ಸಂಸದ ಪ್ರತಾಪ್ ಸಿಂಹ ಸುಳ್ಳು ಹೇಳುವ ಯಕಶ್ಚಿತ್ ರಾಜಕಾರಣಿ: ಸಿದ್ದರಾಮಯ್ಯ

ಲೋಕೋಪಯೋಗಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ನೀರಾವರಿ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸೇರಿ 22,000 ಕೋಟಿ ಬಿಲ್ ಹಣ ಬಿಡುಗಡೆಗೆ ಬಾಕಿ ಇದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

Written by - Puttaraj K Alur | Last Updated : Aug 27, 2022, 07:43 AM IST
  • ಸಂಸದ ಪ್ರತಾಪ್ ಸಿಂಹ ಸುಳ್ಳು ಹೇಳುವ ಯಕಶ್ಚಿತ್ ರಾಜಕಾರಣಿ ಎಂದು ಸಿದ್ದರಾಮಯ್ಯ ಆಕ್ರೋಶ
  • ಧೈರ್ಯವಿದ್ದರೆ ನಮ್ಮ ಪಕ್ಷದ ಅನೇಕರು ಹಾಕಿರುವ ಸವಾಲನ್ನು ಸ್ವೀಕರಿಸಿ ಚರ್ಚೆಗೆ ಬರಲಿ
  • ಸಿಎಂ ಬೊಮ್ಮಾಯಿ ಸರ್ಕಾರದಲ್ಲಿರುವವರೆಲ್ಲರೂ ಸತ್ಯಹರಿಶ್ಚಂದ್ರರಾಗಿದ್ದರೆ ತನಿಖೆಗೆ ಯಾಕೆ ಹೆದರಿಕೊಳ್ಳುತ್ತಿದ್ದಾರೆ?
ಸಂಸದ ಪ್ರತಾಪ್ ಸಿಂಹ ಸುಳ್ಳು ಹೇಳುವ ಯಕಶ್ಚಿತ್ ರಾಜಕಾರಣಿ: ಸಿದ್ದರಾಮಯ್ಯ  title=
ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ಸಂಸದ ಪ್ರತಾಪ್ ಸಿಂಹ ಸುಳ್ಳು ಹೇಳುವ ಯಕಶ್ಚಿತ್ ರಾಜಕಾರಣಿ. ಅವರಿಗೆ ಧೈರ್ಯವಿದ್ದರೆ ನಮ್ಮ ಪಕ್ಷದ ವಕ್ತಾರ ಲಕ್ಷ್ಮಣ್ ಸೇರಿದಂತೆ ಅನೇಕರು ಹಾಕಿರುವ ಸವಾಲನ್ನು ಸ್ವೀಕರಿಸಿ ಚರ್ಚೆಗೆ ಬರಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಮುಖ್ಯಮಂತ್ರಿಯಾಗಿ ನಾನು ಮೈಸೂರಿಗೆ ಏನು ಮಾಡಿದ್ದೇನೆ? ಪ್ರತಾಪ್ ಸಿಂಹ ಏನು ಮಾಡಿದ್ದಾರೆ? ಎಂದು ಚರ್ಚೆಯಾಗಲಿ’ ಅಂತಾ ಹೇಳಿದ್ದಾರೆ.

