ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಆತಂಕ ದೂರವಾಯ್ತು ಅಂತ ನೆಮ್ಮದಿಯ ನಿಟ್ಟುಸಿರುವ ಬಿಡುತ್ತಿದ್ದ ಜನರಿಗೂ ಇದೀಗ ಟೊಮ್ಯಾಟೊ ಜ್ವರ ಕಾಟ ಶುರುವಾಗಿದ್ದು, ಮತ್ತದೇ ಕೊರೊನಾ ಭೀತಿಯಂತೆ ಟೊಮ್ಯಾಟೊ ಫ್ಲೂ ಭೀತಿ ಕಾಡೋದಕ್ಕೆ ಶುರುಮಾಡಿದೆ.
ಇದನ್ನು ಓದಿ: ಸಕಲ ಇಷ್ಟಾರ್ಥ ಸಿದ್ಧಿಗಾಗಿ ಇಲ್ಲಿ ಭಕ್ತರು ಏನು ಮಾಡ್ತಾರೆ ನೋಡಿ!
ಕೇರಳದ ಸಾಕಷ್ಟು ಮಕ್ಕಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ ಎಂಬುದರ ಬಗ್ಗೆ ದಿನೇ ದಿನೇ ವರದಿಯಾಗುತ್ತಿದ್ದು, ಇದರಿಂದ ರಾಜ್ಯದ ಜನರಲ್ಲಿ ಆತಂಕ ಮನೆ ಮಾಡಿದೆ. ಈ ಹೊಸ ಸೋಂಕು ಮಕ್ಕಳಿಗೆ ಹೆಚ್ಚು ಕಾಣಿಸಿಕೊಳ್ಳುವ ಸೂಚನೆ ಇರೋದ್ರಿಂದ ಇನ್ನೆಲ್ಲಿ ನಮ್ಮ ಮಕ್ಕಳಿಗೆ ಹೊಸ ರೋಗಾಣು ಕಾಣಿಸಿಕೊಳ್ಳುತ್ತದೆಯೋ ಎನ್ನುವ ಭಯ ಮರುಕಳಿಸಿದೆ.
ಜೊತೆಗೆ ಬಿಬಿಎಂಪಿ ಸೇರಿ ಆರೋಗ್ಯ ಇಲಾಖೆಗೆ ಈ ಹೊಸ ಮಾದರಿಯ ರೋಗಾಣುವಿನಿಂದ ದೊಡ್ಡ ತಲೆನೋವಾಗಿದೆ. ಇದರಿಂದಾಗಿ ರಾಜ್ಯದಲ್ಲಿರುವ ಮಕ್ಕಳಿಗೆ ಸಮಸ್ಯೆಯಾಗದಂತೆ, ವೈರಾಣು ಹರಡದಂತೆ ಆರೋಗ್ಯಾಧಿಕಾರಿಗಳಿಗೆ ತುರ್ತು ಕೆಲಸಕ್ಕೆ ಮುಂದಾಗಿ ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಆರೋಗ್ಯ ಇಲಾಖೆಯಿಂದ ಬಿಬಿಎಂಪಿಗೆ ಎಚ್ಚರಿಕೆಯ ಕರೆಗಂಟೆ:
ಈಗಾಗಲೇ ರಾಜ್ಯಕ್ಕೂ ಕಾಲಿಡುತ್ತಾ ಟೊಮ್ಯಾಟೊ ಫ್ಲೂ ರೋಗ ಎಂಬ ಅನುಮಾನ ಎಲ್ಲೆಡೆ ಸುಳಿದಾಡುತ್ತಿದೆ. ಕೇರಳ ಗಡಿಪ್ರದೇಶವನ್ನ ಹಂಚಿಕೊಂಡಿರುವ ಉಡುಪಿ ಭಾಗದಲ್ಲಿ ನಾಲ್ಕು ವರ್ಷದ ಮಗುವಿನಲ್ಲಿ ಈ ರೋಗದ ಲಕ್ಷಣಗಳು ಕಾಣಿಸಿಕೊಂಡಿವೆ ಎಂಬ ಮಾಹಿತಿ ಇದೆ. ಇದೇ ಕಾರಣಕ್ಕಾಗಿ ಬೆಂಗಳೂರಿಗೂ ವ್ಯಾಪಿಸುವ ಆತಂಕ ಮನೆ ಮಾಡಿದ್ದು, ನಗರದಲ್ಲಿ ಟೊಮ್ಯಾಟೊ ಜ್ವರದ ಬಗ್ಗೆ ಕಟ್ಟೆಚ್ಚರ ವಹಿಸಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ.
