ಬೆಂಕಿಯಲ್ಲಿ ಅರಳಿದ ಹೂ ಖರ್ಗೆ...!

Written by - Manjunath N | Last Updated : Oct 19, 2022, 09:22 PM IST
  • 2009 ರಲ್ಲಿ ಲೋಕಸಭಾ ಚುನಾವಣಾ ಕಣಕ್ಕೆ ಧುಮುಕುವ ಮೊದಲು ಗುರ್ಮಿಟ್ಕಲ್ ವಿಧಾನಸಭಾ ಕ್ಷೇತ್ರದಿಂದ ಒಂಬತ್ತು ಬಾರಿ ಗೆದ್ದಿದ್ದರು.
  • ಗುಲ್ಬರ್ಗಾ ಸಂಸದೀಯ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿದ್ದರು.
  • ಖರ್ಗೆಯವರು ಕನ್ನಡ, ಮರಾಠಿ, ಇಂಗ್ಲಿಶ್, ಉರ್ದು, ಹಿಂದಿ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲವರು.
 ಬೆಂಕಿಯಲ್ಲಿ ಅರಳಿದ ಹೂ ಖರ್ಗೆ...!  title=

ಮಾಪಣ್ಣ ಮಲ್ಲಿಕಾರ್ಜುನ ಖರ್ಗೆ ಅವರು ಈಗ 24 ವರ್ಷಗಳ ನಂತರ ಕಾಂಗ್ರೆಸ್‌ ಪಕ್ಷದ ಮೊದಲ ಗಾಂಧಿಯೇತರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಅವರು 7000 ಕ್ಕೂ ಅಧಿಕ ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ ಶಶಿ ತರೂರ್ ಅವರನ್ನು ಸೋಲಿಸಿದ್ದಾರೆ.

ಆ ಮೂಲಕ 137 ವರ್ಷಗಳ ಇತಿಹಾಸವನ್ನು ಹೊಂದಿರುವ ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಪದವಿಗಾಗಿ ನಡೆದ ಆರನೇ ಚುನಾವಣೆಯಲ್ಲಿಈಗ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಎಸ್.ನಿಜಲಿಂಗಪ್ಪನವರ ನಂತರ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಏರಿದ ಎರಡನೇ ಕನ್ನಡಿಗ ಹಾಗೂ ಜಗಜೀವನ್ ರಾಮ್ ನಂತರ ಈ ಹುದ್ದೆಯನ್ನು ಅಲಂಕರಿಸಿದ ಎರಡನೇ ದಲಿತ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಜುಲೈ 21, 1942 ರಂದು ಬೀದರ್ ಜಿಲ್ಲೆಯ ವರವಟ್ಟಿಯಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಖರ್ಗೆ ಅವರು ಏಳು ವರ್ಷದ ಬಾಲಕನಾಗಿದ್ದಾಗ ರಜಾಕರು ಹಾಗೂ ಹೈದರಾಬಾದ್ ನಿಜಾಮನ ಸೇನೆಯ ದಾಳಿ ಸಂದರ್ಭದಲ್ಲಿಅವರ ತಾಯಿ ಹಾಗೂ ಸಹೋದರಿ ಇಬ್ಬರನ್ನು ಕಳೆದುಕೊಂಡರು.ಇತ್ತೀಚಿಗೆ ಈ ಘಟನೆ ಕುರಿತು ಅವರ ಪುತ್ರ ಪ್ರಿಯಾಂಕ್ ಖರ್ಗೆ ಮಾಧ್ಯಮದೊಂದಿಗಿನ ಸಂದರ್ಶನದಲ್ಲಿ 1948 ರ ದಾಳಿ ವೇಳೆ ತಮ್ಮ ತಂದೆ ಹಾಗೂ ಅಜ್ಜ ಬೆಂಕಿಯಿಂದ ಹೇಗೆ ಪಾರಾದರು ಎನ್ನುವುದನ್ನು ವಿವರಿಸಿದ್ದರು.

ಇದನ್ನೂ ಓದಿ: ಎಐಸಿಸಿ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಖರ್ಗೆ ಆಯ್ಕೆ

ಖರ್ಗೆ ಅವರು ತಮ್ಮ ಶಾಲಾ ಶಿಕ್ಷಣ ಮತ್ತು ಬಿಎ ಜೊತೆಗೆ ಕಾನೂನು ಪದವಿ ಕಲಬುರಗಿಯಲ್ಲಿ ಮುಗಿಸಿದರು.ರಾಜಕೀಯಕ್ಕೆ ಧುಮುಕುವ ಮೊದಲು ಅವರು ಸ್ವಲ್ಪ ಕಾಲ ವಕೀಲರಾಗಿ ಕೆಲಸ ಮಾಡಿದ್ದರು.ಆರಂಭದಲ್ಲಿ ಕಾರ್ಮಿಕ ನಾಯಕರಾಗಿ ಸಕ್ರೀಯರಾಗಿದ್ದ ಖರ್ಗೆ ಅವರು ತದನಂತರ 1969 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಮುಂದೆ ಗುಲ್ಬರ್ಗ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ನೇಮಕವಾದರು. ಇದಾದ ನಂತರ ಅವರು ಮತ್ತೆ ಹಿಂತಿರುಗಿ ನೋಡಲೇ ಇಲ್ಲ, ಸತತ ಒಂಬತ್ತು ಬಾರಿ ಅವರು ಶಾಸಕರಾಗಿ ಆಯ್ಕೆಯಾದರು.

2014 ರ ಲೋಕಸಭೆ ಚುನಾವಣೆಯವರೆಗೂ ಖರ್ಗೆಯವರು ಅಜೇಯರಾಗಿದ್ದರು, ಇದರಲ್ಲಿಅವರು ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಬೀಸಿದ ನರೇಂದ್ರ ಮೋದಿ ಅಲೆಯನ್ನು ಬಗ್ಗುಬಡಿದು ಗುಲ್ಬರ್ಗದಿಂದ 74,000 ಮತಗಳ ಅಂತರದಿಂದ ಗೆದ್ದಿದ್ದರು.ಅವರು 2009 ರಲ್ಲಿ ಲೋಕಸಭಾ ಚುನಾವಣಾ ಕಣಕ್ಕೆ ಧುಮುಕುವ ಮೊದಲು ಗುರ್ಮಿಟ್ಕಲ್ ವಿಧಾನಸಭಾ ಕ್ಷೇತ್ರದಿಂದ ಒಂಬತ್ತು ಬಾರಿ ಗೆದ್ದಿದ್ದರು ಮತ್ತು ಗುಲ್ಬರ್ಗಾ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿದ್ದರು.

ಆದರೆ, 2019ರ ಲೋಕಸಭೆ ಚುನಾವಣೆಯಲ್ಲಿ ಗುಲ್ಬರ್ಗದಲ್ಲಿ ಬಿಜೆಪಿಯ ಉಮೇಶ್ ಜಾಧವ್ ಅವರು ಖರ್ಗೆ ಅವರನ್ನು 95,452 ಮತಗಳ ಅಂತರದಿಂದ ಸೋಲಿಸಿದ್ದರು. ಸೋಲಿಲ್ಲದ ಸರದಾರ ಎಂದು ಜನಪ್ರಿಯರಾದ ಖರ್ಗೆಯವರಿಗೆ ಇದು ಐವತ್ತು ವರ್ಷಗಳ ಸುದೀರ್ಘ ರಾಜಕೀಯದಲ್ಲಿ ಎದುರಾದ ಮೊದಲ ಚುನಾವಣಾ ಸೋಲಾಗಿತ್ತು.

ಅಪ್ಪಟ ಕಾಂಗ್ರೆಸಿಗ ಮತ್ತು ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ ಖರ್ಗೆ ಅವರು ರಾಜ್ಯ ಹಾಗೂ ಕೇಂದ್ರ ಸಚಿವರಾಗಿ ಮಹತ್ವದ ಖಾತೆಗಳನ್ನು ನಿರ್ವಹಿಸಿದ್ದಾರೆ.ಅವರು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.ಖರ್ಗೆ ಅವರಿಗೆ 2014 ರಿಂದ 2019 ರವರೆಗೆ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗುವ ಅವಕಾಶವಿತ್ತಾದರೂ ಕೂಡ ಕಾಂಗ್ರೆಸ್ ಪಕ್ಷದ ಲೋಕಸಭಾ ಸದಸ್ಯರ ಸಂಖ್ಯೆ ಶೇ.10ಕ್ಕಿಂತ ಕಡಿಮೆ ಇದ್ದಿದ್ದರಿಂದಾಗಿ ಅದು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: "ಚುನಾವಣೆಯನ್ನು ಎದುರಿಟ್ಟುಕೊಂಡು ಸಂಪುಟ ವಿಸ್ತರಿಸಲಾಗಿದೆ ಹೊರತು, ಜನರ ಕಲ್ಯಾಣಕ್ಕಲ್ಲ"