‘ಸಿಎಂ ಬೊಮ್ಮಾಯಿ ಸರ್ಕಾರದಲ್ಲಿರುವವರೆಲ್ಲರೂ ಸತ್ಯಹರಿಶ್ಚಂದ್ರರಾಗಿದ್ದರೆ ತನಿಖೆಗೆ ಯಾಕೆ ಹೆದರಿಕೊಳ್ಳುತ್ತಿದ್ದಾರೆ? ಗುತ್ತಿಗೆದಾರರ ಸಂಘದ ಆರೋಪಗಳ ಬಗ್ಗೆ ಹೈಕೋರ್ಟ್ ನ ಹಾಲಿ ನ್ಯಾಯಾಧೀಶರ ಉಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆಗೆ ಆದೇಶ ನೀಡಲಿ. ಆರೋಪಗಳು ಕೇಳಿಬಂದಾಗ ತನಿಖೆ ನಡೆಸಿ ಸತ್ಯಾಸತ್ಯತೆ ಜನತೆಯ ಮುಂದಿಡುವುದು ಸರ್ಕಾರದ ಕರ್ತವ್ಯ. ಕಮಿಷನ್ ಹಾವಳಿಗೆ ಬೇಸತ್ತ ಗುತ್ತಿಗೆದಾರರು ಕಳೆದ ವರ್ಷವೇ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ಇದರ ನಂತರ ಸಮಸ್ಯೆ ಬಗೆಹರಿದಿಲ್ಲ, ಕಿರುಕುಳ ಹೆಚ್ಚಾಗಿದೆಯಂತೆ. ತನಿಖೆಗೆ ಆದೇಶಿಸಿದರೆ ಎಲ್ಲ ಪುರಾವೆಗಳನ್ನು ಕೊಡಲು ಸಿದ್ಧನಿದ್ದೇನೆಂದು ಸಂಘದ ಅಧ್ಯಕ್ಷರೇ ಹೇಳಿರುವಾಗ ಬಿಜೆಪಿ ಸರ್ಕಾರ ಯಾಕೆ ಒಪ್ಪುತ್ತಿಲ್ಲ?’ ಅಂತಾ ಪ್ರಶ್ನಿಸಿದ್ದಾರೆ.

‘ನಿಮ್ಮ ಕಾಲದಲ್ಲಿ ಹಗರಣಗಳು ನಡೆದಿಲ್ಲವೇ ಎಂದು ಸಿಎಂ ಬೊಮ್ಮಾಯಿ ಕೇಳಿದ್ದಾರೆ. ಸಿಎಂ ಆಗಿ ನಾನು 5 ಪ್ರಕರಣಗಳನ್ನು ಧೈರ್ಯದಿಂದ ಸಿಬಿಐ ತನಿಖೆಗೆ ಒಪ್ಪಿಸಿದ್ದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಹೆದರದೆ ನಿರ್ಧಾರ ಕೈಗೊಂಡಿದ್ದೆ. ನೀವು ಯಾಕೆ ತನಿಖೆಗೆ ಹೆದರುತ್ತೀರಿ? ಎಸಿಬಿ ದಾಳಿಯಲ್ಲಿ ಸಿಕ್ಕಿಬಿದ್ದು ಜೈಲುಪಾಲಾಗಿದ್ದ ಅಧಿಕಾರಿಯನ್ನು ಮತ್ತೆ ಅದೇ ಸ್ಥಳಕ್ಕೆ ನೇಮಕ ಮಾಡಲು ಶಾಸಕ ಬೋಪಯ್ಯ ಅವರು 2.5 ಕೋಟಿ ಲಂಚ ಪಡೆದಿದ್ದಾರೆಂದು ಕೊಡಗು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ರವಿ ಚೆಂಗಪ್ಪ ಆರೋಪಿಸಿದ್ದಾರೆ. ಇದಕ್ಕಿಂತ ಬೇರೆ ಸಾಕ್ಷಿ ಏನು ಬೇಕು? ಅಂತಾ ಕುಟುಕಿದ್ದಾರೆ.

ಇದನ್ನೂ ಓದಿ: ಗೃಹಸಚಿವ ಆರಗ ಜ್ಞಾನೇಂದ್ರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲು

‘ಲೋಕೋಪಯೋಗಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ನೀರಾವರಿ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸೇರಿ 22,000 ಕೋಟಿ ಬಿಲ್ ಹಣ ಬಿಡುಗಡೆಗೆ ಬಾಕಿ ಇದೆ. 40% ಸರ್ಕಾರಕ್ಕೆ, 20% ಗುತ್ತಿಗೆದಾರನಿಗೆ, 15% GSTಗೆ, ಉಳಿದ 25%ನಲ್ಲಿ ಕಾಮಗಾರಿ ನಡೆಯುತ್ತಿದೆ. ಹೀಗಿದ್ದಾಗ ಗುಣಮಟ್ಟದ ಕಾಮಗಾರಿ ಹೇಗೆ ಸಾಧ್ಯ? ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರ ಸಚಿವ ಕೆ.ಎಸ್.ಈಶ್ವರಪ್ಪರ ಲಂಚದ ಕಿರುಕುಳಕ್ಕೆ ನೊಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ. ಇದರಿಂದ ಈಶ್ವರಪ್ಪ ರಾಜೀನಾಮೆ ನೀಡಬೇಕಾಯಿತು. ಲಂಚ ಕೊಡುವುದಿಲ್ಲ ಎನ್ನುವವರು ಸಂತೋಷ್ ಪಾಟೀಲ್ ನಂತೆ ಸಾಯಬೇಕಾಗುತ್ತದೆ’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