ಕೊರೊನಾ ಮೊಬೈಲ್ ಟೆಸ್ಟಿಂಗ್ ಸೆಂಟರ್ ಮಾದರಿಯಲ್ಲೇ ಕ್ರಮ:
ರಾಜ್ಯದಲ್ಲಿ ಟೊಮ್ಯಾಟೊ ಜ್ವರದ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲದ ಹಿನ್ನೆಲೆಯಲ್ಲಿ ಬೆಂಗಳೂರಿನ ಎಲ್ಲಾ ಬಸ್ ಸ್ಟ್ಯಾಂಡ್ ಗಳು ಹಾಗು ರೈಲ್ವೇ ನಿಲ್ದಾಣಗಳಲ್ಲಿ ಮೊಬೈಲ್ ಟೆಸ್ಟಿಂಗ್ ಸೆಂಟರ್ ತೆರೆಯಲು ಪಾಲಿಕೆ ನಿರ್ಧಾರ ಮಾಡಿದೆ. ಟೊಮ್ಯಾಟೋ ಜ್ವರದ ಬಗ್ಗೆ ಸಾಕಷ್ಟು ಮಾಹಿತಿ ಇಲ್ಲದ ಕಾರಣ, ಈ ಪಟ್ಟಿಯಲ್ಲಿನ ಲಕ್ಷಣಗಳು ಕಂಡು ಬಂದರೆ ಕೂಡಲೇ ಅಂತಹ ಮಕ್ಕಳನ್ನ ತಪಾಸಣೆ ನಡೆಸಲು ಪಾಲಿಕೆ ಸಿದ್ಧವಾಗಿದೆ. ವಿಶೇಷವಾಗಿ ಕೇರಳದಿಂದ ಬರುವ ಪ್ರವಾಸಿಗರ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ.
ಟೊಮ್ಯಾಟೋ ಫೀವರ್ ಟೆಸ್ಟ್ ಬಗ್ಗೆ ಗೊಂದಲದಲ್ಲಿರುವ ಆರೋಗ್ಯ ಇಲಾಖೆ:
ಜ್ವರ ಹರುಡುವಿಕೆಯ ವೇಗ, ಚಿಕಿತ್ಸೆಯ ಬಗ್ಗೆ ಸ್ಪಷ್ಟವಾದ ಚಿತ್ರಣ ರಾಜ್ಯ ಆರೋಗ್ಯ ಇಲಾಖೆಗೆ ಸಿಗುತ್ತಿಲ್ಲ. ಹೀಗಾಗಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ಆರೋಗ್ಯ ಇಲಾಖೆಗೆ ಟೊಮ್ಯಾಟೋ ಜ್ವರದ ಬಗ್ಗೆ ಅಲರ್ಟ್ ಆಗಿರುವಂತೆ ಸೂಚಿಸಿದೆ. ಜೊತೆಗೆ ಕೊರೊನಾ ಆರಂಭಿಕ ಹಂತದ ರೀತಿ ತಾತ್ಸಾರ ಮಾಡದಂತೆ ಎಚ್ಚರಿಕೆ ನೀಡಿದೆ. ಹೆಚ್ಚು ಹರಡುವಿಕೆ ಕಂಡು ಬಂದರೆ ಕೋವಿಡ್ ಐಸೋಲೇಷನ್ ಮೆಷರ್ಸ್ ತೆಗೆದುಕೊಳ್ಳಲು ಸಲಹೆ ನೀಡಲಾಗಿದೆ.
ಇದನ್ನು ಓದಿ: ಪಠ್ಯದಲ್ಲಿ ಹೆಡ್ಗೆವಾರ್ ಭಾಷಣ: ಬಿಜೆಪಿ ಸರ್ಕಾರದ ರಾಷ್ಟ್ರಭಕ್ತಿಯ ಮುಖವಾಡ ಕಳಚಿದೆ
ಸದ್ಯಕ್ಕೆ ಕೇರಳದಿಂದ ಬರುವ ಬಸ್, ಟ್ರೈನ್ಗಳಲ್ಲಿ ತಪಾಸಣೆ:
ಕೇರಳಿಂದ ರಾಜ್ಯಕ್ಕೆ ಬರುವ ಬಸ್ಗಳು ಸೇರಿದಂತೆ ಇನ್ನಿತರ ವಾಹನಗಳನ್ನ ಆಯಾ ಬಸ್ ನಿಲ್ದಾಣಗಳಲ್ಲಿ ತಪಾಸಣೆ ಮಾಡಲಾಗ್ತಿದೆ. ಮಕ್ಕಳಲ್ಲಿ ಜ್ವರ, ಮೈಮೇಲೆ ಗುಳ್ಳೆ ಇರುವ ಲಕ್ಷಣಗಳೆನಾದ್ರು ಕಂಡುಬಂದ್ರೆ ಅಂಥಾ ಮಕ್ಕಳಿಗೆ ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಕೆಲಸಕ್ಕೆ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಮುಂದಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