ಅವರು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಕಾರ್ಮಿಕ ಮತ್ತು ಉದ್ಯೋಗ, ರೈಲ್ವೆ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣಕ್ಕಾಗಿ ಕೇಂದ್ರ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಇದ್ದಂತ ಸಂದರ್ಭದಲ್ಲಿ ಹಲವು ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ.ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಗೃಹಮಂತ್ರಿಯಾಗುವ ಮೂಲಕ ಡಾ.ರಾಜಕುಮಾರ್ ಅಪಹರಣ, ಹಾಗೂ ಕಾವೇರಿ ನದಿ ವಿವಾದವು ಉತ್ತುಂಗದಲ್ಲಿದ್ದಂತಹ ಸಂದರ್ಭಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು.

ಖರ್ಗೆ ಅವರು ಜೂನ್ 2020 ರಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗುವುದರ ಮೂಲಕ ಇತ್ತೀಚಿನವರೆಗೂ ಮೇಲ್ಮನೆಯಲ್ಲಿ 17ನೇ ವಿರೋಧ ಪಕ್ಷದ ನಾಯಕರಾಗಿದ್ದರು.ಹಲವಾರು ಬಾರಿ ಸಿಎಂ ಹುದ್ದೆಗೆ ಅವರು ಪ್ರಮುಖ ಸ್ಪರ್ಧಿಯಾಗಿದ್ದರೂ ಕೂಡ ಅವರಿಗೆ ಎಂದಿಗೂ ಆ ಹುದ್ದೆಯನ್ನು ಅಲಂಕರಿಸಲು ಸಾಧ್ಯವಾಗಿರಲಿಲ್ಲ.ಪ್ರತಿ ಸಾರಿ ದಲಿತ ಸಿಎಂ ಆಗುವ ವಿಚಾರವನ್ನು ಮಾಧ್ಯಮಗಳು ಎತ್ತಿದಾಗಲೆಲ್ಲಾ ಅವರು "ನೀವು ಪದೇ ಪದೇ ದಲಿತ ಸಿಎಂ ಎಂದು ಯಾಕೆ ಹೇಳ್ತೀರಿ? ಹಾಗೆ ಹೇಳಬೇಡಿ, ನಾನು ಕಾಂಗ್ರೆಸ್ಸಿಗ' ಎಂದು ಅವರು ಹೇಳುತ್ತಿದ್ದರು.

ಶಾಂತ ಸ್ವಭಾವ ಹಾಗೂ ಸಮಚಿತ್ತರಾಗಿರುವ ಖರ್ಗೆ ಯಾವುದೇ ಅಂತಹ ವಿವಾದದಲ್ಲಿಯೂ ಸಿಲುಕಿದವರಲ್ಲ, ಮೋದಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಸದನದಲ್ಲಿ ಅವರು ತಮ್ಮ ಕಟು ಟೀಕೆ ಟಿಪ್ಪಣಿಗಳ ಮೂಲಕ ಗಮನ ಸೆಳೆದಿದ್ದರು. ಕನ್ನಡ, ಮರಾಠಿ, ಇಂಗ್ಲಿಶ್, ಉರ್ದು, ಹಿಂದಿ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲ ಖರ್ಗೆಯವರು ರಾಷ್ಟ್ರ ರಾಜಕಾರಣದಲ್ಲಿ ಈಗ 137 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಕಾಂಗ್ರೆಸ್ ಪಕ್ಷದ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಅಪಾರ ರಾಜಕೀಯ ಅನುಭವ ಹಾಗೂ ಜ್ಞಾನವನ್ನು ಹೊಂದಿರುವ ಅವರು ಖಂಡಿತಾ ಈ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಬಲ್ಲರು ಎನ್ನುವುದು ಎಲ್ಲರ ಅಂಬೋಣವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

Trending News