ಶಾಸಕರಾದವರಿಗೆ ಯಾರಿಗೆ ರಾಜೀನಾಮೆ ಕೊಡಬೇಕೆಂಬ ಕನಿಷ್ಠ ತಿಳುವಳಿಕೆ ಇರಬೇಕು: ಸ್ಪೀಕರ್ ರಮೇಶ್ ಕುಮಾರ್

ವಿಧಾನಸಭೆಯ ಸದಸ್ಯರಾಗಿರುವ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಕಾನೂನು ರೀತಿ ನಿಯಮಾವಳಿಗಳನ್ನು ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.   

Last Updated : Jul 3, 2019, 02:34 PM IST
ಶಾಸಕರಾದವರಿಗೆ ಯಾರಿಗೆ ರಾಜೀನಾಮೆ ಕೊಡಬೇಕೆಂಬ ಕನಿಷ್ಠ ತಿಳುವಳಿಕೆ ಇರಬೇಕು: ಸ್ಪೀಕರ್ ರಮೇಶ್ ಕುಮಾರ್ title=
File Image

ಬೆಂಗಳೂರು: ವಿಧಾನಸಭೆಯ ಶಾಸಕರಾದವರಿಗೆ ಯಾರಿಗೆ ರಾಜೀನಾಮೆ ನೀಡಬೇಕು ಎಂಬ ಕನಿಷ್ಠ ತಿಳುವಳಿಕೆ ಇರಬೇಕು ಎಂದು ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್ ಶಾಸಕರ ರಾಜೀನಾಮೆ ಪರ್ವ ಹಾಗೂ ರಾಜೀನಾಮೆ ನೀಡಿ ರಾಜ್ಯಪಾಲರನ್ನು ಭೇಟಿಯಾಗಿ ಎಲ್ಲರ ಗಮನ ಸೆಳೆದ ವಿಜಯಪುರ ಶಾಸಕ ಆನಂದ್ ಸಿಂಗ್ ಅವರಿಗೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮೇಶ್ ಕುಮಾರ್, ಬಿಡುವಿದ್ದರೆ ದೆಹಲಿಗೂ ಹೋಗಿ ರಾಷ್ಟ್ರಪತಿಗೂ ಕೊಡಲಿ ಎಂದಿದ್ದಾರೆ.

ವಿಧಾನಸಭೆಯ ಸದಸ್ಯರಾಗಿರುವ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಕಾನೂನು ರೀತಿ ನಿಯಮಾವಳಿಗಳನ್ನು ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಅದರ ಬಗ್ಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಯಾರು ಬೇಕಾದರೂ ಆಕ್ಷೇಪ ವ್ಯಕ್ತಪಡಿಸಬಹುದು. ಶಾಸಕರನ್ನು ಆಯ್ಕೆ ಮಾಡಿದ ಸಾರ್ವಜನಿಕರ ಆಕ್ಷೇಪಣೆಗಳಿದ್ದರೆ ಅದನ್ನೂ ಸಹ ಕೇಳುತ್ತೇವೆ‌. ಸಭಾಧ್ಯಕ್ಷರಿಗೆ ಪರಮಾಧಿಕಾರ ಇಲ್ಲ. ಸಂವಿಧಾನ, ಕಾನೂನು ನಿಯಮಾವಳಿ ಪ್ರಕಾರ ಜವಾಬ್ದಾರಿಯನ್ನು ಅವರು ನಿರ್ವಹಿಸಬೇಕು ಅಷ್ಟೆ. ಶಾಸಕರ ರಾಜೀನಾಮೆ ಒಪ್ಪುವ ಅಥವಾ ಒಪ್ಪದಿರುವ ತೀರ್ಮಾನ ಮಾತ್ರ ಸಭಾದ್ಯಕ್ಷರ ಕೈಯಲ್ಲಿ ಇರುತ್ತದೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಅರಭಾವಿ ಶಾಸಕ ರಮೇಶ್ ಜಾರಕಿಹೊಳಿ ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ಕಚೇರಿಗೆ ಫ್ಯಾಕ್ಸ್ ಮಾಡಿರುವುದಾಗಿ ನೀಡಿರುವ ಹೇಳಿಕೆಗೆ ತೀವ್ರ ಕಿಡಿಕಾರಿದ ಸ್ಪೀಕರ್ ರಮೇಶ್ ಕುಮಾರ್, 'ಸಂವಿಧಾನದಲ್ಲಿ ಪರಮೋಚ್ಛ ಸ್ಥಾನ ಹೊಂದಿರುವ ಸ್ಪೀಕರ್ ಕಚೇರಿಯನ್ನು ರಾಜಕೀಯ ಉದ್ದೇಶಕ್ಕಾಗಿ ಹಗುರವಾಗಿ ಪರಿಗಣಿಸಬಾರದು. ಸ್ಪೀಕರ್ ಕಚೇರಿ ಪೋಸ್ಟ್ ಮ್ಯಾನ್ ಕಚೇರಿಯಲ್ಲ" ಎಂದು ಹೇಳಿದ್ದಾರೆ.  

