ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಎಲ್ಲಾ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದೆ. ಬಿಜೆಪಿ ಪರಿವರ್ತನಾ ಯಾತ್ರೆ ನಡೆಸಿದರೆ, ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ ನಡೆಸುತ್ತಿದೆ. ಇನ್ನು ಪ್ರಾದೇಶಿಕ ಪಕ್ಷ ಜೆಡಿಎಸ್ ಕುಮಾರ ಪರ್ವ ನಡೆಸುತ್ತಿದೆ. ಇದೆಲ್ಲದರ ನಡುವೆ ಕಾಂಗ್ರೆಸ್ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೂಲಕ ಬೆಂಗಳೂರಿನಲ್ಲಿ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.
ಏಪ್ರಿಲ್ 7 ಮತ್ತು 8 ರಂದು ರಾಜ್ಯ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಏ. 7 ರಂದು ಬೆಳಿಗ್ಗೆ 10:45ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಬೆಳಿಗ್ಗೆ 11ಕ್ಕೆ ಮುಳಬಾಗಿಲಿಗೆ ತೆರಳಲಿರುವ ರಾಹುಲ್ ಕುರುಡುಮಲೆಗೆ ಭೇಟಿ ನೀಡಿ ಕುರುಡುಮಲೆ ಗಣೇಶನ ದರ್ಶನ ಪಡೆಯಲಿದ್ದಾರೆ.
ನಂತರ ಹೈದರವಲ್ಲಿ ದರ್ಗಾಗೆ ಭೇಟಿ ನೀಡಿ ಮುಳಬಾಗಿಲಿನಿಂದ ಕೆಜಿಎಫ್ ವರೆಗೆ, ಕೆಜಿಎಫ್ ನಿಂದ ಬಂಗಾರಪೇಟೆವರೆಗೆ ಹಾಗೂ ಬಂಗಾರಪೇಟೆಯಿಂದ ಕೋಲಾರದವರೆಗೆ ಮೂರು ಹಂತಗಳಲಿ ರೋಡ್ ಶೋ ನಡೆಸಲಿದ್ದಾರೆ.
ಆನಂತರ ಕೋಲಾರದಲ್ಲಿ ಕಾರ್ನರ್ ಮೀಟಿಂಗ್ ನಲ್ಲಿ ಭಾಗಿಯಾಗಲಿರುವ ರಾಹುಲ್, ಅಂದು ಸಂಜೆ ಚಿಕ್ಕಬಳ್ಳಾಪುರದಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಏಪ್ರಿಲ್ 8 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಕಾಂಗ್ರೆಸ್ ಬೃಹತ್ ಸಮಾವೇಶ ಐತಿಹಾಸಿಕವಾಗಿಸುವ ನಿಟ್ಟಿನಲ್ಲಿ ಕೆಪಿಸಿಸಿ ಕಾರ್ಯಗತವಾಗಿದೆ.
ಏ8 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಸಮಾವೇಶದ ಸಿದ್ಧತೆ ಬಗ್ಗೆ ಕಾಂಗ್ರೆಸ್ ಪಕ್ಷದ ಬೆಂಗಳೂರು ಮುಖಂಡರು ಸಭೆ ನಡೆಸಿದ್ದು, ಸಮಾವೇಶದಲ್ಲಿ 4 ಲಕ್ಷ ಜನರನ್ನು ಸೇರಿಸುವ ನಿಟ್ಟಿನಲ್ಲಿ ನಗರದ ಪ್ರತಿ ಮುಖಂಡರು ಜನರನ್ನ ಕರೆತರುವಂತೆ ಸೂಚನೆಯನ್ನು ನೀಡಲಾಗಿದೆ. ಅದಕ್ಕಾಗಿ ಬಿಎಂಟಿಸಿ ಮತ್ತು ಕೆಎಸ್ಆರ್ ಟಿಸಿ ಯ 4000 ಬಸ್ ಗಳನ್ನು ಬುಕ್ ಮಾಡಲು ಸಭೆಯಲ್ಲಿ ತಿರ್ಮಾನ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹಾಗೂ ಉಸ್ತುವಾರಿ ಕೆ.ಸಿ. ವೇಣುಗೋಪಾಲ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಾಸಕರು, ಸಚಿವರು, ಪದಾಧಿಕಾರಿಗಳು, ಬಿಬಿಎಂಪಿ ಸದಸ್ಯರು ಪಾಲ್ಗೊಂಡಿದ್ದರು.