ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ ಸಾಧ್ಯತೆ

ಪೆಟ್ರೋಲ್, ಡೀಸೆಲ್ ದರವನ್ನು 2 ರಿಂದ 2.50 ರೂ. ನಷ್ಟು ಇಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

Last Updated : Sep 17, 2018, 08:02 AM IST
ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ ಸಾಧ್ಯತೆ title=

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ದರ ಕಡಿಮೆ ಮಾಡಲು ಪೂರಕವಾಗುವಂತೆ ತೆರಿಗೆ ಇಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಈ ಕುರಿತು ಸೋಮವಾರ ಆದೇಶ ಹೊರಬೀಳುವ ಸಾಧ್ಯತೆ ಇದೆ. ಪೆಟ್ರೋಲ್, ಡೀಸೆಲ್ ದರವನ್ನು 2 ರಿಂದ 2.50 ರೂ. ನಷ್ಟು ಇಳಿಸಬಹುದು ಎಂದು ನಿರೀಕ್ಷಿಸಲಾಗಿದೆ.

ದೇಶದಲ್ಲಿ ಗಗನಕ್ಕೇರುತ್ತಿರುವ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇಳಿಯುವ ಲಕ್ಷಣ ಕಾಣಿಸದೇ ಇರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸೆಸ್‌ ಕಡಿಮೆ ಮಾಡಿ ಇವುಗಳ ದರವನ್ನು 2ರಿಂದ 2.5 ರೂ.ನಷ್ಟು ಇಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇಳಿಸುವ ಕುರಿತು ಪರಿಶೀಲಿಸಿ ಪ್ರಸ್ತಾವನೆ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಅವರ ಸೂಚನೆಯಂತೆ ಹಣಕಾಸು ಇಲಾಖೆ ಅಧಿಕಾರಿಗಳು ದರ ಇಳಿಕೆ ಕುರಿತು ಚರ್ಚಿಸಿದ್ದು, ಮುಖ್ಯಮಂತ್ರಿಗಳೊಂದಿಗೆ ಇನ್ನೊಂದು ಸುತ್ತು ಮಾತುಕತೆ ನಡೆಸಿ ದರ ಇಳಿಕೆ ಆದೇಶ ಹೊರಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರ ರಚನೆಯಾದ ನಂತರ ಮಂಡಿಸಿದ ಬಜೆಟ್​ನಲ್ಲಿ, ರೈತರ ಸಾಲಮನ್ನಾ ಉದ್ದೇಶದಿಂದ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕ್ರಮವಾಗಿ 1.12 ರೂ. ಹಾಗೂ 1.14 ರೂ. ಸೆಸ್ ವಿಧಿಸಿದ್ದರು. ಆಗಲೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಈ ನಿರ್ಧಾರ ಇಂಧನ ಬೆಲೆ ದೇಶಾದ್ಯಂತ ಗಗನಕ್ಕೆ ಏರಿದ ಬಳಿಕ ಮತ್ತಷ್ಟು ಟೀಕೆಗೆ ಒಳಗಾಗಿತ್ತು. 

ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 84 ರೂ. ದಾಟಿದೆ. ಡೀಸೆಲ್ ದರ 75 ರೂ. ಆಗಿದೆ. ಇಂಧನ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಭಾರತ್ ಬಂದ್​ಗೆ ಕರೆ ನೀಡಿದಾಗ ಕೇಂದ್ರ ಸರ್ಕಾರವನ್ನು ಟೀಕಿಸಿದ್ದ ಕುಮಾರಸ್ವಾಮಿಯವರನ್ನು ಸೆಸ್ ವಿಚಾರ ಹಿಂಬಾಲಿಸಿತ್ತು. ಕೇಂದ್ರ ಸರ್ಕಾರವನ್ನು ಟೀಕಿಸುವ ಮೊದಲು ನಿಮ್ಮ ಸೆಸ್ ಕಡಿಮೆ ಮಾಡಿ ಎಂಬ ಮಾತು ಕೇಳಿಬಂದಿತ್ತು. ರಾಜ್ಯದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇಳಿಕೆ ಕುರಿತು ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಸಿಎಂ ಕುಮಾರಸ್ವಾಮಿ, ದರವನ್ನು 3 ರಿಂದ 4 ರೂ.ನಷ್ಟು ಇಳಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಿದ್ದರು. ಆದರೆ, ಅಷ್ಟು ಪ್ರಮಾಣದಲ್ಲಿ ಸೆಸ್‌ ಕಡಿಮೆ ಮಾಡಿದರೆ ರಾಜ್ಯದ ಅರ್ಥ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಅದರ ಬದಲು ಸಾಲ ಮನ್ನಾ ಕಾರಣಕ್ಕಾಗಿ ಬಜೆಟ್‌ನಲ್ಲಿ ಹೆಚ್ಚಿಸಿದ್ದ ಶೇ. 2ರಷ್ಟು ಸೆಸ್‌ ಕೈಬಿಡಬಹುದು ಎಂದು ಅಧಿಕಾರಿಗಳು ಸಲಹೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ  ಸಾಲ ಮನ್ನಾ, ಪ್ರಕೃತಿ ವಿಕೋಪದಿಂದ ಆಗುವ ಹೊರೆ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಆರ್ಥಿಕ ಪರಿಸ್ಥಿತಿ ಮೇಲೆ ಪ್ರತೀಕೂಲ ಪರಿಣಾಮ ಬೀರದಂತೆ ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ಪ್ರತಿ ಲೀಟರಿಗೆ 2 ರಿಂದ 2.50 ರೂ.ನಷ್ಟು ಇಳಿಸಲು ಆರ್ಥಿಕ ಇಲಾಖೆ ತಾತ್ವಿಕ ಒಪ್ಪಿಗೆ ನೀಡಿದೆ. ಈ ಬಗ್ಗೆ ಇಂದು ಸಂಜೆ ಅಥವಾ ನಾಳೆಯೊಳಗೆ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ.

Trending News