ಉಪ ಚುನಾವಣೆ ತಡೆಗೂ ಮೊದಲು ಮಂಡಿಸಿದ ಕಪಿಲ್ ಸಿಬಲ್ ವಾದ ಹೀಗಿತ್ತು...

ಕೆಲವು ಸತ್ಯಗಳನ್ನು ನ್ಯಾಯಾಲಯದ ಮುಂದೆ ಇಡಲಿದ್ದೇನೆ ಎಂದು ವಾದ ಶುರುಮಾಡಿದ ಕಪಿಲ್ ಸಿಬಲ್, ಅನರ್ಹರು ತರಾತುರಿಯಲ್ಲಿ ರಾಜೀನಾಮೆ ನೀಡಿದರು. ಅಷ್ಟೂ ಜನ ರಾಜೀನಾಮೆ ನೀಡಿದ್ದನ್ನು ವಿಡಿಯೋ ರೆಕಾರ್ಡ್ ಮಾಡಲಾಗಿದೆ.‌ 

Last Updated : Sep 27, 2019, 11:20 AM IST
ಉಪ ಚುನಾವಣೆ ತಡೆಗೂ ಮೊದಲು ಮಂಡಿಸಿದ ಕಪಿಲ್ ಸಿಬಲ್ ವಾದ ಹೀಗಿತ್ತು... title=

ನವದೆಹಲಿ: ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳ ಕೇಂದ್ರ ಚುನಾವಣಾ ಆಯೋಗ ನಿಗದಿ ಮಾಡಿದ್ದ ಉಪ ಚುನಾವಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡುವ ಮೊದಲು ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ದಿನವಿಡೀ ಮಂಡಿಸಿದ ವಾದ ಹೀಗಿದೆ.

ಕೆಲವು ಸತ್ಯಗಳನ್ನು ನ್ಯಾಯಾಲಯದ ಮುಂದೆ ಇಡಲಿದ್ದೇನೆ ಎಂದು ವಾದ ಶುರುಮಾಡಿದ ಕಪಿಲ್ ಸಿಬಲ್, ಅನರ್ಹರು ತರಾತುರಿಯಲ್ಲಿ ರಾಜೀನಾಮೆ ನೀಡಿದರು. ಅಷ್ಟೂ ಜನ ರಾಜೀನಾಮೆ ನೀಡಿದ್ದನ್ನು ವಿಡಿಯೋ ರೆಕಾರ್ಡ್ ಮಾಡಲಾಗಿದೆ.‌ ರಾಜೀನಾಮೆ ನೀಡಿದ ಬಳಿಕ ರಾಜ್ಯಪಾಲರನ್ನು ಮಾಡಿದರು. ರಾಜ್ಯಪಾಲರ ಬಳಿಕ ಮುಂಬೈಗೆ ಹೋದರು. ಅವರ ಜೊತೆ ಬಿಜೆಪಿಯ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಇದ್ದರು.‌ ಇವರೆಲ್ಲರೂ ವಿಶೇಷ ವಿಮಾನದ ಮೂಲಕ ಮುಂಬೈಗೆ ಹೋದರು. ಅಲ್ಲಿ ಐಶಾರಾಮಿ ಹೊಟೆಲ್ ನಲ್ಲಿ ಉಳಿದುಕೊಂಡಿದ್ದರು. ಮುಂಬೈನಲ್ಲಿದ್ದ ಶಾಸಕರ ನ್ನು ಬಿಜೆಪಿ ನಾಯಕರು ಭೇಟಿ ಮಾಡಿದ್ದರು. ರಾಜೀನಾಮೆ ನೀಡಿದ ಶಾಸಕರ ನಡೆ ನಿಗೂಢವಾಗಿತ್ತು. ಆದರೆ ಸಂವಿಧಾನದ 190/3 ಬಿ ವಿಧಿ ಪ್ರಕಾರ ರಾಜೀನಾಮೆ ಸ್ವಯಂ ಪ್ರೇರಿತವಾಗಿ ಮತ್ತು ನೈಜವಾಗಿರಬೇಕು. ಸ್ಪೀಕರ್ ಈ ಅಂಶವನ್ನು ಪರಿಶೀಲಿಸಿ ಅನರ್ಹಗೊಳಿಸಿದ್ದಾರೆ ಎಂದರು.

