಕೆ ನಮ್ಮದೇ ಸರಕಾರ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಸ್ಥಾನಗಳನ್ನು ಗೆದ್ದು 2023ಕ್ಕೆ ಕನ್ನಡನಾಡಿನ ಜನತೆಯ ಆರ್ಶೀವಾದದಿಂದ ಜೆಡಿಎಸ್ ಸರಕಾರ ಬಂದೇ ಬರುತ್ತದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಹೀಗಾಗಿ ಪಕ್ಷ ಬಿಡುತ್ತೇವೆ ಎನ್ನುವವರ ಬಗ್ಗೆ ಚಿಂತೆ ಇಲ್ಲ. ಈ ಹಿಂದೆಯೂ 7 ಜನ ಪಕ್ಷ ಬಿಟ್ಟು ಹೋಗಿದ್ದರು. ಯಾರು ಎಷ್ಟೇ ಪ್ರಯತ್ನಪಟ್ಟರೂ ಪಕ್ಷವನ್ನು ನಿರ್ನಾಮ ಮಾಡಲು ಆಗಲ್ಲ. ಚನ್ನಪಟ್ಟಣದ ಜನ ನೂರಾರು ವಾಹನಗಳಲ್ಲಿ ಬಂದು ದೇವೇಗೌಡರ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದರು. ಜೆಡಿಎಸ್ ಎಲ್ಲಿದೆ ಅನ್ನುವುದನ್ನು 2023 ಕ್ಕೆ ಜನ ತೋರಿಸುತ್ತಾರೆ ಎಂದು ಅವರು ತಿಳಿಸಿದರು.
ಪಾದಯಾತ್ರೆಯಿಂದ ಅಧಿಕಾರ ಸಿಗಲ್ಲ
ಮೇಕೆದಾಟು ಪಾದಯಾತ್ರೆಯಿಂದ ಅಧಿಕಾರ ಹಿಡಿಯಲು ಹೊರಟ್ಟಿದ್ದಾರೆ ಕಾಂಗ್ರೆಸ್ಸಿಗರು. ಪಾದಯಾತ್ರೆಯಿಂದ ಮೇಕೆದಾಟು ಯೋಜನೆ ಆಗಲ್ಲ. ಕಾನೂನಾತ್ಮಕವಾಗಿ ಗೆಲ್ಲಬೇಕು. ರಾಜ್ಯದಲ್ಲಿ ಎಷ್ಟು ಅಣೆಕಟ್ಟುಗಳ ಕೆಲಸ ನಿಂತಿದೆ ಎನ್ನುವ ಮಾಹಿತಿ ಅವರಿಗಿದೆಯಾ? ರಾಜ್ಯದ ನೀರಾವರಿ ಯೋಜನೆಗಳಿಗಾಗಿ 2 ರಿಂದ 5 ಲಕ್ಷ ಕೋಟಿ ರೂ. ಹಣ ಬೇಕು. ಕಾಂಗ್ರೆಸ್ ನಾಯಕರ ಹೋರಾಟದಿಂದ ಅದು ಆಗುವುದಾದರೆ ನಾನು ಕೂಡ ಹೋರಾಟಕ್ಕೆ ಹೋಗುತ್ತೇನೆ ಎಂದರು ಮಾಜಿ ಮುಖ್ಯಮಂತ್ರಿಗಳು.
ರಾಮನಗರ ನನ್ನ ಕರ್ಮಭೂಮಿ.ಇಲ್ಲಿ ಅವರು ಏನು ಮಾಡಲು ಆಗುವುದಿಲ್ಲ. ಜಿಲ್ಲೆಯ ಜನರು ನನ್ನ ಜತೆಗಿದ್ದಾರೆ, ನನ್ನನ್ನು ಅಲ್ಲಾಡಿಸಲು ಅವರಿಗೆ ಆಗಲ್ಲ. ಆದರೂ ನನ್ನನ್ನು ಖಾಲಿ ಮಾಡಿಸಲು ಅವರು ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಒಂದಲ್ಲ, ಇನ್ನು ಹತ್ತು ಪಾದಯಾತ್ರೆ ಮಾಡಲಿ, ಇದು ದಿನವೂ ಬಿರಿಯಾನಿ, ಬಾಳೆಕಾಯಿ ಬಜ್ಜಿ, ಜ್ಯೂಸ್ ಇಟ್ಟುಕೊಂಡು ಮಾಡುವ ಪಾದಯಾತ್ರೆ ಜನಪರ ಪಾದಯಾತ್ರೆನಾ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.