ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಪ್ತರ ಮನೆಗಳ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ನೀಡಿದ ಮಾಹಿತಿಯಂತೆ ಇಂದು ಸಚಿವ ಸಿ.ಎಸ್. ಪುಟ್ಟರಾಜು ಅವರ ಮನೆ ಮೇಲೆ ದಾಳಿ ನಡೆದಿದ್ದು, ಇದು ಸಂಪೂರ್ಣ ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ವೇಳೆಯೂ ದಾಳಿ ನಡೆದಿತ್ತು:
ಸದಾಶಿವನಗರ ಗೃಹಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಪರಮೇಶ್ವರ, ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ದಾಳಿ ನಡೆಸಿದ್ದರು. ಈಗ ಲೋಕಸಭಾ ಚುನಾವಣೆ ವೇಳೆ ಕೂಡ ದಾಳಿ ಅಸ್ತ್ರ ಪ್ರಯೋಗಿಸುತ್ತಿದ್ದಾರೆ.
ಬಿಜೆಪಿ ನಾಯಕರ ಮನೆ ಮೇಲೆ ಏಕೆ ಐಟಿ ದಾಳಿ ನಡೆಯಲ್ಲ?
ಆದಾಯ ತೆರಿಗೆ ಇಲಾಖೆ ಅವರು ದಾಳಿ ಮಾಡುವ ಸ್ವಾತಂತ್ರ್ಯವಿದೆ. ಆದರೆ, ಬಿಜೆಪಿ ನಾಯಕರ ಮನೆ ಮೇಲೆ ಯಾಕೆ ದಾಳಿಯಾಗುವುದಿಲ್ಲ ಎಂದು ಪ್ರಶ್ನಿಸಿದರು.
ಎಷ್ಟೇ ದಾಳಿ ಅಸ್ತ್ರ ಬಿಟ್ಟರೂ, ನಾವು ಭಯ ಪಡುವುದಿಲ್ಲ:
ಕೇಂದ್ರ ಸರ್ಕಾರ ಐಟಿಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ಜನರ ಗಮನಕ್ಕೆ ತರಲಾಗುತ್ತದೆ. ಕೇಂದ್ರ ಸರ್ಕಾರ ಎಷ್ಟೇ ದಾಳಿ ಅಸ್ತ್ರ ಬಿಟ್ಟರು ಅದಕ್ಕೆ ನಾವು ಭಯ ಪಡುವುದಿಲ್ಲ. ಜನರು ನಮ್ಮ ಜೊತೆ ಇದ್ದಾರೆ. ದಾಳಿ ಇನ್ನಷ್ಟು ಹೆಚ್ಚಿದರೆ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿದರು.