ಮಹದಾಯಿ ವಿವಾದ : ಇಂದು ಉತ್ತರ ಕರ್ನಾಟಕ ಬಂದ್, ರೊಚ್ಚಿಗೆದ್ದ ರೈತರು, ಬಸ್ ಸಂಚಾರ ಅಸ್ಥವ್ಯಸ್ಥ

ಮಹದಾಯಿ ನೀರು ಹಂಚಿಕೆ ವಿವಾದ ಸಂಬಂಧ ರೈತರು ಕರೆ ನೀಡಿರುವ ಉತ್ತರ ಕರ್ನಾಟಕ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಬಸ್ ಸಂಚಾರ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.

Last Updated : Dec 27, 2017, 10:42 AM IST
  • ಉತ್ತರ ಕರ್ನಾಟಕ ಭಾಗದಲ್ಲಿ ಬಸ್ ಸಂಚಾರ ಸಂಪೂರ್ಣ ಅಸ್ತವ್ಯಸ್ಥ.
  • ಮಹದಾಯಿ ವಿವಾದದಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ಕಳಸಾ – ಬಂಡೂರಿ ಹೋರಾಟಗಾರರ ಒತ್ತಾಯ.
  • ಬೆಳಗಾವಿ, ನವಲಗುಂದ, ಹುಬ್ಬಳ್ಳಿ, ನರಗುಂದ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಒಟ್ಟು ಏಳು ಜಿಲ್ಲೆಗಳಲ್ಲಿ ಬಂದ್ ಆಚರಣೆ.
  • ಗದಗ ಜಿಲ್ಲೆಗಳ 6 ತಾಲೂಕುಗಳಲ್ಲಿ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ.
  • ಅಹಿತಕರ ಘಟನೆ ನಡೆಯದಂತೆ ಶಾಂತಿ ಸುವ್ಯವಸ್ಥೆ ಕಾಪಾಡಲು ಪೋಲಿಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಮಹದಾಯಿ ವಿವಾದ : ಇಂದು ಉತ್ತರ ಕರ್ನಾಟಕ ಬಂದ್, ರೊಚ್ಚಿಗೆದ್ದ ರೈತರು, ಬಸ್ ಸಂಚಾರ   ಅಸ್ಥವ್ಯಸ್ಥ title=
ಸಾಂದರ್ಭಿಕ ಚಿತ್ರ

ಬೆಳಗಾವಿ/ಗದಗ/ಧಾರವಾಡ/ಹುಬ್ಬಳ್ಳಿ: ಉತ್ತರ ಕರ್ನಾಟಕದ ಭಾಗದ ದಶಕಗಳ ಮಹದಾಯಿ ನೀರು ಹಂಚಿಕೆ ವಿವಾದ ಸಂಬಂಧ ರೈತರು ಕರೆ ನೀಡಿರುವ ಉತ್ತರ ಕರ್ನಾಟಕ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಬಸ್ ಸಂಚಾರ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.

