ಬೆಂಗಳೂರು: ಕೊಡಗು ಪ್ರವಾಹ ಸಂತ್ರಸ್ಥರಿಗೆ 120 ಎಕರೆ ಪ್ರದೇಶದಲ್ಲಿ ಮನೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಮಂಗಳವಾರ ನಡೆದ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಅತಿವೃಷ್ಟಿ, ಅನಾವೃಷ್ಟಿಯಿಂದ ಎದುರಾದ ಸಮಸ್ಯೆಗಳ ಬಗ್ಗೆ ಇಂದು ನಡೆದ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಕೊಡಗು ಪುನರ್ವಸತಿಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಹೀಗಾಗಿ 120 ಎಕರೆ ಪ್ರದೇಶದಲ್ಲಿ ಮನೆಗಳ ನಿರ್ಮಾಣಕ್ಕೆ ತೀರ್ಮಾನ ಮಾಡಲಾಗಿದೆ ಎಂದರು.
ರೈತರ ಸಾಲ ಮನ್ನಾ ಯೋಜನೆ ವಿಳಂಬವಾಗಿದ್ದು ಏಕೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳ ರೈತರ ಸಾಲಮನ್ನಾ ಸಂಬಂಧ ಡೇಟಾ ಬೇಸ್ ಸಂಗ್ರಹಿಸಲಾಗಿದೆ. ಸಹಕಾರಿ ಸಂಘದಲ್ಲಿ 22 ಲಕ್ಷ ರೈತರು ಮಾಹಿತಿ ಒದಗಿಸಿದ್ದಾರೆ. ಇದರ ಪ್ರಕಾರ ಹಣ ಬಿಡುಗಡೆಗೆ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಮಾಜಿ ಸಿಎಂ ಸಿದ್ದರಾಮಯ್ಯ 8165 ಕೋಟಿ ರೂ. ಸಾಲಮನ್ನಾ ಮಾಡಿದ್ದರು. ಅದನ್ನು ಸಂಪೂರ್ಣವಾಗಿ ಮರುಪಾವತಿಸಿದ್ದೇವೆ. 800 ಕೋಟಿ ರೂ. ಹೊಸ ಸಾಲಕ್ಕೆ ಬಿಡುಗಡೆ ಮಾಡಲಾಗಿದೆ. ಹಣಕಾಸು ಇಲಾಖೆಯಿಂದ ಹಣ ಬಿಡುಗಡೆಯಾಗಿದ್ದು, ಈ ತಿಂಗಳಲ್ಲಿ 600 ಕೋಟಿ ರೂ. ಸಹಕಾರಿ ಸಂಘದ ಸಾಲ ಭರಿಸುತ್ತೇವೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.