ನೈಸ್ ರಸ್ತೆ ಯೋಜನೆ ಸಂಪೂರ್ಣ ವಶಕ್ಕೆ ಪಡೆಯಲು ಜೆಡಿಎಸ್-ಬಿಜೆಪಿ ಪಕ್ಷಗಳ ಆಗ್ರಹ..!

ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಜಂಟಿ ಮಾಧ್ಯಮಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಸರಾಜ್ ಬೊಮ್ಮಾಯಿ ಅವರು; ನೈಸ್ ಯೋಜನೆಯನ್ನು ಯಾವ ಮುಲಾಜು ಇಲ್ಲದೆ ಸರಕಾರದ ವಶಕ್ಕೆ ಪಡೆಯಬೇಕು ಹಾಗೂ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಆಗ್ರಹಪಡಿಸಿದರು.

Written by - Prashobh Devanahalli | Edited by - Krishna N K | Last Updated : Jul 21, 2023, 06:12 PM IST
  • ವಿಧಾನಸೌಧದಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಜಂಟಿ ಮಾಧ್ಯಮಗೋಷ್ಠಿ
  • ನೈಸ್ ಹೆಚ್ಚುವರಿ ಭೂಮಿ ವಾಪಸ್ ಪಡೆಯಬೇಕು ₹1325 ಕೋಟಿ ನೈಸ್ ಟೋಲ್ ಹಣ ವಸೂಲಿಗೆ ಆಗ್ರಹ
  • ಸಿಬಿಐ ತನಿಖೆಗೆ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಆಗ್ರಹ
ನೈಸ್ ರಸ್ತೆ ಯೋಜನೆ ಸಂಪೂರ್ಣ ವಶಕ್ಕೆ ಪಡೆಯಲು ಜೆಡಿಎಸ್-ಬಿಜೆಪಿ ಪಕ್ಷಗಳ ಆಗ್ರಹ..! title=

ಬೆಂಗಳೂರು : ಅಕ್ರಮಗಳ ಆಗರವಾಗಿರುವ ಹಾಗೂ ರಾಜ್ಯದ ಜನತೆಗೆ ವಂಚನೆ ಎಸಗಿರುವ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ - ನೈಸ್ ಯೋಜನೆಯನ್ನು ಸಂಪೂರ್ಣವಾಗಿ ಸರಕಾರದ ವಶಕ್ಕೆ ಪಡೆಯಬೇಕು ಎಂದು ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ರಾಜ್ಯ ಸರಕಾರವನ್ನು ಒಟ್ಟಾಗಿ ಒತ್ತಾಯ ಮಾಡಿವೆ.

ವಿಧಾನಸೌಧದಲ್ಲಿರುವ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಜಂಟಿ ಮಾಧ್ಯಮಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಸರಾಜ್ ಬೊಮ್ಮಾಯಿ ಅವರು; ನೈಸ್ ಯೋಜನೆಯನ್ನು ಯಾವ ಮುಲಾಜು ಇಲ್ಲದೆ ಸರಕಾರದ ವಶಕ್ಕೆ ಪಡೆಯಬೇಕು ಹಾಗೂ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಆಗ್ರಹಪಡಿಸಿದರು.

ಇದನ್ನೂ ಓದಿ: ವ್ಯಕ್ತಿಯ ಪ್ರಾಣ ಉಳಿಸಲು ಬಸ್ ಸಹಿತ ಆಸ್ಪತ್ರೆಗೆ ಬಂದ ಚಾಲಕ..!

ಕಿಕ್ಕಿರಿದ ಮಾಧ್ಯಮಗೋಷ್ಠಿಯಲ್ಲಿ ನೈಸ್ ಅಕ್ರಮಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟು ಉಭಯ ನಾಯಕರು; ಜಂಟಿ ಸದನ ಸಮಿತಿ ವರದಿಯ ಪ್ರಕಾರ ಹಾಗೂ ನ್ಯಾಯಾಲಯಗಳು ನೀಡಿರುವ ಆದೇಶದಂತೆ ಆ ಇಡೀ ಯೋಜನೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಒಂದು ವೇಳೆ ಯೋಜನೆಯನ್ನು ವಶಕ್ಕೆ ಪಡೆಯದಿದ್ದರೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಸದನದ ಒಳಗೆ - ಹೊರಗೆ ಜಂಟಿ ಹೋರಾಟ ನಡೆಸಲಿವೆ ಎಂದು ಇಬ್ಬರೂ ನಾಯಕರು ಸರಕಾರಕ್ಕೆ ಎಚ್ಚರಿಕೆ ನೀಡಿದರು. ನೈಸ್ ಅಕ್ರಮ ರಾಜ್ಯದಲ್ಲಿ ಹಾಡುಹಗಲೇ ನಡೆದಿರುವ ಲೂಟಿ. ಜನರ ಭೂಮಿ ಹಾಗೂ ಹಣವನ್ನು ಕೊಳ್ಳೆ ಹೊಡೆಯಲಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರೆ, ಈ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ. ನೈಸ್ ವಿರುದ್ಧದ ನಮ್ಮ ಹೋರಾಟ ಹಲವಾರು ಮಜಲುಗಳನ್ನು ಮುಟ್ಟಲಿದೆ ಎಂದರು.

ಹೆಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಭ್ರಷ್ಟಾಚಾರದ ಬಗ್ಗೆ ಉದ್ದುದ್ದ ಮಾತನಾಡುತ್ತಾರೆ. ಆದರೆ ನೈಸ್ ರಸ್ತೆಯ ಅಕ್ರಮ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಬಸವರಾಜ ಬೊಮ್ಮಾಯಿ ಅವರ ಸರಕಾರದ ಕಾಲದಲ್ಲಿ ಈ ಅಕ್ರಮಕ್ಕೆ ಸಂಬಂಧಿಸಿದಂತೆ ಅನೇಕ ಕ್ರಮಗಳು ಜರುಗಿವೆ. ನ್ಯಾಯಾಲಯಗಳಲ್ಲಿ ನೈಸ್ ವಿರುದ್ಧ, ಸರಕಾರದ ಪರವಾಗಿ ಅನೇಕ ಆದೇಶಗಳು ಬಂದಿವೆ. ಇದಕ್ಕೆ ಹಿಂದಿನ ಬಿಜೆಪಿ ಸರಕಾರದ ಶ್ರಮಿಸಿದೆ. ಅದಕ್ಕಾಗಿ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಅಭಿನಂದಿಸುತ್ತೇನೆ.

ಇದನ್ನೂ ಓದಿ: ಉತ್ತಮ ಮಳೆಯಾದ ಹಿನ್ನೆಲೆ ರಾಜ್ಯದಲ್ಲಿ ಕುಡಿಯುವ ನೀರಿಗೆ ಕೊರತೆ ಇಲ್ಲ..!

ನಾಡಿನ ಹಿತಾಸಕ್ತಿ ಕಾಪಾಡಲು ನಾವು ಬಿಜೆಪಿ ಜತೆ ಹೋರಾಟಕ್ಕೆ ಮುಂದಾಗಿದ್ದೇವೆ. ಜನರ ಭೂಮಿ ಕಬಳಿಸುವ ಈ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಹೋರಾಡುತ್ತೇವೆ. ಸರಕಾರ ಸದನ ಸಮಿತಿ ವರದಿ ಇಟ್ಟುಕೊಂಡು ಸುಮ್ಮನಿದ್ದರೆ ಯಾರಿಗೆ ಲಾಭ? ಈ ಯೋಜನೆಯನ್ನೂ ಸ್ಕ್ರಾಪ್ ಮಾಡಿದರೆ ₹30,000 ಕೋಟಿ ಹಣ ಸಿಗುತ್ತದೆ. ಭಾಗ್ಯಗಳಿಗೆ ಅದನ್ನು ಬಳಸಿ ಎಂದರು.

ಬಸವರಾಜ ಬೊಮ್ಮಾಯಿ‌ ಅವರು ಮಾತನಾಡಿ, ನೈಸ್ ಯೋಜನೆಯಲ್ಲಿ ಅಕ್ರಮದ ಬಗ್ಗೆ ನಮ್ಮ ಕಾಲದಲ್ಲಿ ಅನೇಕ ಕ್ರಮಗಳು ಆಗಿವೆ. ಆ ನಿಟ್ಟಿನಲ್ಲಿ ಜೆಡಿಎಸ್ - ಬಿಜೆಪಿ ಒಂದಾಗಿ ಹೋರಾಟ ಮಾಡಲು ನಿರ್ಧಾರ ಮಾಡಿವೆ. ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ, ಬದಲಿಗೆ ಅನೇಕ ತಿರುವುಗಳು ಇರುತ್ತವೆ. ಈ ರಸ್ತೆ ಕಾಮಗಾರಿಗೆ ಹೆಚ್ಚುವರಿ ಸಾಕಷ್ಟು ಭೂಮಿಯನ್ನೂ ಪಡೆದುಕೊಳ್ಳಲಾಗಿದೆ. ಈ ಹೆಚ್ಚುವರಿ ಭೂಮಿಯನ್ನು ಏನು ಮಾಡಬೇಕು ಎನ್ನುವ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಸರಕಾರಕ್ಕೆ ಇದೆ ಎಂಬ ಮಾತನ್ನು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಅಲ್ಲದೆ, ಮತ್ತೆ ಹೊಸದಾಗಿ ಜಾಮೀನು ಸ್ವಾಧೀನಕ್ಕೆ ಪಡೆಯುವ ಹುನ್ನಾರವನ್ನು ನೈಸ್ ಕಂಪನಿ ನಡೆಸಿದೆ.
 
ಮುಖ್ಯವಾಗಿ ನೈಸ್ ಯೋಜನೆಗೆ ನೀಡಲಾಗಿರುವ ಹೆಚ್ಚುವರಿ ಭೂಮಿಯನ್ನು ಕಾನೂನು ಪ್ರಕಾರವೇ ಹಿಂಪಡೆಯಲು ಸಂಪುಟ ಉಪ ಸಮಿತಿ ಕೂಡ ಸ್ಪಷ್ಟವಾಗಿ ಶಿಫಾರಸು ಮಾಡಿದೆ. ಈ ನಿಟ್ಟಿನಲ್ಲಿ ಈಗಿನ ರಾಜ್ಯ ಸರಕಾರ ನೈಸ್ ಯೋಜನೆಯಿಂದ ಹೆಚ್ಚುವರಿ ಭೂಮಿಯನ್ನು ಈ ಕೂಡಲೇ ವಾಪಸ್ ಪಡೆಯಲು ನಿರ್ಧಾರ ಕೈಗೊಳ್ಳಬೇಕು ಎಂದರು.

ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News