ಮಹದಾಯಿ ವಿವಾದದಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ಕಳಸಾ – ಬಂಡೂರಿ ಹೋರಾಟಗಾರರು ನಡೆಸುತ್ತಿರುವ ಉತ್ತರ ಕರ್ನಾಟಕ ಬಂದ್ ಬೆಳಗ್ಗೆಯಿಂದಲೇ ತೀವ್ರ ಸ್ವರೂಪ ಪಡೆದುಕೊಂಡಿದ್ದು, ನೂರಾರು ಪ್ರತಿಭಟನಾಕಾರರು ಬೆಳಗ್ಗೆಯಿಂದಲೇ ರಸ್ತೆಗಿಳಿದು ಕೇಂದ್ರ, ಗೋವಾ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಪ್ರಮುಖವಾಗಿ ಬೆಳಗಾವಿ, ನವಲಗುಂದ, ಹುಬ್ಬಳ್ಳಿ, ನರಗುಂದ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಒಟ್ಟು ಏಳು ಜಿಲ್ಲೆಗಳಲ್ಲಿ ಬಂದ್ ಆಚರಣೆ ಮಾಡಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ಹೋರಾಟಗಾರರು ಯಡಿಯೂರಪ್ಪ ಅಣುಕು ಶವಯಾತ್ರೆ ನಡೆಸಿದರೆ, ಗದಗ ಹಾಗೂ ಧಾರವಾಡ ಜಿಲ್ಲೆಯ ಹಲವಾರು ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಲ್ಲೂ ಟೈರಿಗೆ ಬೆಂಕಿ ಹಚ್ಚಿ ವಾಹನ ಸಂಚಾರಗಳು ಆರಂಭಗೊಳ್ಳದಂತೆ ರೈತರು ತಡೆಯೊಡ್ಡಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಧಾರವಾಡ, ಗದಗ ಜಿಲ್ಲೆಗಳ 6 ತಾಲೂಕುಗಳಲ್ಲಿ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದ್ದು, ಇಂದು ನಡೆಯಬೇಕಿದ್ದ ಕರ್ನಾಟಕ ಕಾನೂನು ವಿವಿ ಪರೀಕ್ಷೆಗಳನ್ನೂ ಮುಂದೂಡಲಾಗಿದೆ. ಹೀಗಾಗಿ ಬೆಳಗ್ಗೆಯಿಂದಲೇ ವಾಹನ ಸಂಚಾರ ವಿರಳವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿ ಸುವ್ಯವಸ್ಥೆ ಕಾಪಾಡಲು ಪೋಲಿಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಕೂಡ ಬೆಳಗ್ಗೆ 6 ಗಂಟೆಯಿಂದಲೇ ಕನ್ನಡ ಪರ ಮತ್ತು ರೈತ ಸಂಘಟನೆಯ ಮುಖಂಡರು ಪ್ರತಿಭಟನೆ ಆರಂಭಿಸಿದ್ದರಿಂದ ಹುಬ್ಬಳ್ಳಿ ಹಾಗೂ ಧಾರವಾಡ ನಡುವೆ ಬಸ್ ಸಂಚಾರ ಸ್ಥಗಿತಗೊಂಡಿದೆ. ಅಲ್ಲದೇ ಅಂಗಡಿ ಮುಂಗಟ್ಟುಗಳು ಕೂಡ ಈ ವರೆಗೆ ಆರಂಭಗೊಂಡಿಲ್ಲ.

ಈ ಮಧ್ಯೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಪ್ರವಾಸದಲ್ಲಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿನ ಪ್ರತಿಯೊಂದು ಬೆಳವಣಿಗೆಯ ಮಾಹಿತಿಯನ್ನೂ ದೂರವಾಣಿ ಮೂಲಕ ಪಡೆಯುತ್ತಿದ್ದಾರೆ. ಅಲ್ಲದೆ, ಜನರು ಶಾಂತಿಯುತವಾಗಿ ಬಂದ್ ಆಚರಿಸುವಂತೆ ಕೋರಿದ್ದಾರೆ.

ಡಿಸೆಂಬರ್ ೧೮ರ ವೇಳೆಗೆ ಮಹಾದಾಯಿ ನೀರಿನ ಸಮಸ್ಯೆಯನ್ನು ಬಗೆಹರಿಸುವುದಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿದ ಬೆನ್ನಲ್ಲೇ ದೆಹಲಿಯಲ್ಲಿ ಇತ್ತೀಚೆಗೆ ಮಾತುಕತೆ ನಡೆದಿತ್ತು. ಆದರೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ಮಹಾದಾಯಿ ನದಿ ನೀರಿನ ವಿಚಾರವಾಗಿ ಯಾವುದೇ ಸ್ಪಷ್ಟ ಭರವಸೆ ದೊರೆಯಲಿಲ್ಲ.

ಅಲ್ಲದೆ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಪರಿವರ್ತನಾ ಮೆರವಣಿಗೆ ವೇಳೆ ಹುಬ್ಬಳ್ಳಿಯಲ್ಲಿ ಮಹಾದಾಯಿ ನೀರಿನ ವಿವಾದ ಇತ್ಯರ್ಥವನ್ನು ಘೋಷಿಸುವ ನಂಬಿಕೆ ಇತ್ತು. ಆದರೆ ಏಕಾಏಕಿ ಬಿಜೆಪಿ ಪ್ರಯತ್ನ ಫಲಿಸದ ಕಾರಣದಿಂದಾಗಿ ರೈತರು ರೊಚ್ಚಿಗೆದ್ದಿದ್ದಾರೆ.

Trending News