close

News WrapGet Handpicked Stories from our editors directly to your mailbox

ಇಂದು ಡಿ.ಕೆ. ಶಿವಕುಮಾರ್ ಭವಿಷ್ಯ ನಿರ್ಧಾರ

ಡಿ.ಕೆ‌. ಶಿವಕುಮಾರ್ ಅವರಿಗೆ ಯಾವ ಕಾರಣಕ್ಕೂ ಜಾಮೀನು ನೀಡಬಾರದೆಂದು ಸೋಮವಾರ ಜಾರಿ ನಿರ್ದೇಶನಾಲಯದ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ. ಇಂದು ಡಿ.ಕೆ. ಶಿವಕುಮಾರ್ ಅವರಿಗೆ ಜಾಮೀನು ನೀಡಬೇಕೆಂದು ಅವರ ವಕೀಲರು ಮನವಿ ಮಾಡಿಕೊಳ್ಳಲಿದ್ದಾರೆ.   

Yashaswini V Yashaswini V | Updated: Sep 17, 2019 , 07:30 AM IST
ಇಂದು ಡಿ.ಕೆ. ಶಿವಕುಮಾರ್ ಭವಿಷ್ಯ ನಿರ್ಧಾರ
File Image

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಜಾಮೀನು ಸಿಗುತ್ತದೆಯೋ ಇಲ್ಲವೋ ಎಂಬುದು ಇಂದು ಗೊತ್ತಾಗಲಿದೆ.

ಡಿ.ಕೆ‌. ಶಿವಕುಮಾರ್ ಅವರಿಗೆ ಯಾವ ಕಾರಣಕ್ಕೂ ಜಾಮೀನು ನೀಡಬಾರದೆಂದು ಸೋಮವಾರ ಜಾರಿ ನಿರ್ದೇಶನಾಲಯದ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ. ಇಂದು ಡಿ.ಕೆ. ಶಿವಕುಮಾರ್ ಅವರಿಗೆ ಜಾಮೀನು ನೀಡಬೇಕೆಂದು ಅವರ ವಕೀಲರು ಮನವಿ ಮಾಡಿಕೊಳ್ಳಲಿದ್ದಾರೆ. ವಾದ-ಪ್ರತಿವಾದ ಆಲಿಸಲಿರುವ ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್, ಡಿ.ಕೆ. ಶಿವಕುಮಾರ್ ಅವರಿಗೆ ಜಾಮೀನು ನೀಡುತ್ತಾರೋ ಅಥವಾ ಜೈಲಿಗೆ ಕಳುಹಿಸುತ್ತಾರೋ ಎಂಬುದನ್ನು ಕಾದುನೋಡಬೇಕಾಗಿದೆ.

ಡಿ.ಕೆ. ಶಿವಕುಮಾರ್ ಜಾರಿ ನಿರ್ದೇಶನಾಲಯದ ವಶದಲ್ಲಿ ವಿಚಾರಣೆಗೆ ಸರಿಯಾಗಿ ಸ್ಪಂದಿಸಿಲ್ಲ.‌ ಎರಡನೇ ಬಾರಿ ವಶಕ್ಕೆ ಪಡೆದಾಗಲೂ ವಿಚಾರಣೆ ಸಾಧ್ಯವಾಗಿಲ್ಲ. ಅನಾರೋಗ್ಯದ ಕಾರಣದಿಂದ ಡಾ. ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಾಗಿಸಿತ್ತು. ಡಿ.ಕೆ. ಶಿವಕುಮಾರ್ ಅವರನ್ನು‌ ಮತ್ತೆ ವಿಚಾರಣೆ ನಡೆಸಬೇಕಾದ ಪ್ರಮೇಯ ಬರುತ್ತದೆ.‌ ಆಗ ನ್ಯಾಯಾಲಯದ ಅನುಮತಿ ಪಡೆದು ವಿಚಾರಣೆ ನಡೆಸುತ್ತೇವೆ. ಡಿ.ಕೆ. ಶಿವಕುಮಾರ್ ಪ್ರಭಾವಿ ಆಗಿರುವುದರಿಂದ ಸಾಕ್ಷ್ಯ ನಾಶ ಮಾಡುವ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ತಿರುಚುವ ಸಂಭವವಿದೆ‌. ಪ್ರಕರಣದ ಇತರೆ ಆರೋಪಿಗಳು ಮತ್ತು ಸಾಕ್ಷಿಗಳನ್ನು ತಮ್ಮ ಪರ ನಿಲ್ಲುವಂತೆ ಬೆದರಿಸಲಿದ್ದಾರೆ.‌ ತನಿಖೆಯ ದೃಷ್ಟಿಯಿಂದ ಡಿ.ಕೆ. ಶಿವಕುಮಾರ್ ಅವರನ್ನು ಹೊರಗಡೆ ಬಿಡುವುದು ಸಾಧುವಲ್ಲ. ನ್ಯಾಯಾಂಗ ಬಂಧನಕ್ಕೆ ಕಳುಹಿಸಿ ಎಂದು ಜಾರಿ ನಿರ್ದೇಶನಾಲಯದ ಪರ ವಕೀಲರು ತಮ್ಮ ಆಕ್ಷೇಪಣಾ ಅರ್ಜಿಯಲ್ಲಿ ತಿಳಿಸಿದ್ದಾರೆ. ಈಗಾಗಲೇ ಒಟ್ಟು 14 ದಿವಸ ಇಡಿ ವಿಚಾರಣೆ ಆಗಿದೆ. ಆದುದರಿಂದ ಜಾಮೀನು ನೀಡಿ ಎಂದು ಡಿ.ಕೆ. ‌ಶಿವಕುಮಾರ್ ಪರ ವಕೀಲರು ಮನವಿ ಮಾಡಿಕೊಳ್ಳಲಿದ್ದಾರೆ.

ಜಾರಿ‌ ನಿರ್ದೇಶನಾಲಯದ ವಶದಲ್ಲಿದ್ದ ಡಿ.ಕೆ. ಶಿವಕುಮಾರ್ ಅವರನ್ನು ರಕ್ತದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಮತ್ತು ಜ್ವರ ಕಾಣಿಸಿಕೊಂಡಿದ್ದರಿಂದ ಶನಿವಾರ ಮಧ್ಯಾಹ್ನ ದೆಹಲಿಯ ಡಾ. ರಾಮಮನೋಹರ ಆಸ್ಪತ್ರೆಗೆ ದಾಖಲು ಮಾಡಲಾಯಿತು.‌ ಆನಂತರ ಹೃದಯಸಂಬಂಧಿ ಸಮಸ್ಯೆಯೂ ಕಾಣಿಸಿಕೊಂಡಿದ್ದರಿಂದ ಅವರನ್ನು ಎಮರ್ಜೆನ್ಸಿ ವಿಭಾಗದಿಂದ ಕಾರ್ಡಿಯಕ್ ವಿಭಾಗಕ್ಕೆ ಶಿಫ್ಟ್ ಮಾಡಲಾಯಿತು. ಸೋಮವಾರವೂ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಡಿ.ಕೆ. ಶಿವಕುಮಾರ್ ಅವರಿಗೆ ವೈದ್ಯಕೀಯ ತಪಾಸಣೆ ಮಾಡಲಾಯಿತು.