ಅನರ್ಹಗೊಳಿಸುವುದು ಸ್ಪೀಕರ್ ಅವರ ಸಂವಿಧಾನಿಕ ಹಕ್ಕು. ರಾಜೀನಾಮೆ ಸ್ವಯಂ ಪ್ರೇರಿತವೋ ಇಲ್ಲವೋ ಎಂಬುದನ್ನು ಪರಿಶೀಲಿಸುವುದು ಸ್ಪೀಕರ್ ಹಕ್ಕು. ರಾಜೀನಾಮೆ ನೈಜವೋ ಇಲ್ಲವೋ ಎಂಬುದನ್ನು ಪರಿಶೀಲಿಸುವುದು ಸ್ಪೀಕರ್ ಹಕ್ಕು. ಶಾಸಕರು ರಾಜೀನಾಮೆ ಕೊಟ್ಟಿದ್ದು ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ. ರಾಜೀನಾಮೆಗಳ ಹಿಂದೆ ಗಂಭೀರವಾದ ರಾಜಕೀಯ ಷಡ್ಯಂತ್ರ ಇತ್ತು. ಕೇಂದ್ರ ಚುನಾವಣಾ ಆಯೋಗ ಏಕೆ ಈ ಪ್ರಕರಣದಲ್ಲಿ ಬರುತ್ತಿದೆಯೋ ಗೊತ್ತಿಲ್ಲ. ಅದು ಚುನಾವಣಾ ದಿನಾಂಕ ಘೋಷಿಸಿದ ಮೇಲೆ ಚುನಾವಣೆ ಮಾಡಬೇಕಷ್ಟೇ. ಆದರೆ ಚುನಾವಣಾ ಆಯೋಗ ಅನರ್ಹರಿಗೆ ಅವಕಾಶ ಕೊಡಲು ಬಂದಿದೆ ಎಂದು ಚುನಾವಣಾ ಆಯೋಗದ ನಡೆ ಬಗ್ಗೆ ಕಪಿಲ್ ಸಿಬಲ್ ಆಕ್ಷೇಪ ವ್ಯಕ್ತಪಡಿಸಿದರು.

ಈ ಪ್ರಕರಣಗಳಲ್ಲಿ ಮಧ್ಯಂತರ ತಡೆ ನೀಡಲು ಸಾಧ್ಯವಿಲ್ಲ. ಹಿಂದಿನ ಪ್ರಕರಣಗಳಲ್ಲಿ ಇದು ಸಾಬೀತಾಗಿದೆ. ಎಲ್ಲಾ ಅನರ್ಹ ಶಾಸಕರು ಒಟ್ಟಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ. ಯಾರು ಕೂಡಾ ಕ್ಷೇತ್ರದ ಜನರ ಅಭಿಪ್ರಾಯ ಕೇಳಿಲ್ಲ. ಇವರ ರಾಜೀನಾಮೆ ನೈಜವಾಗಿತ್ತು ಎಂದು ಸ್ಪೀಕರ್ ಗೆ ಅನಿಸಿರಲಿಲ್ಲ. ಅನರ್ಹ ಶಾಸಕರು ಮುಂಬೈ ಹೋಟೆಲ್ ನಲ್ಲಿ ಉಳಿದುಕೊಂಡಾಗ ಹೆಚ್ಚಿನ ಭದ್ರತೆ ನೀಡಲಾಗಿತ್ತು. ಹಣಕಾಸಿನ ಆಸೆಗಳನ್ನು ಹುಟ್ಟಿಸಿ ರಾಜೀನಾಮೆ ಕೊಡಿಸಿರುವ ಸಾಧ್ಯತೆ ಇದೆ. ರಾಜೀನಾಮೆ ನೀಡಿದ ಶಾಸಕರಿಗೆ ಅಭಿಪ್ರಾಯ ತಿಳಿಸಲು ಇಂತಿಷ್ಟೇ ದಿನ ಕಾಲವಕಾಶ ನೀಡಬೇಕೆಂಬ ನಿಯಮವೇನಿಲ್ಲ. ಅದು 3, 4 ಅಥವಾ ಎಷ್ಟು ದಿನವಾದರೂ ಆಗಬಹುದು. ಆದರೂ ಸ್ಪೀಕರ್ 3 ದಿನ ಕಾಲವಕಾಶ ನೀಡಿದ್ದಾರೆ. ಸಾಮಾನ್ಯವಾಗಿ ರಾಜೀನಾಮೆಯನ್ನು ಕೊಟ್ಟವರು ರಾಜ್ಯಪಾಲರ ಬಳಿ ಹೋಗುವುದಿಲ್ಲ. ಆದರೆ ಇಲ್ಲಿ ರಾಜೀನಾಮೆ ಕೊಟ್ಟವರು ಮೊದಲು ರಾಜ್ಯಪಾಲರ ಬಳಿ ಹೋಗಿದ್ದರು‌. ಬಿಜೆಪಿಯ ಮಾಜಿ ಡಿಸಿಎಂ ಅಶೋಕ್, ಯಡಿಯೂರಪ್ಪ ಪಿಎ ಸಂತೋಷ್ ಜೊತೆ ಮುಂಬೈಗೆ ಹೋಗಿದ್ದರು. ನಾವು ಈಗಲೂ ಕಾಂಗ್ರೆಸ್ ಪಕ್ಷದವರೇ ಎಂದು ಹೇಳಿಕೊಳ್ಳುವ ಅನರ್ಹ ಶಾಸಕರು ಬಿಜೆಪಿ ನಾಯಕರ ಜೊತೆ ಹೋಗಿದ್ದೇಕೆ? ಅದೂ ಅವರು ತೆರಳಿದ್ದು ರಾಜೀವ್ ಚಂದ್ರಶೇಖರ್ ಒಡೆತನದ ಸ್ಪೆಷಲ್ ಫ್ಲೈಟ್ ಗಳಲ್ಲಿ. ಇದಾದ ಮೇಲೆ ಬಿಜೆಪಿ ನಾಯಕ ಎಸ್.ಎಂ. ಕೃಷ್ಣ ಅವರನ್ನು ಭೇಟಿಯಾಗಿದ್ದರು. ಇಷ್ಟೆಲ್ಲಾ ಆದ ಮೇಲೆ ಅದ್ಯಾವ ಸ್ಪೀಕರ್ ಪರಿಶೀಲನೆ ಮಾಡದೆ ತೀರ್ಮಾನ‌ ಮಾಡಲಾಗುತ್ತದೆ ಹೇಳಿ? ರಾಜೀನಾಮೆ ಪ್ರಕ್ರಿಯೆ ಪರಿಶೀಲಿಸುವುದು ಸ್ಪೀಕರ್ ಅವರ ಸಂವಿಧಾನದತ್ತ ಕರ್ತವ್ಯವಲ್ಲವೇ? ಎಂದು ಕಪಿಲ್ ಸಿಬಲ್ ನ್ಯಾಯಪೀಠವನ್ನೇ ಕೇಳಿದರು.