ಇಬ್ಬರು ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ ಎಂದು ಯಾರು ಹೇಳಿದ್ದಾರೆ. ಒಂದು ವೇಳೆ ಇಬ್ಬರು ಶಾಸಕರು ರಾಜೀನಾಮೆ ಕೊಟ್ಟಿದ್ದರೆ ಒಂದು ಇಟ್ಟುಕೊಂಡು ಮತ್ತೊಂದು ಬಚ್ಚಿಟ್ಟುಕೊಳ್ಳಲು ಆಗುತ್ತಾ ಎಂದು ಪ್ರಶ್ನಿಸಿದ ಸ್ಪೀಕರ್, ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ಸಲ್ಲಿಸಿರುವ ರಾಜೀನಾಮೆ ತಮಗೆ ತಲುಪಿಲ್ಲ. ಹೀಗಿರುವಾಗ ಅವರು ರಾಜೀನಾಮೆಯನ್ನು ಫ್ಯಾಕ್ಸ್ ಮಾಡಿರುವುದಾಗಿ ಮಾಧ್ಯಮಗಳ ಮುಂದೆ ಹೇಗೆ ಹೇಳಲು ಸಾಧ್ಯ. ತಾವು ವಿಧಾನಸಭೆಯ ಸಭಾಧ್ಯಕ್ಷರೇ ಹೊರತು, ಯಾರದೋ ಸೇವಕನಲ್ಲ. ಇಷ್ಟಕ್ಕೂ ತಾವು ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಕೆಂಡಾಮಂಡಲರಾದರು.

ಯಾರ ದೊಡ್ಡಸ್ಥಿಕೆಯೂ ನಮ್ಮ ಮುಂದೆ ನಡೆಯುವುದಿಲ್ಲ ಎಂದ ಸಭಾಧ್ಯಕ್ಷರು, ಸಂವಿಧಾನದ ಆಶಯಗಳಿಗೆ ಗೌರವ ನೀಡುತ್ತೇನೆ. ಜನಪ್ರತಿನಿಧಿಗಳಾದವರು ಗೌರವದಿಂದ ನಡೆದುಕೊಳ್ಳಬೇಕು. ಸ್ಪೀಕರ್ ಹುದ್ದೆಯ ಬಗ್ಗೆ ತಮಗೆ ಇಷ್ಟ ಬಂದಂತೆ ಹೇಳಿಕೆ ನೀಡುವುದಾಗಲೀ, ಲಘುವಾಗಿ ಪರಿಗಣಿಸುವುದಾಗಲೀ ಮಾಡಿದರೆ ಅದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆಯ ಸಂದೇಶ ನೀಡಿದರು.
 

Trending News