ಬೆಂಗಳೂರು: 14 ತಿಂಗಳ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನವಾಗಿದ್ದು, ಇದರಿಂದಾಗಿ ರಾಜ್ಯಕ್ಕೆ ಹಿಡಿದಿದ್ದ ಗ್ರಹಣ ಬಿಟ್ಟಂತಾಗಿದೆ ಎಂದು ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಸಂದನದಲ್ಲಿ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೆ ದೋಸ್ತಿ ಸರ್ಕಾರ ಸೋಲು ಅನುಭವಿಸಿದ ಬಳಿಕ ವಿಜಯೋತ್ಸವದ ಉತ್ಸಾಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆರ್.ಅಶೋಕ್, ಅಧಿಕಾರಕ್ಕೆ ಅಂಟಿಕೊಂಡಿದ್ದ 15 ದಿನಗಳಿಂದ ಬಹುಮತ ಇಲ್ಲದ ಮೈತ್ರಿ ಸರ್ಕಾರ ಇಂದು ಕುಸಿದಿದೆ. ಇದರಿಂದಾಗಿ ರಾಜ್ಯಕ್ಕೆ ಒಂದು ವರ್ಷದಿಂದ ಹಿಡಿದಿದ್ದ ಗ್ರಹಣ ಬಿಟ್ಟಂತಾಗಿದೆ ಎಂದು ಹೇಳಿದ್ದಾರೆ.
ಕೇಂದ್ರದ ಸಹಕಾರದಿಂದ ನಮ್ಮ ಸರ್ಕಾರ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲಿದೆ. ಈ ಮೈತ್ರಿ ಸರ್ಕಾರದಿಂದಾಗಿ ರಾಜ್ಯದ ಅಭಿವೃದ್ಧಿ ಕುಂಠಿತವಾಗಿತ್ತು. ಆದರೀಗ ಕೇಂದ್ರ ಸರ್ಕಾರದ ಸಹಾಯದಿಂದ, ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಮುಂದಿನ ದಿನಗಳಲ್ಲಿ ಉತ್ತಂ ಆಡಳಿತ ನೀಡುವ, ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವ ಕೆಲಸವನ್ನು ಬಿಜೆಪಿ ಮಾಡಲಿದೆ ಎಂದು ಆಶೋಕ್ ಹೇಳಿದರು.
ಇದೇ ವೇಳೆ ಅತೃಪ್ತ ಶಾಸಕರ ರಾಜೀನಾಮೆ ವಿಚಾರವಾಗಿ ಮಾತನಾಡಿದ ಅಶೋಕ್, ನಮಗೂ ಶಾಸಕರ ರಾಜೀನಾಮೆಗೂ ಸಂಬಂಧವಿಲ್ಲ. ನಾವು ಅವರನ್ನು ನೋಡಿಯೂ ಇಲ್ಲ, ಭೇಟಿಯೂ ಮಾಡಿಲ್ಲ. ಸರ್ಕಾರ ಬೀಳಲು ಮೈತ್ರಿ ನಾಯಕರೇ ಕಾರಣ, ಬಿಜೆಪಿ ಸರ್ಕಾರವನ್ನು ಬೀಳಿಸಲಿಲ್ಲ. ಅವರ ಕರ್ಮಕಾಂಡದಿಂದಲೇ ಅವರ ಸರ್ಕಾರ ಪತನವಾಗಿದೆ ಎಂದು ಹೇಳಿದರು.