ಅನರ್ಹ ಶಾಸಕರು ರಾಜೀನಾಮೆ ನೀಡಿದ್ದೆ ಸರಿಯಾಗಿರಲಿಲ್ಲ. ಒಮ್ಮೆಯೂ ಸರಿಯಾದ ರೀತಿಯಲ್ಲಿ ಸ್ಪೀಕರ್ ಕಚೇರಿಗೆ ಮಾಹಿತಿ ನೀಡಿರಲಿಲ್ಲ. ರಾಜೀನಾಮೆ ಪತ್ರಗಳು ಕ್ರಮಬದ್ಧ ವಾಗಿರಲಿಲ್ಲ. ಅದರಿಂದಾಗಿ ಮರು ಸಲ್ಲಿಕೆಗೆ ಸೂಚನೆ ನೀಡಲಾಗಿತ್ತು. ಯಾವಾಗ ಸುಪ್ರೀಂ ಕೋರ್ಟ್ ಹೇಳಿತೋ ಆಗ ಬಂದು ಸರಿಯಾಗಿ ರಾಜೀನಾಮೆ ಕೊಟ್ಟರು. ಅದೂ ನೇರವಾಗಿ ಮುಂಬೈನಿಂದ ವಿಶೇಷ ವಿಮಾನದ ಮೂಲಕ ಬಂದು ರಾಜೀನಾಮೆ ನೀಡಿ ಮತ್ತೆ ವಿಶೇಷ ವಿಮಾನದಲ್ಲಿ ಮುಂಬೈಗೆ ಹಾರಿದರು. ಇದು ಸಹಜವಾಗಿಯೇ ಅನುಮಾನಕ್ಕೆ ಎಡೆಮಾಡಿಕೊಟ್ಟಿತು. ಬಳಿಕ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸುವ ಮೂಲಕ ಸ್ಪೀಕರ್ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದರು. ಸ್ಪೀಕರ್ ಆದೇಶವನ್ನು ಚುನಾವಣಾ ಆಯೋಗದ ಅಧಿಸೂಚನೆ ನಿರ್ಜೀವಗೊಳಿಸಿದರೆ 10ನೇ ಷೆಡ್ಯೂಲ್ ದುರ್ಬಲವಾಗಲಿದೆ. ಇದು ಬಹಳಷ್ಟು ಪ್ರಕರಣಗಳಿಗೆ ಉದಾಹರಣೆ ಆಗಲಿದೆ ಎಂದು ವಿವರಿಸಿದರು.

