ಮೈಸೂರು ನಗರ ಪ್ರಗತಿಗೆ ನೀಲಿನಕ್ಷೆ ತಯಾರಿಸಿ: ಹೆಚ್.ಡಿ.ಕುಮಾರಸ್ವಾಮಿ

ವಸತಿ ರಹಿತ ಕುಟುಂಬಗಳ ಬಗ್ಗೆ ವಿವರವಾದ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವಿವರ ಸಲ್ಲಿಸಬೇಕು. ಜಿಲ್ಲೆಯಲ್ಲಿ ಪ್ರತಿಯೊಂದು ಕುಟುಂಬಕ್ಕೂ ಸೂರು ಸಿಗುವಂತೆ ನೋಡಿಕೊಳ್ಳಬೇಕು.

Last Updated : Sep 12, 2018, 09:52 AM IST
ಮೈಸೂರು ನಗರ ಪ್ರಗತಿಗೆ ನೀಲಿನಕ್ಷೆ ತಯಾರಿಸಿ: ಹೆಚ್.ಡಿ.ಕುಮಾರಸ್ವಾಮಿ title=
File Photo

ಮೈಸೂರು: ಮೈಸೂರು ನಗರ ಪಾರಂಪರಿಕ ನಗರವಾಗಿದ್ದು, ನಗರದ ಅಭಿವೃದ್ಧಿಗಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು ನಗರಪಾಲಿಕೆ ಹಾಗೂ ಜಿಲ್ಲಾಡಳಿತ ಮೈಸೂರು ನಗರದ  ಪ್ರಗತಿ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದಂತೆ ನೀಲಿನಕ್ಷೆ ತಯಾರಿಸಿ ಸಲ್ಲಿಸುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಮಂಗಳವಾರ(ಸೆ.11) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಮೈಸೂರು ನಗರದಲ್ಲಿ 2-3 ವರ್ಷಗಳಿಂದ ಮಳೆಗಾಲದಲ್ಲಿ ಉಂಟಾಗುವ ತೊಂದರೆಗಳ ಬಗ್ಗೆ  ಪಟ್ಟಿ ಮಾಡಿಕೊಂಡು ಸರಿಪಡಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

ಚಾಮರಾಜನಗರ, ಮೈಸೂರು, ಹಾಸನ, ಕೊಡಗು ಜಿಲ್ಲೆಗಳಿಂದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ದೊರೆಯುತ್ತದೆ ಎಂದು ಮೈಸೂರಿಗೆ ಬರುತ್ತಾರೆ. ಇಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಬರುವುದರಿಂದ ವಸತಿನಿಲಯದ ಕೊರತೆ ಉಂಟಾಗುತ್ತದೆ. ಆದರಿಂದ ಮೈಸೂರು ಜಿಲ್ಲೆಗೆ ಹೆಚ್ಚಿನ ವಸತಿನಿಲಯಕ್ಕೆ ಅವಶ್ಯಕತೆ ಇದೆ. ಅಧಿಕಾರಿಗಳು ಮೈಸೂರು ಜಿಲ್ಲೆಯಲ್ಲಿ ಅವಶ್ಯಕವಾಗಿರುವ ವಸತಿನಿಲಯಗಳನ್ನು ಪಟ್ಟಿ ಮಾಡಿ ಪ್ರಸ್ತಾವನೆ ಸಲ್ಲಿಸಿ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿ.ಎ ನಿವೇಶನಗಳನ್ನು ಗುರುತಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಪ್ರತಿ ಕುಟುಂಬಕ್ಕೂ ಸೂರು:
ವಸತಿ ರಹಿತ ಕುಟುಂಬಗಳ ಬಗ್ಗೆ ವಿವರವಾದ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವಿವರ ಸಲ್ಲಿಸಬೇಕು. ಜಿಲ್ಲೆಯಲ್ಲಿ ಪ್ರತಿಯೊಂದು ಕುಟುಂಬಕ್ಕೂ ಸೂರು ಸಿಗುವಂತೆ ನೋಡಿಕೊಳ್ಳಬೇಕು, ಸಮೀಕ್ಷೆಯಲ್ಲಿ ಯಾವುದೇ ಲೋಪವಾಗದಂತೆ ಕ್ರಮವಹಿಸುವಂತೆ ಕುಮಾರಸ್ವಾಮಿ ತಿಳಿಸಿದರು.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 62,667 ಮನೆ ರಹಿತ ಕುಟುಂಬಗಳು ಇವೆ. ಈ ಪೈಕಿ 40,876  ಕುಟುಂಬಗಳಿಗೆ ನಿವೇಶನ ಇರುವುದಿಲ್ಲ. ಇವರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ, ಬಸವ ವಸತಿ ಯೋಜನೆ  ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿ ಮನೆ ನಿರ್ಮಿಸಿ ಕೊಡುವಂತೆ ತಿಳಿಸಿದರು.