‘ಸರ್ಕಾರವೇ ಭ್ರಷ್ಟವಾಗಿದ್ದರೆ ಭ್ರಷ್ಟರ ಮೇಲೆ ಕ್ರಮ ಕೈಗೊಳ್ಳುವವರು ಯಾರು? ಈಶ್ವರಪ್ಪರ ಮೇಲಿನ ಆರೋಪದಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ, ಅದನ್ನು ಮೃತನ ಸಹೋದರ ಚಾಲೆಂಜ್ ಮಾಡಿದ್ದಾರೆ. ಈ ರೀತಿ ಪ್ರಕರಣವನ್ನು ಮುಚ್ಚಿಹಾಕುವ ಕೆಲಸ ನಡೆಯಬಾರದು. ಪಿಎಸ್‍ಐ ನೇಮಕಾತಿ ಮಾತ್ರವಲ್ಲ, ವಿಶ್ವವಿದ್ಯಾಲಯದ ನೇಮಕಾತಿಗಳಲ್ಲಿಯೂ ಭ್ರಷ್ಟಾಚಾರ ವ್ಯಾಪಕವಾಗಿದೆ. ಪಿಎಸ್‍ಐನಲ್ಲಿ 300 ಅಭ್ಯರ್ಥಿಗಳಿಂದ 30 ಲಕ್ಷ ರೂ.ಗಳಿಂದ 1 ಕೋಟಿ ರೂ.ವರೆಗೆ ಲಂಚ ಪಡೆದಿದ್ದಾರೆ. ಇದರ ಹಿಂದಿರುವ ಎಲ್ಲಾ ಭ್ರಷ್ಟರ ಹೆಸರು ಹೊರಬೇಕಾದರೆ ನ್ಯಾಯಾಂಗ ತನಿಖೆಯಿಂದ ಮಾತ್ರ ಸಾಧ್ಯ’ ಎಂದು ಟೀಕಿಸಿದ್ದಾರೆ.

‘ವರ್ಗಾವಣೆಗೆ ಹೋಟೆಲ್ ತಿಂಡಿಯ ಹಾಗೆ ಬೆಲೆ ನಿಗದಿ ಮಾಡಿದ್ದಾರೆ. ಎಸ್ಪಿಯಿಂದ ಹಿಡಿದು ಪೊಲೀಸ್ ಪೇದೆಗಳವರೆಗೆ ಒಂದೊಂದು ಬೆಲೆ ನಿಗದಿ ಮಾಡಿದ್ದಾರೆ. ವರ್ಗಾವಣೆಯಾದ 1 ವರ್ಷದಲ್ಲಿ ಎಷ್ಟಾದರೂ ಹಣ ಹೊಡೆಯಿರಿ ಎಂದು ಬಿಜೆಪಿ ಸರ್ಕಾರದವರು ಅವರಿಗೆ ಅವಕಾಶ ಕೊಟ್ಟಿದ್ದಾರೆ. 3 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ತನ್ನ ಸರ್ಕಾರದ ಸಾಧನೆ ಬಗ್ಗೆ ಮಾತನಾಡಬೇಕು. ಆದರೆ ಬಿಜೆಪಿ ನಾಯಕರು ಹಲಾಲ್, ಹಿಜಾಬ್, ಮೀನು-ಮಾಂಸ, ಸಾವರ್ಕರ್, ಜಾತಿ-ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ. ಇದು ತಮ್ಮ ವೈಫಲ್ಯವನ್ನು ಮುಚ್ಚಿಹಾಕಿ ಜನರ ಗಮನ ಬೇರೆಡೆ ಸೆಳೆಯುವ ಕುತಂತ್ರ’ವೆಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯನವರ ಕಿರಿಯ ಸಹೋದರ ಶ್ರೀ ರಾಮೇಗೌಡ ಇನ್ನಿಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News