ಸಿದ್ದು-ಗುದ್ದು: ಕಟೀಲ್‍ಗೆ ಇಡಿ, ಐಟಿ ಯಾರ ಅಧೀನದಲ್ಲಿ ಬರುತ್ತದೆ ಎಂಬ ಕನಿಷ್ಠ ಜ್ಞಾನವಾದರೂ ಬೇಡವೇ?

ಹುಳಿ ಹಿಂಡುವುದು ಬೆಂಕಿ ಹಚ್ಚುವುದು ಬಿಜೆಪಿಯವರ ಕೆಲಸ ಎಂದು ಹರಿಹಾಯ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.

Yashaswini V Yashaswini V | Updated: Sep 9, 2019 , 03:52 PM IST
ಸಿದ್ದು-ಗುದ್ದು: ಕಟೀಲ್‍ಗೆ ಇಡಿ, ಐಟಿ ಯಾರ ಅಧೀನದಲ್ಲಿ ಬರುತ್ತದೆ ಎಂಬ ಕನಿಷ್ಠ ಜ್ಞಾನವಾದರೂ ಬೇಡವೇ?

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಿಂದಲೇ ಡಿ.ಕೆ. ಶಿವಕುಮಾರ್ ಜೈಲು ಸೇರಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಗೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಒಬ್ಬ ಸಂಸದರಿಗೆ, ಅದರಲ್ಲೂ ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಿಗೆ ಇ.ಡಿ, ಐ.ಟಿ ಇಲಾಖೆ ಯಾರ ಅಧೀನದಲ್ಲಿ ಬರುತ್ತದೆ ಎಂಬ ಕನಿಷ್ಠ ಜ್ಞಾನವಾದರೂ ಬೇಡವೇ? ಎಂದು ವ್ಯಂಗ್ಯವಾಡಿದ್ದಾರೆ.

ನಗರದ ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷರು ದುರುದ್ದೇಶದಿಂದ ಈ ಹೇಳಿಕೆ ನೀಡಿದ್ದಾರೆ. ಐಟಿ, ಇಡಿ ಇಲಾಖೆಗಳು ಯಾರ ಅಧೀನದಲ್ಲಿದೆ ಎಂಬ ಕನಿಷ್ಠ ಜ್ಯಾನವೂ ಅವರಿಗಿಲ್ಲ. 

ಈ ಸಂಸ್ಥೆಗಳು ಕೇಂದ್ರ ಸರ್ಕಾರದ ಅಧೀನದಲ್ಲಿರುತ್ತವೆ. ಹುಳಿ ಹಿಂಡುವುದು ಬೆಂಕಿ ಹಚ್ಚುವುದು ಬಿಜೆಪಿಯವರ ಕೆಲಸ. ಇದುವರೆಗೂ ಬಿಜೆಪಿ ಬೇರೆ ಬೇರೆ ಕೋಮುಗಳ ನಡುವೆ ಬೆಂಕಿಹಚ್ಚಿ ತನ್ನ ಸ್ವಾರ್ಥ ಸಾಧಿಸಿಕೊಳ್ಳುತ್ತಿತ್ತು, ಈಗ ತನ್ನ ಎದುರಾಳಿ ನಾಯಕರ ನಡುವೆ ಹುಳಿ ಹಿಂಡುವ ಹೀನ ಕಾರ್ಯಕ್ಕೆ ಇಳಿದಿದೆ ಎಂದು ವಾಗ್ಧಾಳಿ ನಡೆಸಿದರು.

ರಾಜ್ಯದ ಬಿಜೆಪಿ ನಾಟಕ‌ ಮಂಡಳಿಗೆ ಕಾಮಿಡಿ ಪಾತ್ರದ ಅಗತ್ಯ ಇತ್ತು, ಅದಕ್ಕಾಗಿ  ನಳಿನ್ ಕುಮಾರ್ ಕಟೀಲ್ ಅವರನ್ನು ಪಕ್ಷಕ್ಕೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರನ್ನು ಅವರ ಪಕ್ಷದವರೂ ಸೇರಿದಂತೆ ಯಾರೂ ಸೀರಿಯಸ್ಸಾಗಿ ತಗೊಳ್ತಿಲ್ಲ, ಅದಕ್ಕಾಗಿ ಬಾಯಿಗೆ ಬಂದ ಹಾಗೆ ಮಾತಾಡ್ತಿದ್ದಾರೆ ಎಂದು ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.