ಉತ್ತಮ ವೈದ್ಯಕೀಯ ಸೌಲಭ್ಯ:
ಕೆ.ಆರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಡವರು ಹಾಗೂ ಗ್ರಾಮೀಣರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇವರಿಗೆ ಉತ್ತಮ ಸೇವೆ ದೊರಕಬೇಕು. ಇಲ್ಲಿ ಇರುವ ವೈದ್ಯರ ಕೊರತೆ ಹಾಗೂ ಬೇಕಿರುವ ಮೂಲಭೂತ ವ್ಯವಸ್ಥೆಯ ಬಗ್ಗೆ ಚರ್ಚಿಸಲು ಮುಂದಿನ ಬಾರಿ ಮೈಸೂರು ಜಿಲ್ಲೆಗೆ ಆಗಮಿಸಿದಾಗ ಅಧಿಕಾರಿಗಳ ಸಭೆ ನಡೆಸಿ ವಾಸ್ತವತೆ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಮೈಸೂರು ಜಿಲ್ಲೆಯಲ್ಲಿ 2018 ರ ಏಪ್ರಿಲ್‍ನಿಂದ ಒಟ್ಟು 15 ಪ್ರಾಣಿಗಳ ಹಾನಿಯಾಗಿದೆ. ಇದಕ್ಕೆ 4.3 ಲಕ್ಷ ರೂಗಳ ಪರಿಹಾರ ವಿತರಣೆ ಮಾಡಲಾಗಿದೆ. ಆಗಸ್ಟ್ ನಲ್ಲಿ ಸುರಿದ ಭಾರಿ ಮಳೆ/ಪ್ರವಾಹದಿಂದ ಮಾನವ ಹಾನಿ ಆಗಿರುವುದಿಲ್ಲ. ಇತರೆ ಸಂದರ್ಭಗಳಲ್ಲಿ ಸುರಿದ ಮಳೆಗೆ ಒಟ್ಟು ಜಿಲ್ಲೆಯಲ್ಲಿ ಕಳೆದ ಏಪ್ರಿಲ್‍ನಿಂದ 3 ಮಾನವ ಹಾನಿಯಾಗಿದ್ದು, ರೂ. 15.00 ಲಕ್ಷ ಪರಿಹಾರ ಒದಗಿಸಲಾಗಿದೆ. 

ಮೈಸೂರು ಜಿಲ್ಲೆಯಲ್ಲಿ ಮಳೆ/ಪ್ರವಾಹ ವಿಕೋಪದಿಂದ ಒಟ್ಟು 734 ಮನೆಗಳಿಗೆ ಧಕ್ಕೆಯಾಗಿದ್ದು, ರೂ. 139.53 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಸಭೆಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ  ಹಾಗೂ ರೇಷ್ಮೆ ಸಚಿವರಾದ ಸಾ.ರಾ.ಮಹೇಶ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Trending News