ಅಪ್ರಾಪ್ತ ಬಾಲಕಿ ಸಾಮೂಹಿಕ ಅತ್ಯಾಚಾರ ಪ್ರಕರಣ : ಇಂದು ವಿಜಯಪುರ ಬಂದ್

ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಜಯಪುರ ಬಂದ್ ಗೆ ಕರೆ ನೀಡಲಾಗಿದ್ದು, ಬಾಲಕಿಯ ಶವ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ. 

Last Updated : Dec 21, 2017, 11:44 AM IST
ಅಪ್ರಾಪ್ತ ಬಾಲಕಿ ಸಾಮೂಹಿಕ ಅತ್ಯಾಚಾರ ಪ್ರಕರಣ : ಇಂದು ವಿಜಯಪುರ ಬಂದ್ title=

ವಿಜಯಪುರ: ಶಾಲೆಗೆ ತೆರಳುತ್ತಿದ್ದ ಒಂಭತ್ತನೇ ತರಗತಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಜಯಪುರ ಬಂದ್ ಗೆ ಕರೆ ನೀಡಲಾಗಿದೆ.

ಈ ಪ್ರಕರಣವನ್ನು ಸಂಬಂಧ ಬಾಲಕಿಯ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 8.5 ಲಕ್ಷ ರೂ. ಪರಿಹಾರವನ್ನು ನೀಡಿದ್ದು, ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೆ ಬಾಲಕಿಯ ಮರಣೋತ್ತರ ಪರೀಕ್ಷೆ ಬಳಿಕ ಹೆಚ್ಚಿನ ಮಾಹಿತಿ ದೊರೆಯಲಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಆದರೂ ಸಮಾಧಾನಗೊಳ್ಳದ ಬಾಲಕಿಯ ಪೋಷಕರು ಮತ್ತು ವಿವಿಧ ದಲಿತ ಪರ ಸಂಘಟನೆಗಳು 'ಕೇವಲ ಪರಿಹಾರಧನ ಬೇಡ, ನ್ಯಾಯ ಒದಗಿಸಿ' ಎಂದು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದು, ಇಂದಿಗೂ ಶವ ಮುಂದಿಟ್ಟು ಪ್ರತಿಭಟನೆ ಮುಂದುವರಿಸಿದ್ದಾರೆ. 

ವಿಜಯಪುರದ ಮಂಜುನಾಥ ನಗರದ ಮಲ್ಲಿಕಾರ್ಜುನ್ ಸ್ಕೂಲ್ ಬಳಿ ಅಪ್ರಾಪ್ತ ಬಾಲಕಿ ತೆರಳುತ್ತಿದ್ದಾಗ ಮೂವರು ಕಾಮುಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕುತ್ತಿಗೆ ಹಿಸುಕಿ ಕೊಲೆಗೈದಿದ್ದರು. ಹತ್ಯೆಗೀಡಾದ ಬಾಲಕಿ ದಾನೇಶ್ವರಿ ದಲಿತ ಸಮುದಾಯಕ್ಕೆ ಸೇರಿದವಳೆನ್ನಲಾಗಿದೆ. 

ಕೈಲಾಶ್, ಸಾಗರ್ ಮೋರೆ, ದೀಪಕ್ ಇನ್ನೂ ಇಬ್ಬರು ಈ ಪ್ರಕರಣದ ಆರೋಪಿಗಳಾಗಿದ್ದು, ಕೈಲಾಸ್ ಮತ್ತು ಸಾಗರ್ ನನ್ನು ಆದರ್ಶನಗರ ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಆರಂಭಿಸಿದ್ದಾರೆ. 

ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಕೊಲೆಯ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಫೇಸ್ ಬುಕ್, ಟ್ವಿಟ್ಟರ್ ಗಳಲ್ಲಿ ಅನೇಕ ಯುವಕರು, ಸಂಘಟನೆಗಳ ಕಾರ್ಯಕರ್ತರು ಈ ಘಟನೆಯನ್ನು ಖಂಡಿಸಿದ್ದಾರೆ.

Trending News