ಬೆಂಗಳೂರು: ಬೆಂಗಳೂರಿನ ಹೃದಯ ಭಾಗದಲ್ಲಿರುವ ಅರಮನೆ ಮೈದಾನದಲ್ಲಿ ಸೋಮವಾರ ಬೆಳ್ಳಂಬೆಳಿಗ್ಗೆ ಸಾವಿರಾರು ಜನ ಜಮಾಯಿಸಿದ್ದರು. ಇವರೆಲ್ಲರೂ ಅಸ್ಸಾಂ, ತ್ರಿಪುರ ಮತ್ತಿತರ ಈಶಾನ್ಯ ರಾಜ್ಯಗಳ ವಲಸೆ ಕಾರ್ಮಿಕರು. ಇಂದು ಅಸ್ಸಾಂ ಮತ್ತು ತ್ರಿಪುರಕ್ಕೆ ವಿಶೇಷ ಶ್ರಮಿಕ್ ರೈಲು ಪ್ರಯಾಣಿಸುವುದರಿಂದ ಅರಮನೆ ಮೈದಾನದ ಬಳಿ ಜಮಾಯಿಸಿದ್ದರು.
ಅಸ್ಸಾಂ ಮತ್ತು ತ್ರಿಪುರಕ್ಕೆ ವಿಶೇಷ ಶ್ರಮಿಕ್ ರೈಲು ಹೊರಡುವುದು ಮಧ್ಯಾಹ್ನ ಎರಡು ಗಂಟೆಗೆ. ಆದರೀಗ ಲಾಕ್‌ಡೌನ್ (Lockdown) ಕಾರಣಕ್ಕೆ ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲ. ಆದುದರಿಂದ ಬೆಂಗಳೂರಿನ ಬೇರೆ ಬೇರೆ ಭಾಗದಲ್ಲಿದ್ದ ಕಾರ್ಮಿಕರು ರಾತ್ರಿ ಕಾಲ್ನಡಿಗೆಯಲ್ಲಿ ಅರಮನೆ ಮೈದಾನಕ್ಕೆ ಬಂದು ಜಮಾಯಿಸಿದ್ದಾರೆ.
ಬೆಂಗಳೂರಿನ ವಿವಿಧ ಕಡೆಗಳಿಂದ ಇಂದು ಒಟ್ಟು ಒಂಭತ್ತು ರೈಲುಗಳು ಹೊರಡಲಿವೆ. ಚಿಕ್ಕಬಾಣಾವರ ರೈಲ್ವೆ ನಿಲ್ದಾಣದಿಂದ ಮೂರು ರೈಲು, ಮಾಲೂರು ರೈಲ್ವೆ ನಿಲ್ದಾಣದಿಂದ ಮೂರು ರೈಲು ಮತ್ತು ವಸಂತನಗರದ ದಂಡು ರೈಲ್ವೆ ನಿಲ್ದಾಣದಿಂದ ಮೂರು ರೈಲುಗಳು ಹೊರಡಲಿವೆ. ವಸಂತನಗರದ ದಂಡು ರೈಲ್ವೆ ನಿಲ್ದಾಣದಿಂದ ಮೂರು ರೈಲುಗಳಿಗೆ ಹೊರಡುವ ಪ್ರಯಾಣಿಕರು ಅರಮನೆ ಮೈದಾನದ ಬಳಿ ಸೇರಿಕೊಂಡಿದ್ದಾರೆ.
ತಮ್ಮ ರಾಜ್ಯಗಳಿಗೆ, ಊರುಗಳಿಗೆ ಸೇರಿಕೊಂಡುಬಿಡಬೇಕು ಎಂದು ಆಸೆ ಇಟ್ಟುಕೊಂಡು ಅರಮನೆ ಮೈದಾನದ ಬಳಿ ಬಂದವರಲ್ಲಿ ಮೊದಲೇ 'ಸೇವಾ ಸಿಂಧು' ಆ್ಯಪ್ ನಲ್ಲಿ ಹೆಸರು ನೊಂದಾಯಿಸಿಕೊಂಡವರು ಹಾಗೂ ನೊಂದಾಣಿ ಮಾಡಿಕೊಂಡಿಲ್ಲದವರು ಇದ್ದಾರೆ. ವಲಸೆ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಕುಟುಂಬ ಸಮೇತರಾಗಿ ಅರಮನೆ ಮೈದಾನಕ್ಕೆ ಆಗಮಿಸಿದ್ದಾರೆ.
ಇವರೆಲ್ಲರೂ ಈಶಾನ್ಯ ರಾಜ್ಯಗಳಿಂದ ಬೆಂಗಳೂರಿಗೆ ಬಂದು ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದರು. ಅದೇ ರೀತಿ ಪಾನಿಪುರಿ, ಬಟ್ಟೆ, ಮತ್ತಿತರ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕೆಲವರು ಗಾರ್ಮೆಂಟ್ಸ್, ಟೈಲ್ಸ್, ಮಾರ್ಬಲ್ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದರು. ಕೆಲವರು ಕಟ್ಟಡ ಕಾರ್ಮಿಕರಾಗಿದ್ದರು.
ಲಾಕ್‌ಡೌನ್ ಕಾರಣಕ್ಕಾಗಿ ಈಗ ಕೈಯಲ್ಲಿ ಕೆಲಸ ಇಲ್ಲದೆ, ಜೊತೆಗೆ ಮುಂದೇನು ಎಂಬುದು ತಿಳಿಯದೆ ಸದ್ಯ ಹುಟ್ಟೂರು ಸೇರಿಕೊಂಡರೆ ಸಾಕೆಂದು ರೈಲು ಹಿಡಿಯಲು ಬಂದಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನ (Bangalore Palace Ground)ದಲ್ಲಿ ಏಕಕಾಲಕ್ಕೆ ಇಷ್ಟೊಂದು ಜನ ಬಂದಿರುವುದರಿಂದ ಕೆಲವೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವ ಪ್ರಸಂಗಗಳು ಕಾಣುತ್ತಿವೆ. ಸದ್ಯ ರೈಲು ಹೊರಡುವವರೆಗೆ ಇವರಿಗೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಆಹಾರ ಮತ್ತು ನೀರಿನ ವ್ಯವಸ್ಥೆಯನ್ನಾದರೂ ಮಾಡಬೇಕಾಗಿದೆ.