ಬೆಂಗಳೂರು: ಹಲವು ವರ್ಷಗಳ ಬೇಡಿಕೆಯಂತೆ ಹಲವು ಸರ್ಕಾರಿ ಕಛೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕವಾಗಿ ಒಪ್ಪಿಗೆ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಕಾನೂನು, ಸಂಸದೀಯ ವ್ಯವಹಾರ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಚಿವ ಸಂಪುಟ ಸಭೆಯ ನಂತರ ಮಾಹಿತಿ ನೀಡಿದ ಅವರು ಉತ್ತರ ಕರ್ನಾಟಕ ಯಾವ ಜಿಲ್ಲೆಗಳಲ್ಲಿ ಯಾವ ಇಲಾಖೆಗಳನ್ನು ಸ್ಥಳಾಂತರಿಸಬೇಕು ಎಂಬುದರ ಬಗ್ಗೆ ಅಂತಿಮವಾಗಿ ತೀರ್ಮಾನಗಳ ಕೈಗೊಳ್ಳಲು ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಲಾಗುವುದು.
ಮೊದಲ ಹಂತದಲ್ಲಿ ಶಿಫ್ಟ್ ಆಗಲಿರುವ ಕಚೇರಿಗಳು :
- ಕೆಬಿಜೆಎನ್‍ಎಲ್ (ಕೃಷ್ಣ ಭಾಗ್ಯ ಜಲ ನಿಗಮ)
- ಕರ್ನಾಟಕ ನೀರಾವರಿ ನಿಗಮ
- ಕರ್ನಾಟಕ ಕಬ್ಬು ಅಭಿವೃದ್ಧಿ ನಿರ್ದೇಶನಾಲಯ
- ಕರ್ನಾಟಕ ವಿದ್ಯುತ್ ಮಗ್ಗ ನಿರ್ದೇಶನಾಲಯ
- ಕೆಯುಎಸ್‍ಡಬ್ಲ್ಯೂಡಿಬಿ (ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ) ಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸಲು ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ.
ಇಬ್ಬರು ಮಾಹಿತಿ ಆಯುಕ್ತರಲ್ಲಿ ಒಬ್ಬ ಮಾಹಿತಿ ಆಯುಕ್ತರನ್ನು ಹಾಗೂ ಮಾನವಹಕ್ಕುಗಳ ಒಬ್ಬ ಸದಸ್ಯರನ್ನು ಉತ್ತರ ಕರ್ನಾಟಕ ಜಿಲ್ಲೆಗೆ ಸ್ಥಳಾಂತರಿಸಲು ನಿರ್ಣಯ ಕೈಗೊಳ್ಳಲಾಗಿದೆ.
ಈ ವಿಷಯ ಸಂಪುಟ ಸಭೆಯ ಪಟ್ಟಿಯಲ್ಲಿ ಇಲ್ಲದಿದ್ದರು, ಮುಖ್ಯ ಕಾರ್ಯದರ್ಶಿಗಳು ಮಂಡಿಸಿದ ನಿರ್ಣಯದ ಮೇಲೆ ನಿರ್ಧಾರ ಕೈಗೊಳ್ಳಲಾಯಿತು ಎಂದು ಸಚಿವ ಕೃಷ್ಣಬೈರೇ ಗೌಡ ತಿಳಿಸಿದರು.