ಗೋಡ್ಸೆ ಬೆಂಬಲಿಗನಾದ ಯೋಗಿ ಆದಿತ್ಯನಾಥ ಹತ್ತಿರ ಹಿಂದುತ್ವದ ಪಾಠ ಕಲಿಯುವ ಅಗತ್ಯವಿಲ್ಲ - ಸಿದ್ದರಾಮಯ್ಯ

   

Updated: Jan 8, 2018 , 09:06 PM IST
 ಗೋಡ್ಸೆ ಬೆಂಬಲಿಗನಾದ ಯೋಗಿ ಆದಿತ್ಯನಾಥ ಹತ್ತಿರ ಹಿಂದುತ್ವದ ಪಾಠ ಕಲಿಯುವ ಅಗತ್ಯವಿಲ್ಲ - ಸಿದ್ದರಾಮಯ್ಯ

ಬೆಂಗಳೂರು: "ನಮ್ಮದು ವಿವೇಕಾನಂದ ಪರಂಪರೆಯ ಹಿಂದುತ್ವ,ಗೋಡ್ಸೆ ಪರಂಪರೆಯ  ಹಿಂದುತ್ವ ಅಲ್ಲ. ಗೋಹತ್ಯೆ ನಿಷೇಧದ ಬಗ್ಗೆ ನಮಗೆ ಪಾಠ ಮಾಡುವ ಮೊದಲು ಆ ಬಗ್ಗೆ ಸ್ವಾಮೀ ವಿವೇಕಾನಂದರು ಏನು ಹೇಳಿದ್ದರೆಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಓದಿಕೊಳ್ಳಲಿ" ಎಂದು ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ. 

ಇತ್ತೀಚಿಗೆ ಬೆಂಗಳೂರಿನಲ್ಲಿ ಬಿಜೆಪಿ ರ್ಯಾಲಿಯಲ್ಲಿ ಭಾಗವಹಿಸಿದ ಯೋಗಿ ಆದಿತ್ಯನಾಥ ಮಾತನಾಡುತ್ತಾ  ಸಿದ್ದರಾಮಯ್ಯ ಹಿಂದೂ ಎಂದು ಹೇಳಿಕೊಳ್ಳುತ್ತಲೇ ಗೋವು ಮಾಂಸಕ್ಕೆ ಅನುವುಮಾಡಿಕೊಡುತ್ತಿದ್ದಾರೆ ಎಂದು  ಟೀಕಿಸಿದ್ದರು.

ಇದಾದ ನಂತರ ಸಿದ್ದರಾಮಯ್ಯನವರು ಇದಕ್ಕೆ ತಮ್ಮ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸುತ್ತಾ " ನಮ್ಮ ರಾಜ್ಯಕ್ಕೆ ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥರವರನ್ನು ಸ್ವಾಗತಿಸುತ್ತೇನೆ,ಸರ್ ನಮ್ಮಿಂದ ನೀವು ಕಲಿಯುವುದು ಸಾಕಷ್ಟಿದೆ,ನೀವು ಒಮ್ಮೆ ಇಲ್ಲಿರುವ ಇಂದಿರಾ ಕ್ಯಾಂಟೀನ್ ಮತ್ತು ಪಡಿತರ ಅಂಗಡಿಗಳಿಗೆ ಭೇಟಿ ನೀಡಿ,ಇದು ನಿಜಕ್ಕೂ ನಿಮ್ಮ ರಾಜ್ಯದಲ್ಲಿ ಹಸಿವಿಂದ ಬಳಲಿ ಸತ್ತಿರುವಂತಹ ಘಟನೆಗಳಿಗೆ ಪರಿಹಾರವನ್ನು ನೀಡಬಲ್ಲದು ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಯಿಸಿರುವ ಯೋಗಿ ಆದಿತ್ಯನಾಥ "ನಿಮ್ಮ ಸ್ವಾಗತಕ್ಕೆ ಧನ್ಯವಾಧಗಳು ಸಿದ್ದರಾಮಯ್ಯ ಜಿ  ನಿಮ್ಮ ಆಡಳಿತದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆಗಳನ್ನು ಆಗಿರುವ ಬಗ್ಗೆ ನಾನು  ಕೇಳಿದ್ದೇನೆ,ಅಲ್ಲದೆ ಹಲವಾರು ಪ್ರಾಮಾಣಿಕ ಅಧಿಕಾರಿಗಳ ವರ್ಗಾವಣೆ ಮತ್ತು ಸಾವಿನ ಪ್ರಕರಣಗಳ ಬಗ್ಗೆ ವರದಿಯಾಗಿರುವ ಬಗ್ಗೆ ಕೇಳಲ್ಪಟ್ಟಿದ್ದೇನೆ,ಈ ಹಿಂದೆ ನಿಮ್ಮ ಮೈತ್ರಿ ಪಕ್ಷಗಳು ನಮ್ಮ ರಾಜ್ಯದಲ್ಲಿ ಮಾಡಿದ ಎಲ್ಲ ಕಾನೂನು ಅವ್ಯವಸ್ತೆಯನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಸರಿಪಡಿಸಲು ಶ್ರಮಿಸುತ್ತಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ. 

2018 ರಲ್ಲಿ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವುದರಿಂದ ಈಗಲೇ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಜಿದ್ದಾಜಿದ್ದಿನ ಹೇಳಿಕೆಗಳು ಸಾಕಷ್ಟು ಸದ್ದು ಮಾಡುತ್ತಿವೆ.