ಹೀಗೆ ಎಲ್ಲಾ ಅನರ್ಹ ಶಾಸಕರ ವಿಚಾರದ ಬಗ್ಗೆ ವಾದ ಮಾಡಿದ ಕಪಿಲ್ ಸಿಬಲ್ ಬಳಿಕ ಒಬ್ಬೊಬ್ಬರದೇ ಪ್ರಕರಣ ಉಲ್ಲೇಖಿಸಿದರು. ಈಗ ಹಾರ್ಟ್ ಅಟ್ಯಾಕ್ ಕೇಸ್ ಎಂದು ಶ್ರೀಮಂತ ಪಾಟೀಲ್ ವಿಷಯ ಕೈಗೆತ್ತಿಕೊಂಡರು. ಶ್ರೀಮಂತ ಪಾಟೀಲ್ ಬೆಂಗಳೂರು ರೆಸಾರ್ಟ್ ನಲ್ಲಿದ್ದರು. ಹಾರ್ಟ್ ಅಟ್ಯಾಕ್ ಆದಮೇಲೆ ಮುಂಬೈಗೆ ಶಿಫ್ಟ್ ಆದರು. ಆಮೇಲೆ ಹುಷಾರಾಗಿದ್ದು ಸಂಜೀವಿನಿಯಿಂದ. ಏಕೆಂದರೆ ಮುಂಬೈನಲ್ಲಿ ಯಾವ ವೈದ್ಯ ಚಿಕಿತ್ಸೆ ನೀಡಿದ ಗೊತ್ತಿಲ್ಲ, ಅವರ ಹೆಸರಿಲ್ಲ, ಸಹಿ ಇಲ್ಲ. ಸ್ಪೀಕರ್ ಇವರ ವಿಷಯದಲ್ಲಿ ಏನು ಮಾಡಬೇಕಿತ್ತು? ಜೆಡಿಎಸ್ ಅನರ್ಹ ಶಾಸಕರು ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಿರಲಿಲ್ಲ?ರಾಜ್ಯಪಾಲರ ಬಳಿ ಏಕೆ ಹೋಗಿದ್ದರು? ಮುಂಬೈಗೆ ಹೋಗಿದ್ದೇಕೆ? ಸ್ಪೀಕರ್ ಇವರ ವಿಷಯದಲ್ಲಿ ಏನು ನಿರ್ಧಾರ ಮಾಡಬೇಕಿತ್ತು? ಇವು 10ನೇ ಷೆಡ್ಯೂಲ್ ವ್ಯಾಪ್ತಿಗೆ ಬರುವುದಿಲ್ಲವೇ? ಅನರ್ಹಗೊಳಿಸಲು ಇದು ಅರ್ಹವಾದ ಪ್ರಕರಣವಲ್ಲವೇ? ಎಂದು ನ್ಯಾಯಮೂರ್ತಿಗಳನ್ನೇ ಪ್ರಶ್ನೆ ಮಾಡಿದರು.

ಗಂಭೀರವಾದ ಆರೋಪಗಳಿರುವ ಕಾರಣಕ್ಕಾಗಿಯೇ ಅನರ್ಹಗೊಳಿಸಲಾಗಿದೆ. ಅನರ್ಹರಿಗೆ ಚುನಾವಣೆಯಲ್ಲಿ ನಿಲ್ಲಲು ಅವಕಾಶ ಮಾಡಿಕೊಡಬಾರದು. ಇವರಿಗೆ ಅವಕಾಶ ಕೊಟ್ಟರೆ ಏನು ಬೇಕಾದರೂ ಮಾಡಿ ಜೈಸಿಕೊಳ್ಳಬಹುದು ಎಂಬ ಸಂದೇಶ ಹೋಗಲಿದೆ. ಇದು ಸಂಪೂರ್ಣ ಸಂವಿಧಾನ ಬಾಹಿರವಾದ ಕ್ರಮವಾಗಲಿದೆ ಎಂದು ಹೇಳಿ ಕಪಿಲ್ ಸಿಬಲ್ ವಾದ ಮುಕ್ತಾಯಗೊಳಿಸಿದರು.
 

Trending News